ವಾಷಿಂಗ್ಟನ್: ಟ್ವಿಟರ್‌ನಲ್ಲಿ ದೃಢಪಡಿಸಿದ ಖಾತೆಗಳಿಗೆ ಬ್ಲೂಟಿಕ್ ಹೊಂದಲು ಹಾಗೂ ಅದನ್ನು ಬಳಕೆ ಮಾಡಲು ಒಂದು ತಿಂಗಳಿಗೆ 1,600 ರೂ. ಶುಲ್ಕ ವಿಧಿಸುವ ಮಾಲೀಕ ಎಲಾನ್ ಮಸ್ಕ್ ನಿರ್ಧಾರಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶುಲ್ಕನ್ನು 650 ರೂ.ಗೆ ಇಳಿಕೆ ಮಾಡಲಾಗಿದೆ.
ಇನ್ನೊಂದೆಡೆ, ಟ್ವಿಟರ್‌ನ ನಿರ್ದೇಶಕರ ಮಂಡಳಿಯನ್ನು ಬರ್ಖಾಸ್ತುಗೊಳಿಸಿರುವ ಎಲಾನ್ ಮಸ್ಕ್, ತಮ್ಮನ್ನು ತಾವೇ ಸಿಇಒ ಆಗಿ ನೇಮಕ ಮಾಡಿಕೊಂಡಿದ್ದಾರೆ.
ಟ್ವಿಟರ್‌ನಲ್ಲಿ ಬ್ಲೂಟಿಕ್ ಹೊಂದಲು ಹಾಗೂ ಬಳಕೆ ಮಾಡಲು ಶುಲ್ಕ ವಿಧಿಸಿದ ಕ್ರಮವನ್ನು ಸಾಹಿತಿ ಸ್ಟಿಫನ್ ಕಿಂಗ್ ಸೇರಿದಂತೆ ಅನೇಕರು ಖಂಡಿಸಿದ್ದಾರೆ.
“ನಾನು ಯಾವುದೇ ಕಾರಣಕ್ಕೂ ಶುಲ್ಕ ಪಾವತಿಸಿ ಟ್ವಿಟರ್ ಬಳಸುವುದಿಲ್ಲ. ಜನರು ಟ್ವಿಟರ್ ಬಳಸಿದರೆ, ಕಂಪನಿಯೇ ಅದಕ್ಕೆ ಹಣ ಪಾವತಿಸಬೇಕು,’ ಎಂದು ಸ್ಟಿಫನ್ ಕಿಂಗ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಸಮಜಾಯಿಷಿ ನೀಡಿರುವ ಎಲಾನ್ ಮಸ್ಕ್, “ಕೇವಲ ಜಾಹೀರಾತುಗಳಿಂದಲೇ ಕಂಪನಿಯನ್ನು ನಿಭಾಯಿಸುವುದು ಕಷ್ಟ. ಆದರೂ 20 ಅಮೆರಿಕನ್ ಡಾಲರ್ ಬದಲಾಗಿ ಶುಲ್ಕವನ್ನು 8 ಡಾಲರ್‌ಗೆ ತಗ್ಗಿಸುತ್ತೇವೆ,’ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಟ್ವಿಟರ್‌ನಲ್ಲಿ ಶೇ.25ರಷ್ಟು ಉದ್ಯೋಗಿಗಳ ಕಡಿತಕ್ಕೆ ಮಸ್ಕ್ ಮುಂದಾಗಿದ್ದಾರೆ.