ಹುಣಸೂರು: ದೇಶದಲ್ಲಿ ಶಿಶು ಮತ್ತು ಬಾಣಂತಿ ಮರಣ ಪ್ರಮಾಣ ಇಳಿಕೆಗೆ ಕೇಂದ್ರದ ಮಾತೃ ವಂದನಾ ಯೋಜನೆಯಡಿ ಅಂಗನವಾಡಿ-ಆಶಾ ಕಾರ್ಯಕರ್ತೆಯರು ಪ್ರಾಮಾಣಿಕ ಕೆಲಸ ಮಾಡಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರಾಧಾ ಸೂಚಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ಮಾತೃ ವಂದನಾ ಕಾರ್ಯಕ್ರಮ ಅನುಷ್ಠಾನ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯವಂತ ತಾಯಿಯಿಂದ ಮಾತ್ರ ಆರೋಗ್ಯವಂತ ಶಿಶು ಜನಿಸಲು ಸಾಧ್ಯ. ಈ ನಿಟ್ಟಿನಲ್ಲಿ ಗರ್ಭಿಣಿಯರ ಆರೋಗ್ಯ ರಕ್ಷಣೆಗೆ ಪೂರಕ ಯೋಜನೆಯನ್ನು ಸಾಕಾರಗೊಳಿಸಲು ಶ್ರಮ ಹಾಕಬೇಕೆಂದರು.
ಅಂಗನವಾಡಿ ಕೇಂದ್ರಗಳನ್ನು ಬಾಲಸ್ನೇಹಿಯಾಗಿಸಲು ಕೇಂದ್ರಗಳಿಗೆ ಬಣ್ಣ ತುಂಬುವ, ಚಿತ್ರ ಬಿಡಿಸುವ, ಸಮವಸ್ತ್ರ, ಪೀಠೊಪಕರಣ ವ್ಯವಸ್ಥೆ ಕಲ್ಪಿಸಬೇಕು. ಪೂರ್ವ ಶಾಲಾ ಕಾರ್ಯಕ್ರಮಕ್ಕೆ ನಿತ್ಯ ಒಂದೂವರೆ ಗಂಟೆ ಮೀಸಲಿಡಬೇಕು, ಇದರ ಪರಿಶೀಲನೆಗೆ ಬರುವ ಪ್ರಥಮ್ ಸಂಸ್ಥೆಗೆ ಸೂಕ್ತ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಗರ್ಭಿಣಿಯರಿಗೆ ಆರ್ಥಿಕ ನೆರವು: ಮಾತೃವಂದನಾ ಕಾರ್ಯಕ್ರಮ ಅನುಷ್ಠಾನ ಕುರಿತು ಜಿಲ್ಲಾ ಗ್ರಾಮಾಂತರ ಎಸಿಡಿಪಿಒ ಡಾ.ಕೃಷ್ಣಕುಮಾರಿ ಮಾಹಿತಿ ನೀಡಿ, ಈ ಯೋಜನೆಯಡಿ ಗರ್ಭಿಣಿಯರಿಗೆ ಮೂರು ಕಂತಿನಲ್ಲಿ ಒಟ್ಟು 5 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತದೆ.
ಗರ್ಭಿಣಿಯರು ತಾಯಿಕಾರ್ಡ್‌ಗೆ ಹೆಸರು ನೋಂದಾಯಿಸುವ ವೇಳೆ 1 ಸಾವಿರ, ಎಲ್‌ಎಂಪಿ ಆದಂದಿನಿಂದ 180 ದಿನಗಳೊಳಗೆ ಎರಡನೇ ಕಂತಿನ 2 ಸಾವಿರ ಹಾಗೂ ನವಜಾತ ಶಿಶುವಿನ ಜನನ ಪ್ರಮಾಣಪತ್ರ ಹಾಗೂ ಮೂರು ಮುಖ್ಯ ಲಸಿಕೆ ಹಾಕಿದ ಬಳಿಕ ಮೂರನೇ ಕಂತು 2 ಸಾವಿರ ರೂ. ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಎಪಿಎಲ್, ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ ಮೊದಲನೆಯ ಮಗುವಿಗೆ ಮಾತ್ರ ಯೋಜನೆ ಸೌಲಭ್ಯ ಸಿಗಲಿದೆಯೆಂದರು. ಸಭೆಯಲ್ಲಿ ಡಾ.ಪಲ್ಲವಿ, ಸಿಡಿಪಿಒ ಯು.ನವೀನ್‌ಕುಮಾರ್, ಎಸಿಡಿಪಿಒ ವೆಂಕಟಪ್ಪ, ಮೇಲ್ವಿಚಾರಕಿಯರಾದ ಶೋಭಾ, ಸುಮಂಗಲ ಇತರರಿದ್ದರು.