Advertisement

Prajwal Revanna ಪದೇಪದೆ ಪುರುಷತ್ವ ಪರೀಕ್ಷೆಯಿಂದ ಮುಜುಗರ; ನ್ಯಾಯಾಧೀಶರ ಮುಂದೆ ಅಲವತ್ತು

12:18 AM Jun 19, 2024 | Team Udayavani |

ಬೆಂಗಳೂರು: ಈಗಾಗಲೇ ಎರಡು ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆಗೆ ಒಳಪಟ್ಟಿದ್ದೇನೆ. ಪದೇಪದೆ ಅದೇ ಪರೀಕ್ಷೆ ನಡೆಸಲು ನನಗೂ ಮುಜುಗರವಾಗುತ್ತಿದೆ. ನನ್ನನ್ನು ಮುಜುಗರಕ್ಕೀಡು ಮಾಡಲೆಂದೇ ಇದನ್ನು ಮಾಡುತ್ತಿರುವಂತೆ ಕಾಣುತ್ತಿದೆ ಎಂದು ನ್ಯಾಯಾಧೀಶರ ಮುಂದೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅಲವತ್ತುಕೊಂಡಿದ್ದಾರೆ.

Advertisement

ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಪ್ರಜ್ವಲ್‌ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಅವಧಿ ಮಂಗಳವಾರಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾ ಲಯವು ಪ್ರಜ್ವಲ್‌ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ವಿಚಾರಣೆ ವೇಳೆ ಪ್ರಜ್ವಲ್‌ ನ್ಯಾಯಾಧೀಶರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಪ್ರಸಂಗವೂ ನಡೆಯಿತು.

ಈಗಾಗಲೇ 2 ಪ್ರಕರಣಗಳಲ್ಲಿ ನನ್ನನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸಿದ್ದಾರೆ. ಪದೇಪದೆ ಖಾಸಗಿ ಅಂಗ ತೋರಿಸಿ, ಅದೇ ಪರೀಕ್ಷೆ ಮಾಡಿಸಿಕೊಳ್ಳಲು ಮುಜುಗರ ವಾಗುತ್ತದೆ. ಎಸ್‌ಐಟಿ ಅಧಿಕಾರಿಗಳು ನನಗೆ ಮುಜುಗರ ಉಂಟು ಮಾಡಲೆಂದೇ ಎರಡೆರಡು ಬಾರಿ ಪುರುಷತ್ವ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ. ಮುಂದೆ ಈ ರೀತಿ ಮಾಡದಂತೆ ನ್ಯಾಯಾಲಯದ ಮುಂದೆ ಪ್ರಜ್ವಲ್‌ ಮನವಿ ಮಾಡಿದರು. ಇದನ್ನು ಆಲಿಸಿದ ಬಳಿಕ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾತ್ರ ಮಾಡಿಸುವಂತೆ ನ್ಯಾಯಾಧೀಶರು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಪರಪ್ಪನ ಅಗ್ರಹಾರ ಜೈಲಿಗೆ ಪ್ರಜ್ವಲ್‌
ನ್ಯಾಯಾಲಯವು ಪ್ರಜ್ವಲ್‌ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಅನಂತರ ಪ್ರಜ್ವಲ್‌ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಪ್ರಜ್ವಲ್‌ ರೇವಣ್ಣ ವಿರುದ್ಧ ಎಸ್‌ಐಟಿಯಲ್ಲಿ 4 ಪ್ರಕರಣ ದಾಖಲಾಗಿದ್ದು, ಈ ಪೈಕಿ 2 ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿದೆ. ಇನ್ನು 3ನೇ ಪ್ರಕರಣದಲ್ಲಿ ಬಾಡಿ ವಾರಂಟ್‌ ಮೂಲಕ ವಶಕ್ಕೆ ಪಡೆದು ತನಿಖೆ ನಡೆಸಲು ಸಿದ್ಧತೆ ನಡೆಸಿದೆ.

ಎಸ್‌ಐಟಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ
ನಿಮಗೆ ಆರೋಗ್ಯ ಸಮಸ್ಯೆ ಏನಾದರೂ ಇದೆಯೇ ಎಂದು ನ್ಯಾಯಾಧೀಶರು ಪ್ರಜ್ವಲ್‌ನನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಜ್ವಲ್‌, ಹೌದು ಸರ್‌ ಇದೆ. ಎಸ್‌ಐಟಿ ಅಧಿಕಾರಿಗಳು ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದರು. ಮತ್ತೂಂದೆಡೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ನೋಟಿಸ್‌ ನೀಡಿದೆ. ಅರ್ಜಿ ವಿಚಾರಣೆಯನ್ನು ಜೂನ್‌ 24ಕ್ಕೆ ಮುಂದೂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next