Advertisement
ಸಾಮಾನ್ಯವಾಗಿ ಬಹುತೇಕರು ಚಿತ್ರ ಮಾಡುವುದು ಹಣ, ಹೆಸರು ಮಾಡುವುದಕ್ಕಾಗಿ. ಅದರೆ ಕೆಲವೇ ಕೆಲವರು ಮಾತ್ರ ಪ್ಯಾಷನ್‌ಗಾಗಿ ಚಿತ್ರ ಮಾಡುತ್ತಾರೆ. ಕೆಲವೇ ಕೆಲವು ಚಿತ್ರಗಳು ಮಾತ್ರ ಪ್ರೇಕ್ಷಕರಿಗಾಗಿ ಅಂಥ ಇರುತ್ತವೆ. “ಎಲ್ಲಿದ್ದೆ ಇಲ್ಲಿ ತನಕ’ ಅಂಥದ್ದೇ ಸಾಲಿಗೆ ಸೇರುವ ಚಿತ್ರ ಎನ್ನುವ ಭರವಸೆ ಮಾತು ಸೃಜನ್ ಲೋಕೇಶ್ ಅವರದ್ದು.ಸೃಜನ್ ಇಂಥದ್ದೊಂದು ಮಾತನಾಡಲು ಬಲವಾದ ಕಾರಣವಿದೆ. ಬಾಲ್ಯದಿಂದಲೂ ಚಿತ್ರರಂಗವನ್ನು ಹತ್ತಿರದಿಂದ ಗಮನಿಸುತ್ತ, ಅಲ್ಲಿ ಕೆಲಸ ಮಾಡಿದ ಅನುಭವವಿರುವ ಸೃಜನ್‌ಗೆ ಎಂಥ ಚಿತ್ರಗಳನ್ನು ಪ್ರೇಕ್ಷಕರಿಗೆ ಕೊಡಬೇಕು ಎನ್ನುವರ ಬಗ್ಗೆ ಸ್ಪಷ್ಟತೆ ಇದೆ. ಈ ಬಗ್ಗೆ ಮಾತನಾಡುವ ಸೃಜನ್, “ಒಂದು ಒಳ್ಳೆಯ ಚಿತ್ರ ಮಾಡುತ್ತೇವೆ ಅಂಥ ಹೊರಟಾಗ ಕೆಲವೊಂದು ವಿಷಯಗಳನ್ನು ಬದಿಗಿಟ್ಟು ಯೋಚಿಸಬೇಕಾಗುತ್ತದೆ. ಅದರಲ್ಲೂ ಈ ಚಿತ್ರ ಎಷ್ಟು ದುಡ್ಡು ಮಾಡುತ್ತದೆ ಅನ್ನೋದನ್ನ ತಲೆಯಲ್ಲಿ ಇಟ್ಟುಕೊಳ್ಳಲೇ ಇಲ್ಲ. ಬ್ಯುಸಿನೆಸ್ ತಲೆಯಲ್ಲಿ ಇಟ್ಟುಕೊಂಡರೆ ಕ್ವಾಲಿಟಿ ಚಿತ್ರ ಕೊಡೋದಕ್ಕೆ ಸಾಧ್ಯವಿಲ್ಲ. ಚಿತ್ರದ ಕಾನ್ಸೆಪ್ಟ್ ಮೇಲೆ ನಮಗೆ ನಂಬಿಕೆಯಿದೆ. ಆಡಿಯನ್ಸ್‌ಗೆ ಮುಟ್ಟುವ ಹಾಗೆ, ಇಷ್ಟವಾಗುವ ಹಾಗೆ ಚಿತ್ರ ಮಾಡಿದ್ದೇವೆ. ಇವತ್ತು ಬೇರೆ ಬೇರೆ ಜಾನರ್ ಚಿತ್ರಗಳು ಬರುತ್ತಿರುವುದರಿಂದ, ಅವುಗಳಿಗಿಂತ ನಮ್ಮ ಚಿತ್ರ ಹೇಗೆ ಡಿಫರೆಂಟ್ ಆಗಿದೆ ಅನ್ನೋದು ಮುಖ್ಯ. ಒಟ್ಟಾರೆ ಆಡಿಯನ್ಸ್‌ಗೆ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಕೊಡೋದಷ್ಟೇ ನಮ್ಮ ಉದ್ದೇಶ. ಇಲ್ಲಿಯವರೆಗೆ ಎಂಟರ್‌ಟೈನ್ಮೆಂಟ್ ಉದ್ದೇಶ ಇಟ್ಟುಕೊಂಡು ಮಾಡಿದ ಚಿತ್ರಗಳು ಸೋತಿದ್ದು ಕಡಿಮೆ. ಹಾಗಾಗಿ ನಮ್ಮ ಚಿತ್ರ ಎಷ್ಟು ಕಲೆಕ್ಷನ್ ಮಾಡುತ್ತದೆ ಅನ್ನೋದಕ್ಕಿಂತ, ಆಡಿಯನ್ಸ್‌ಗೆ ಎಷ್ಟು ಎಂಟರ್‌ಟೈನ್ಮೆಂಟ್ ಮಾಡುತ್ತೆ ಅನ್ನೋದೆ ಮುಖ್ಯ’ ಎಂಬುದು ಸೃಜನ್ ಮಾತು.
“ಇವತ್ತು ಫ್ಯಾಮಿಲಿ ಆಡಿಯನ್ಸ್ ಥಿಯೇಟರ್‌ಗೆ ಬರೋದೆ ಎಂಟರ್‌ಟೈನ್ಮೆಂಟ್‌ಗಾಗಿ. ಹಾಗಾಗಿ ಥಿಯೇಟರ್‌ಗೆ ಬರುವ ಆಡಿಯನ್ಸ್‌ನ ಭರಪೂರ ಮನರಂಜಿಸುವುದು ನಮ್ಮ ಕೆಲಸ. ಸಾಮಾನ್ಯವಾಗಿ ಕಮರ್ಶಿಯಲ್ ಚಿತ್ರಗಳು ಅಂದ ತಕ್ಷಣ, ಅಲ್ಲಿ ಎಲ್ಲಾ ಅಂಶಗಳ ಮಿಶ್ರಣ ಇರುತ್ತದೆ. “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದಲ್ಲಿಯೂ ಆ ಎಲ್ಲಾ ಅಂಶಗಳನ್ನು ನಿರೀಕ್ಷಿಸಬಹುದು. ಆದರೆ ಅದನ್ನು ತೋರಿಸುವ ರೀತಿ ವಿಭಿನ್ನವಾಗಿದೆ. ಹಾಗಾಗಿ “ಎಲ್ಲಿ¨ªೆ ಇಲ್ಲಿ ತನಕ’ ಮನೆಮಂದಿ ಎಲ್ಲ ಕುಳಿತು ನೋಡಬಹುದಾದ, ನಕ್ಕು ಹಗುರಾಗಬಹುದಾದ, ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಪ್ಯಾಕೇಜ್ ಚಿತ್ರ’ ಅನ್ನೋದು ಸೃಜನ್ ಲೋಕೇಶ್ ಮಾತು. ಥಿಯೇಟರ್‌ನಿಂದ ಹೊರಬರುವ ಪ್ರತಿಯೊಬ್ಬರೂ ನಗುತ್ತಲೇ ಹೊರಬರಬೇಕು ಅನ್ನೋದು ನಮ್ಮ ನಮ್ಮ ತಂಡದ ಉದ್ದೇಶ’ ಎನ್ನುತ್ತಾರೆ. ಇನ್ನು “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಪ್ರತಿ ಕೆಲಸದಲ್ಲಿಯೂ ಸೃಜನ್ ಭಾಗಿಯಾಗಿದ್ದಾರೆ. ಇಂದಿನ ಆಡಿಯನ್ಸ್ ಮನಸ್ಥಿತಿ ಗಮನದಲ್ಲಿ ಇಟ್ಟುಕೊಂಡು, ಎಲ್ಲೂ ಬೋರ್ ಆಗದಂತೆ ನಿರ್ದೇಶಕ ತೇಜಸ್ವಿ, ನಾಯಕ ಸೃಜನ್ ಮತ್ತು ಚಿತ್ರತಂಡ ಚಿತ್ರದ ದೃಶ್ಯಗಳನ್ನು ಹೆಣೆದಿದೆ. “ಎರಡು ಗಂಟೆಯ ಚಿತ್ರವನ್ನು ನೋಡಿದವರು, ಎರಡು ದಿನಗಳವರೆಗೂ ನಗಿಸುತ್ತಿರಬೇಕು. ಹಾಗೆ ಚಿತ್ರವನ್ನು ಕೊಡುವ ಪ್ರಯತ್ನ ಮಾಡಿದ್ದೇವೆ’ ಅನ್ನೋದು ಸೃಜನ್ ಲೋಕೇಶ್ ಭರವಸೆಯ ಮಾತು.
Related Articles
Advertisement
ಕಾಮಿಡಿ ಜೋರು…ಇನ್ನು ಸೃಜನ್ ಲೋಕೇಶ್ ನಡೆಸಿಕೊಟುತ್ತಿದ್ದ ಜನಪ್ರಿಯ “ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ಅವರಿಗೆ ಸಾಥ್ ನೀಡಿ ಮನರಂಜನೆ ನೀಡುತ್ತಿದ್ದ ಬಹುತೇಕರು “ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದಲ್ಲೂ ಸೃಜನ್‌ಗೆ ಸಾಥ್ ನೀಡಿದ್ದಾರೆ. “ಮಜಾ ಟಾಕೀಸ್’ನಲ್ಲಿ ಆಡಿಯನ್ಸ್ ಎಂಜಾಯ್ ಮಾಡುತ್ತಿದ್ದ ಪಂಚಿಂಗ್ ಡೈಲಾಗ್ಸ್, ಅದೇ ಮನರಂಜನೆ ನೀಡುವ ಕಲಾವಿದರ ಕಾಮಿಡಿ ಕಮಾಲ್ ಈ ಚಿತ್ರದಲ್ಲೂ ಮುಂದುವರೆಯಲಿದೆ. ಇದು ಕೇವಲ ನನ್ನೊಬ್ಬನ ಚಿತ್ರವಲ್ಲ. ನಮ್ಮೆಲ್ಲರ ಚಿತ್ರ. ಕೇವಲ ಹೀರೋ, ಹೀರೋಯಿನ್ ಮಾತ್ರವಲ್ಲ ಚಿತ್ರದಲ್ಲಿ ಬರುವ ಪ್ರತಿ ಪಾತ್ರವೂ ನಗು ತರಿಸುತ್ತದೆ’ ಎನ್ನುತ್ತಾರೆ ಸೃಜನ್. – ಜಿ.ಎಸ್.ಕಾರ್ತಿಕ ಸುಧನ್