ಚಿತ್ರದುರ್ಗ: ಲಿಂಗತ್ವ ಅಲ್ಪಸಂಖ್ಯಾತರು ವಿವಿಧ ಜೀವನೋಪಾಯ ಚಟುವಟಿಕೆ ಕೈಗೊಳ್ಳುವ ಮೂಲಕ ಹಸನಾದ ಬದುಕು ಸಾಗಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ರುಡ್‌ಸೆಟ್ ಹಮ್ಮಿಕೊಂಡಿದ್ದ 10 ದಿನಗಳ ಅಣಬೆ ಬೇಸಾಯ ಮತ್ತು ಉದ್ಯಮಶೀಲತಾ ತರಬೇತಿಯ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿಷ್ಠೆ ಹಾಗೂ ಗೌರವಯುತ ಜೀವನ ಸಾಗಿಸಲು ಕೌಶಲ್ಯ ಮುಖ್ಯ. ಈ ರೀತಿಯ ತರಬೇತಿ ಪಡೆದು ಚಟುವಟಿಕೆ ಕೈಗೊಂಡರೆ ಆದಾಯವನ್ನೂ ಗಳಿಸಬಹುದು. ಇದರಿಂದ ಇತರರಿಗೂ ಮಾದರಿಯಾಗಬಹುದು. ಆರೋಗ್ಯಯುತ ಸಮಾಜಕ್ಕೆ ನಾಂದಿಯಾಗುತ್ತದೆ ಎಂದರು.
ರುಡ್‌ಸೆಟ್ ಸಂಸ್ಥೆ ಉದ್ಯಮಶೀಲತ ತರಬೇತಿಯ ಜೊತೆಗೆ ವರ್ತನೆ ಮತ್ತು ನಡವಳಿಕೆಗಳಲ್ಲಿ ಬದಲಾವಣೆ ತರುವ ತರಬೇತಿ ನೀಡಿ ವ್ಯಕ್ತಿತ್ವ ವಿಕಸನ ಮಾಡುತ್ತಿದೆ. ಈ ಮೂಲಕ ತಾವೆಲ್ಲರೂ ಸ್ವಾವಲಂಬನೆ ಜೀವನ ಮಾಡುತ್ತಾ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಜಿಪಂ ಸಿಇಒ ಡಾ| ಕೆ. ನಂದಿನಿದೇವಿ ಮಾತನಾಡಿ, ಎಲ್ಲರ ಸಹಕಾರದಿಂದ 28 ಲಿಂಗತ್ವ ಅಲ್ಪಸಂಖ್ಯಾತರಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸ್ವಂತ ಉದ್ಯೋಗ ಕೈಗೊಳ್ಳಲು ಅಣಬೆ ಬೇಸಾಯಕ್ಕಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶೆಡ್ ನಿರ್ಮಿಸಿಕೊಡಲಾಗುವುದು. ನಗರ ಪ್ರದೇಶದ ತೃತೀಯ ಲಿಂಗಿಗಳೆಲ್ಲರೂ ನಗರ ಜೀವನೋಪಾಯ ಅಭಿಯಾನದಡಿ ಗ್ರಾಮೀಣ ಪ್ರದೇಶದ ಲಿಂಗತ್ಪ ಅಲ್ಪಸಂಖ್ಯಾತರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಸ್ವಸಹಾಯ ಗುಂಪು ರಚಿಸಿಕೊಂಡು ಒಕ್ಕೂಟದ ವ್ಯಾಪ್ತಿಗೆ ಬರಬೇಕೆಂದರು.
ಸುತ್ತುನಿಧಿ, ಸಮುದಾಯ ಬಂಡವಾಳ ನಿಧಿ ದುರ್ಬಲ ವರ್ಗದವರ ನಿಧಿ ಮತ್ತು ಬ್ಯಾಂಕ್ ಸಾಲ ಸಂಪರ್ಕ ಒದಗಿಸಲು ಅನುಕೂಲವಾಗುತ್ತದೆ. ಅವುಗಳನ್ನು ಉಪಯೋಗಿಸಿಕೊಂಡು ಚಟುವಟಿಕೆ ಕೈಗೊಳ್ಳುವ ಮೂಲಕ ಸ್ವತಂತ್ರವಾಗಿ ಜೀವನ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರುಡ್‌ಸೆಟ್ ಕೇಂದ್ರ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ ಕಲ್ಲಾಪುರ, ರುಡ್‌ಸೆಟ್ ಸಂಸ್ಥೆಯ ನಿರ್ದೇಶಕಿ ಮಂಜುಳ, ಜಿಪಂ ಜಿಲ್ಲಾ ವ್ಯವಸ್ಥಾಪಕ ಬಿ.ಯೋಗಿಶ್ವರಪ್ಪ, ಟಿ. ಭೋಜರಾಜ್ ಇತರರು ಇದ್ದರು.