ಕ್ರೈಸ್ಟ್ ಚರ್ಚ್ (ನ್ಯೂಜಿಲೆಂಡ್): ಇಲ್ಲಿನ ಕ್ಯಾಂಟರ್ಬರಿ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಭಾನುವಾರ(ಮೇ 30) ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಭಾರೀ ಮಳೆಯ ಪರಿಣಾಮ ಪ್ರವಾಹ ಸೃಷ್ಟಿಯಾಗಿದ್ದು, ನೂರಾರು ಮಂದಿ ಮನೆಯನ್ನು ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸೋಂಕು ಹರಡಲು ಕಾರಣವಾಗುತ್ತಿದೆಯೇ ಚಿಕ್ಕಮಗಳೂರು ಜಿಲ್ಲಾ ಕೋವಿಡ್ ಆಸ್ಪತ್ರೆ?
ಭಾರೀ ಮಳೆ ಮತ್ತು ನೀರು ತುಂಬಿರುವ ಪ್ರದೇಶಗಳಿಗೆ ತುರ್ತು ಸ್ಥಿತಿ ನಿರ್ವಹಣಾ ಸಚಿವ ಕ್ರಿಸ್ ಫಾಪೊಯ್ ಸ್ಥಳಕ್ಕೆ ಭೇಟಿ ನೀಡಿದ್ದು, ಸುಮಾರು ಮೂರು ಸಾವಿರ ಮನೆಗಳು ಅಪಾಯದಲ್ಲಿದೆ ಮತ್ತು ಒಂದು ವೇಳೆ ಅಗತ್ಯವಿದ್ದರೆ ಜನರನ್ನು ಸ್ಥಳಾಂತರಿಸಲು ಸೇನೆಯನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ನ್ಯೂಜಿಲೆಂಡ್ ನಲ್ಲಿ ಸೋಮವಾರ ಸಂಜೆಯವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ನದಿಗಳ ಮಟ್ಟವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ತುರ್ತುಪರಿಸ್ಥಿತಿಯನ್ನು ಘೋಷಿಸಿರುವುದಾಗಿ ವರದಿ ಹೇಳಿದೆ.
ಕ್ಯಾಂಟರ್ಬರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಸುಮಾರು 300 ಮಿಲಿ ಮೀಟರ್ ನಷ್ಟು ಮಳೆ ಸುರಿಯುವ ಸಾಧ್ಯತೆ ಇದ್ದಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಒಂದು ವೇಳೆ ಆಶ್ ಬರ್ಟನ್ ನದಿಯ ನೀರಿನ ಮಟ್ಟ ಹೆಚ್ಚಾಗಿ ಹೊರಗೆ ಬಂದಲ್ಲಿ ಸುಮಾರು 4,000 ಜನರನ್ನು ಸ್ಥಳಾಂತರಿಸಬೇಕಾಗಲಿದೆ ಎಂದು ಮೇಯರ್ ನೀಲ್ ಬ್ರೌನ್ ತಿಳಿಸಿದ್ದಾರೆ.