ಅಂಕಾರಾ: ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನದ ಪರ ಬ್ಯಾಟಿಂಗ್ ಮಾಡಿದ ಟರ್ಕಿ ವಿರುದ್ಧ ಭಾರತ ಈಗ ಒಂದೊಂದೇ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಇದೀಗ ಭಾರತದ ದೂತವಾಸ ಭಾರತೀಯ ಪ್ರವಾಸಿಗರಿಗೆ ಎಚ್ಚರಿಕೆ ಸೂಚನೆಯನ್ನು ರವಾನಿಸಿದೆ. ಟರ್ಕಿಗೆ ಆಗಮಿಸುವ ಭಾರತೀಯ ಪ್ರವಾಸಿಗರಿಗೆ ಈ ಸೂಚನೆಯನ್ನು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ಟರ್ಕಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿದ್ದರೂ, ಭಾರತೀಯರು ಎಚ್ಚರವಾಗಿರಬೇಕೆಂದು ಹೇಳಲಾಗಿದೆ. ಅಲ್ಲದೇ ಹೆಚ್ಚಿನ ನೆರವು ಬೇಕಾದಲ್ಲಿ ಭಾರತೀಯ ದೂತವಾಸವನ್ನು ಸಂಪರ್ಕಿಸುವಂತೆ ಹೇಳಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಟರ್ಕಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದ್ದು ಆದಾಯವೂ ಹೆಚ್ಚಿದೆ. ಶೇ.56ರಷ್ಟು ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಕಳೆದ ಜನವರಿಯಿಂದ ಜುಲೈ ಅವಧಿಯಲ್ಲಿ 1.30 ಲಕ್ಷ ಭಾರತೀಯರು ಟರ್ಕಿಗೆ ಭೇಟಿ ನೀಡಿದ್ದಾರೆ.
ಟರ್ಕಿ ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನ ಬೆಂಬಲಿಸಿ ಮಾತನಾಡಿದ ಬಳಿಕ ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಹದಗೆಟ್ಟಿದೆ. ಭಾರತ ಈ ಕಾರಣದಿಂದ ಟರ್ಕಿ ವಿರುದ್ಧ ರಾಜತಾಂತ್ರಿಕ ಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಇತ್ತೀಚೆಗೆ 1 ಸಾವಿರ ಕೋಟಿ ರೂ. ಮೊತ್ತದ ಯುದ್ಧ ಹಡಗು ನಿರ್ಮಾಣ ಕುರಿತ ಗುತ್ತಿಗೆಯನ್ನು ಟರ್ಕಿ ಕಂಪೆನಿಗೆ ಕೊಡದಿರಲು ತೀರ್ಮಾನಿಸಲಾಗಿದೆ ಎಂದೂ ಹೇಳಲಾಗಿತ್ತು.