Advertisement

ಎಲ್ಲೂರು ದೇಗುಲದ ಆಚರಣೆ; ಶೀಘ್ರ ತೀರ್ಮಾನ: ಕೋಟ ಶ್ರೀನಿವಾಸ ಪೂಜಾರಿ

10:15 PM Feb 16, 2023 | Team Udayavani |

ಬೆಂಗಳೂರು:ಉಡುಪಿ ಜಿಲ್ಲೆ ಕಾಪು ತಾಲೂಕಿನ ಎಲ್ಲೂರಿನ ಮಹತೋಭಾರ ವಿಶ್ವೇಶ್ವರ ದೇಗುಲದಲ್ಲಿ ತಟ್ಟೆ ಪ್ರಸಾದ ಮತ್ತು ಅಜಕಾಯಿ ಪ್ರಸಾದದ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ತಗಾದೆ ಇತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿನ ತೀರ್ಮಾನದಂತೆ ಆಚರಣೆ ಸ್ಥಗಿತಗೊಳಿಸಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯಿಂದ ಈ ಆಚರಣೆ ಬಗ್ಗೆ ಶೀಘ್ರ ಸೂಕ್ತ ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಗುರುವಾರ ನಿಯಮ 72ರ ಅಡಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌, ವಿಶ್ವೇಶ್ವರ ದೇವಸ್ಥಾನದಲ್ಲಿ ಪುರಾತನ ಕಾಲದಿಂದಲೂ ಸಂಪ್ರದಾಯಗಳು ನಡೆದುಕೊಂಡು ಬಂದಿವೆ. ಆದರೆ, ಕಳೆದೆರಡು ವರ್ಷಗಳಿಂದ ಪ್ರಸ್ತುತ ವ್ಯವಸ್ಥಾಪನ ಸಮಿತಿಯು ಆಚರಣೆಗಳನ್ನು ಕೈಬಿಟ್ಟಿದೆ ಎಂದು ಗಮನ ಸೆಳೆದರು.

ಹಸ್ತಕ್ಷೇಪ ಮಾಡಿಲ್ಲ
ಇದಕ್ಕೆ ಪ್ರತಿಕ್ರಿಯಿಸಿದ ಸಭಾ ನಾಯಕರು, ಉದ್ದೇಶಿತ ದೇವಸ್ಥಾನದಲ್ಲಿ ತಟ್ಟೆ ಪ್ರಸಾದ ಮತ್ತು ಅಜಕಾಯಿ ಪ್ರಸಾದ ವಿಚಾರದಲ್ಲಿ ಎರಡು ಸಮುದಾಯಗಳಲ್ಲಿ ತಗಾದೆ ಇತ್ತು. ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆಗ ಸೂಕ್ತ ತೀರ್ಮಾನ ಆಗುವವರೆಗೂ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ತೀರ್ಮಾನಿಸಲಾಯಿತು. ವ್ಯವಸ್ಥಾಪನ ಸಮಿತಿಯು ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಅದೇನೇ ಇರಲಿ, ಈ ವಿಚಾರದಲ್ಲಿ ಆದಷ್ಟು ಬೇಗ ಸೂಕ್ತ ತೀರ್ಮಾನ ಕೈಗೊಂಡು ಆಚರಣೆಗಳನ್ನು ಮುನ್ನಡೆಸುವಂತೆ ಧಾರ್ಮಿಕ ದತ್ತಿ ಇಲಾಖೆಯಿಂದ ಅಲ್ಲಿನ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next