Advertisement

ಟ್ರಾಫಿಕ್‌ ಸಮಸ್ಯೆಯಿಂದ ಕಿರಿಕಿರಿ

01:05 PM Sep 09, 2019 | Team Udayavani |

ತುರುವೇಕೆರೆ: ಪಟ್ಟಣದಲ್ಲಿ ದಿನೇದಿನೆ ಬಿಗಡಾಯಿಸುತ್ತಿರುವ ಟ್ರಾಫಿಕ್‌ ಸಮಸ್ಯೆಯಿಂದ ಪಾದಚಾರಿಗಳು ಜೀವ ಬಿಗಿ ಹಿಡಿದು ಸಂಚರಿಸುವಂತಾಗಿದೆ. ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್‌ ಇಲಾಖೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಪಟ್ಟಣದ ಪ್ರಮುಖ ರಸ್ತೆಗಳಾಗಿರುವ ಬಾಣಸಂದ್ರ, ದಬ್ಬೇಘಟ್ಟ ಹಾಗೂ ಮಾಯಸಂದ್ರ ಮತ್ತು ತಿಪಟೂರು ರಸ್ತೆ ಟ್ರಾಫಿಕ್‌ ಕಿರಿಕಿರಿಯಿಂದ ಕೂಡಿದ್ದು, ಈಗಾಗಲೇ ಹಲವರ ಜೀವಕ್ಕೂ ಕುತ್ತು ಬಂದಿದೆ. ಬಾಣಸಂದ್ರ ರಸ್ತೆಯಲ್ಲಿ ಡಿವೈಡರ್‌ ಇದ್ದು, ರಸ್ತೆ ಕಿರಿದಾಗಿರುವುದರಿಂದ ಅಪಘಾತಗಳಿಗೆ ಕಾರಣವಾಗಿದೆ. ತಿಪಟೂರು ರಸ್ತೆ ಕಾಮಗಾರಿ ಅಪೂರ್ಣವಾಗಿರುವುದು ಅಪಘಾತಗಳಿಗೆ ಕಾರಣವಾಗಿದೆ.

ಮಾಯಸಂದ್ರ ರಸ್ತೆಯಲ್ಲಿ ಬಿಇಒ ಕಚೇರಿ, ಪೊಲೀಸ್‌ ಠಾಣೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಪ್ರವಾಸಿ ಮಂದಿರ, ಸಾರ್ವಜನಿಕ ಆಸ್ಪತ್ರೆ ಹಾಗೂ ಪಿಡಬ್ಲ್ಯೂಡಿ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಇಲಾಖೆ ಗಳಿದ್ದರೂ ರಸ್ತೆ ಪರಿಸ್ಥಿತಿ ತೀರ ಹದಗೆಟ್ಟಿದೆ. ಹಲವು ಹೋರಾಟದ ಫ‌ಲವಾಗಿ ದಬ್ಬೇಘಟ್ಟ ರಸ್ತೆ ಹಲವಾರು ಹೋರಾಟದ ಫ‌ಲವಾಗಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ.

ಬೀದಿಬದಿ ವ್ಯಾಪಾರದಿಂದ ಸಮಸ್ಯೆ: ತಾಲೂಕಿನ ಹಲವು ಗ್ರಾಮಗಳಿಂದ ಕೆಲಸ ಕಾರ್ಯಗಳಿಗೆ ತಾಲೂಕು ಕಚೇರಿಗೆ ದಿನನಿತ್ಯ ಸಾವಿರಾರು ರೈತರು, ವರ್ತಕರು ಸೇರಿ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ಆಗಮಿಸುತ್ತಾರೆ. ತಾಲೂಕು ಕಚೇರಿ ಪಟ್ಟಣದ ಹೃದಯಭಾಗದಲ್ಲಿದ್ದು, ಅತೀ ಹೆಚ್ಚು ಜನದಟ್ಟಣೆಯಿಂದ ಕೂಡಿರುತ್ತದೆ. ಈ ಜನಸಂದಣಿ ಲಾಭ ಪಡೆಯಲು ಬೀದಿಬದಿ ವ್ಯಾಪಾರಿಗಳು ತಾಲೂಕು ಕಚೇರಿ ಮುಂಭಾಗದ ಆವರಣ ಹಾಗೂ ಅಂಬೇಡ್ಕರ್‌ ರಸ್ತೆ ಸೇರಿ ನಾಲ್ಕೂ ದಿಕ್ಕುಗಳಲ್ಲಿ ವ್ಯಾಪಾರ ಮಾಡುತ್ತಾರೆ. ಇದರಿಂದ ರಸ್ತೆಯ ಇಕ್ಕೆಲಗಳಲ್ಲೂ ಅಂಗಡಿ ತೆರೆದಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.

ಪಾರ್ಕಿಂಗ್‌ ಸಮಸ್ಯೆ: ಪಟ್ಟಣಕ್ಕೆ ಆಗಮಿಸುವ ವಾಹನ ಸವಾರರು ಬೇಕಾ ಬಿಟ್ಟಿಯಾಗಿ ರಸ್ತೆಯಲ್ಲೇ ವಾಹನ ನಿಲ್ಲಿಸಿ ಕಚೇರಿ, ಇತರ ಕಡೆ ತೆರಳುವುದರಿಂದ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ.

Advertisement

ತಲೆಕೆಡಿಸಿಕೊಳ್ಳದ ಪಪಂ: ಪಟ್ಟಣದ ಟ್ರಾಫಿಕ್‌ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳಿಂದ ಬರುವ ಹಭದಾಸೆಗೆ ಜಾಣ ಮೌನ ವಹಿಸುತ್ತ, ಪಾದಚಾರಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಕಣ್ಮುಚ್ಚಿ ಕುಳಿತ ಪೊಲೀಸ್‌ ಇಲಾಖೆ: ಪಟ್ಟಣದ ತಾಲೂಕು ಕಚೇರಿಯಿಂದ ಕೂಗಳತೆ ದೂರದಲ್ಲಿರುವ ಪೊಲೀಸ್‌ ಠಾಣೆ ಅಧಿಕಾರಿಗಳೂ ಸಮಸ್ಯೆಗೂ, ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತಿದ್ದಾರೆ. ಅಪಘಾತವಾದರೆ ಕೇಸ್‌ ದಾಖಲಿಸುವುದಷ್ಟೇ ನಮ್ಮ ಕೆಲಸ ಎನ್ನು ಭಾವನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಜಾರಿಗೆ ಬಾರದ ಪಪಂ ಸಭಾ ತೀರ್ಮಾನ: 2017-18ನೇ ಸಾಲಿನ ನ. 25, 2017ರಂದು ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ಹಾಡಲೆಂದು ಬಾಣಸಂದ್ರ ರಸ್ತೆಯಲ್ಲಿ ನಡೆಯುವ ಸಂತೆಯ ಬೀದಿಬದಿ ವ್ಯಾಪಾರಿಗಳ ತೆರವು ಹಾಗೂ ಪಟ್ಟಣದ ಬಾಣಸಂದ್ರ, ಮಾಯಸಂದ್ರ, ದಬ್ಬೇಗಟ್ಟ, ತಿಪಟೂರು ರಸ್ತೆಯ ಇಕ್ಕೆಲಗಳಲ್ಲಿ 25 ಸಿ.ಸಿ. ಕ್ಯಾಮರಾ ಅಳವಡಿಕೆ, ಆಟೋಗಳಿಗೆ ಪ್ರತ್ಯೇಕ ನಿಲ್ದಾಣ ಹಾಗೂ ರಾಘವೇಂದ್ರ ಹೋಟೆಲ್ ಮುಂಭಾಗ ಸಭೆ ಸಮಾರಂಭಗಳಿಗೆ ಅವಕಾಶ ನೀಡಬಾರದೆಂಬ ಮಹತ್ತರ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಇದು ವರೆಗೂ ಅಧಿಕಾರಿಗಳು ಸಭೆ ತೀರ್ಮಾನ ಕಾರ್ಯರೂಪಕ್ಕೆ ತರದಿರುವುದು ದುರಂತ.

Advertisement

Udayavani is now on Telegram. Click here to join our channel and stay updated with the latest news.

Next