ಮಂಗಳೂರು: ಗಂಭೀರ ಸಮಸ್ಯೆ ಹಾಗೂ ತುರ್ತು ಸಂದರ್ಭಗಳಲ್ಲಿ ಮೆಸ್ಕಾಂಗೆ ತ್ವರಿತ ಮಾಹಿತಿ ಹಾಗೂ ದೂರು ನೀಡಲು ಎರಡು ಹೊಸ ತುರ್ತು ದೂರವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ.
ಸಾರ್ವಜನಿಕರು ತಮ್ಮ ದೂರು ನೀಡಲು 8277883388, 0824 2950953 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಸಾರ್ವಜನಿಕರು ಇವುಗಳನ್ನು ಗಂಭೀರ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಉಳಿದಂತೆ ಇನ್ನಿತರ ಮೆಸ್ಕಾಂ ಸೇವೆಗಳಿಗಾಗಿ ಇಲಾಖೆಯ ಉಚಿತ ಸಹಾಯವಾಣಿ 1912 ಹಾಗೂ ಇಲಾಖೆ ಈಗಾಗಲೇ ವ್ಯವಸ್ಥೆಗೊಳಿಸಿರುವ ಸ್ಥಳೀಯ ಕಚೇರಿಯ ದೂರವಾಣಿ ಸಂಖ್ಯೆಗಳನ್ನು ಬಳಸಿಕೊಳ್ಳಬೇಕು ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿಥಿಲ ತಂತಿ, ಕಂಬಗಳ ಬದಲಾವಣೆಗೆ ವಿಶೇಷ ಆದ್ಯತೆ ಮೆಸ್ಕಾಂ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ತಂತಿ, ಕಂಬಗಳನ್ನು ಪರಿಶೀಲಿಸಿ ಅವುಗಳನ್ನು ಬದಲಾಯಿಸುವ ಕಾರ್ಯ ಆದ್ಯತೆ ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕ ಸುರಕ್ಷೆ ದೃಷ್ಟಿಯಿಂದ ಗರಿಷ್ಠ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮಳೆ-ಗಾಳಿಯಿಂದಾಗಿ ಪ್ರಸಕ್ತ ವರ್ಷದಲ್ಲಿ ಮೆಸ್ಕಾಂನ ಆಸ್ತಿಗಳಿಗೆ ಹಾನಿಯುಂಟಾಗಿ ಅಪಾರ ನಷ್ಟ ಸಂಭವಿಸಿದೆ. ವಿದ್ಯುತ್ ತಂತಿ, ಕಂಬಗಳ ಬದಲಾವಣೆಗೆ ಅಪಾರ ವೆಚ್ಚ ತಗಲುತ್ತಿದೆ. ಮೆಸ್ಕಾಂ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಿ ತತ್‌ಕ್ಷಣ ಸರಿಪಡಿಸಲು ಕ್ರಮ ಕೈಗೊಳ್ಳುತ್ತಿದೆ.
ಒಂದೊಮ್ಮೆ ಶಿಥಿಲ ತಂತಿ, ಕಂಬಗಳು, ದೋಷಪೂರಿತ ವಿದ್ಯುತ್ ಪರಿವರ್ತಕಗಳು ಇಲಾಖೆಯ ಗಮನಕ್ಕೆ ಬಾರದೆ ಉಳಿದುಕೊಂಡಿದ್ದಲ್ಲಿ, ಸಾರ್ವಜನಿಕರು ಇದನ್ನು ಸ್ಥಳೀಯ ಮೆಸ್ಕಾಂ ಸಿಬಂದಿ ಗಮನಕ್ಕೆ ತಂದ ಬಳಿಕವೂ ಸ್ಪಂದನೆ ದೊರೆಯದಿದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.