ಹೊಸದಿಲ್ಲಿ : ತುರ್ತು ನಿರ್ಗಮನ ದ್ವಾರ ಕಿರಿದಾಗಿದ್ದುದು ಮತ್ತು ಲಾಕ್ ಆಗಿದ್ದ ಆಗಿದ್ದ ಕಾರಣ ಕರೋಲ್ ಬಾಗ್‌ನ ಅರ್ಪಿತ್ ಪ್ಯಾಲೇಸ್ ಹೊಟೇಲ್‌ನಲ್ಲಿ ಅಗ್ನಿ ದುರಂತದಲ್ಲಿ 17 ಮಂದಿ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆಯ ರಾಜ್ಯ ಸಚಿವ ಕೆ.ಜೆ.ಅಲ್ಫಾನ್ಸ್ ಹೇಳಿಕೆ ನೀಡಿದ್ದಾರೆ.
ದುರಂತ ನಡೆದ ದಿಲ್ಲಿಯ ಹೊಟೇಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅಲ್ಫಾನ್ಸ್ ಹೊಟೇಲ್‌ನ ಕೊಠಡಿಗಳಲ್ಲಿ ಮರದ ಪಿಠೊಪಕರಣಗಳು ಹೆಚ್ಚಾಗಿ ಇದ್ದುದರಿಂದ ಬೆಂಕಿ ವ್ಯಾಪಿಸಿಕೊಂಡಿದೆ ಎಂದರು.
ನಾನು ತುರ್ತು ನಿರ್ಗಮನ ದ್ವಾರದ ಬಳಿ ತೆರಳಿ ಪರಿಶೀಲನೆ ನಡೆಸಿದೆ. ಅದು ಕಿರಿದಾಗಿತ್ತು ಮತ್ತು ನಿನ್ನೆ ಲಾಕ್ ಆಗಿ ಇತ್ತು.ಜನರಿಗೆ ತುರ್ತಾಗಿ ಹೊರ ಹೋಗಲು ಸಾಧ್ಯವಾಗದೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಮೃತರ ಕುಟುಂಬಗಳಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಈಗಾಗಲೇ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 304 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
13 ಮೃತ ದೇಹಗಳ ಗುರುತು ಪತ್ತೆ ಹಚ್ಚಲಾಗಿದ್ದು, ಮೂವರು ಕೇರಳದವರು, ಒರ್ವ ಗುಜರಾತ್ ಮತ್ತು ಇಬ್ಬರು ಮ್ಯಾನ್ಮಾರ್ ದೇಶದವರು ಎಂದು ತಿಳಿದು ಬಂದಿದೆ.
ಹಲವರು ಆಮ್ಲಜನಕದ ಕೊರತೆ ಉಂಟಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಗ್ನಿ ಶಾಮಕ ದಳದ ಸಿಬಂದಿಗಳು ತಿಳಿಸಿದ್ದಾರೆ.