ಹಾವೇರಿ: ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದು, ಜಿಲ್ಲೆಯ ಬಹುವರ್ಷಗಳ ಬೇಡಿಕೆ ಈಡೇರುವ ಆಸೆ ಚಿಗುರೊಡೆದಿದೆ.
ಜಿಲ್ಲೆಗೆ ಏಳೆಂಟು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ವೈದ್ಯಕೀಯ ಕಾಲೇಜು ಘೋಷಣೆ ಮಾಡಿತ್ತು. ಆಗ ಬಿಜೆಪಿ ಸರ್ಕಾರವಿತ್ತು. ಕೊನೆಗೆ ಈ ಭರವಸೆ ಘೋಷಣೆಗೆ ಸೀಮಿತವಾಗಿಯೇ ಉಳಿಯಿತು. ಅದಕ್ಕೆ ಬೇಕಾದ ಅನುದಾನ ಕೊಡಲಿಲ್ಲ. ಮುಂದೆ ಸರ್ಕಾರ ಬದಲಾಗಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರು ಸಹ ತಮ್ಮ ಬಜೆಟ್‌ನಲ್ಲಿ ಜಿಲ್ಲೆಗೆ ಮತ್ತೆ ವೈದ್ಯಕೀಯ ಕಾಲೇಜು ಘೋಷಿಸಿದರು. ಎರಡನೇ ಬಾರಿ ಕಾಲೇಜು ಘೋಷಣೆ ಬಳಿಕವೂ ಆರ್ಥಿಕ ಇಲಾಖೆ ಅನುಮೋದನೆ ಸಿಗದೆ ಕಾಲೇಜು ಸ್ಥಾಪನೆಗೆ ಅನುದಾನ ಬಿಡುಗಡೆಯೇ ಆಗಿಲ್ಲ. ಪ್ರತಿ ಬಜೆಟ್‌ನಲ್ಲಿಯೂ ಜಿಲ್ಲೆಯ ಜನ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುದಾನ ಸಿಗಬಹುದು ಎಂದು ನಿರೀಕ್ಷಿಸುತ್ತಲೇ ಬರುತ್ತಿದ್ದರು. ಆದರೆ, ಏಳೆಂಟು ವರ್ಷಗಳಿಂದ ನಿರೀಕ್ಷೆಗಳೆಲ್ಲ ಹುಸಿಯಾಗುತ್ತಲೇ ಇತ್ತು. ಇನ್ನು ಕಳೆದ ಲೋಕಸಭೆ ಚುನಾವಣೆಯ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಮೀರ್ ಅಹ್ಮದ್ ಅವರು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜನ್ನು ತಾತ್ಕಾಲಿಕವಾಗಿ ಸ್ಥಾಪಿಸಲು ಉನ್ನತ ಶಿಕ್ಷಣಇಲಾಖೆಯಿಂದ ಐದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಹ ಹೇಳಿದ್ದರು. ಆದರೆ, ವಾಸ್ತವದಲ್ಲಿಯ ಯಾವ ಇಲಾಖೆಯಿಂದ ಒಂದು ಪೈಸೆಯೂ ಬಿಡಗಡೆಯಾಗದೆ ವೈದ್ಯಕೀಯ ಕಾಲೇಜು ಆರಂಭ ಕನಸು ಕನಸಾಗಿಯೇ ಉಳಿದಿತ್ತು.
ಪ್ರಚಾರ ಸಾಮಗ್ರಿ: ವೈದ್ಯಕೀಯ ಕಾಲೇಜು ಸ್ಥಾಪನೆವಿಚಾರವನ್ನು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರಚಾರದ ಪ್ರಮುಖ ಅಂಶವನ್ನಾಗಿಕೊಂಡಿದ್ದರು. ಈಗ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ವೈದ್ಯಕೀಯ ಕಾಲೇಜು ಕನಸು ಚಿಗುರೊಡೆದಿತ್ತು. ಪ್ರಥಮ ಬಾರಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಘೋಷಿಸಿದ್ದೇ ಬಿಜೆಪಿ ಸರ್ಕಾರ. ಹೀಗಾಗಿ ಬಿಜೆಪಿ ಸರ್ಕಾರ ಈಗ ಕಾಲೇಜು ಸ್ಥಾಪನೆಗೆ ಮುತುವರ್ಜಿವಹಿಸಬಹುದು ಎಂದು ಜನತೆ ನಿರೀಕ್ಷಿಸಿತ್ತು.ಈಗ ಆ ನಿರೀಕ್ಷೆ ಸಾಕಾರಗೊಳ್ಳುತ್ತಿದ್ದು ಕೇಂದ್ರ ಸರ್ಕಾರ 195ಕೋಟಿ ಬಿಡುಗಡೆಗೆ ಒಪ್ಪಿದ್ದು ಉಳಿದ ಹಣ ಬಿಡುಗಡೆಗೆ ರಾಜ್ಯ ಸರ್ಕಾರವೂ ಸಮ್ಮಿತಿಸಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದಲೇ ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡುವ ಭರವಸೆ ಮೂಡಿದೆ.
ಸ್ಥಳ ಗೊಂದಲ ಬೇಡ: ಜಿಲ್ಲೆಗೆ ವೈದ್ಯಕೀಯ ಕಾಲೇಜು ಸ್ಥಾಪನೆಯಾಗುವುದು ಖಚಿತ ಎಂಬುದುಗೊತ್ತಾಗುತ್ತಿದ್ದಂತೆ ಜಿಲ್ಲೆಯ ವಿವಿಧ ಭಾಗಗಳ ಜನರು ವೈದ್ಯಕೀಯ ಕಾಲೇಜನ್ನು ತಮ್ಮ ಭಾಗದಲ್ಲಿ ಸ್ಥಾಪಿಸಿ ಎಂಬ ಬೇಡಿಕೆ ಮಂಡಿಸುತ್ತಿದ್ದಾರೆ. ಇನ್ನು ಕೆಲವರು ಈಗಾಗಲೇ ಜಿಲ್ಲಾ ಧಿಕಾರಿಯವರಿಗೆ ಈ ಕುರಿತು ಮನವಿಯನ್ನೂ ಸಲ್ಲಿಸಿದ್ದಾರೆ. ಮೊದಲು ವೈದ್ಯಕೀಯ ಕಾಲೇಜಿಗಾಗಿ ಜಿಲ್ಲಾಡಳಿತ ಭವನ, ಇಂಜಿನಿಯರಿಂಗ್
ಕಾಲೇಜು ಇರುವ ದೇವಗಿರಿಯಲ್ಲಿ ಸ್ಥಳ ಗುರುತಿಸಲಾಗಿತ್ತು. ಈಗ ನಲೋಗಲ್ಲ ಭಾಗದ ಜನರು ತಮ್ಮ ಊರಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಮನವಿ ಮಾಡಿದ್ದರು. ಜಿಲ್ಲಾ ಧಿಕಾರಿಯವರಿಗೆ ಆ ಸ್ಥಳವನ್ನೂ ವೀಕ್ಷಿಸಿ ಬಂದಿದ್ದಾರೆ.
ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್‌ನ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಜಿಲ್ಲೆಗೆ ಒದಗಿಬಂದಾಗ ಸ್ಥಳಗೊಂದಲ ಸೃಷ್ಟಿಯಾಗಿ ಅದು ಮರಳಿ ಬೇರೆ ಕಡೆ ಹೋಗಿತ್ತು. ಈಗ ವೈದ್ಯಕೀಯಕಾಲೇಜು ವಿಚಾರದಲ್ಲಿಯೂ ಸ್ಥಳ ಗೊಂದಲ ಸೃಷ್ಟಿಯಾಗಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರ ಕಗ್ಗಂಟುಗೊಳಿಸಬಾರದು ಎಂಬುದು ಪ್ರಜ್ಞಾವಂತರ ಅಪೇಕ್ಷೆಯಾಗಿದೆ.
-ಎಚ್.ಕೆ. ನಟರಾಜ