ಉಡುಪಿ: ಮಣಿಪಾಲ ವಿಶ್ವ ವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿಗಳು “ಎಲಿಕ್ಸಿರ್ ಮಣಿಪಾಲ್’ ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಕೆಎಂಸಿ ವಿದ್ಯಾರ್ಥಿ ಸೌರೀಶ್ ರೆಡ್ಡಿ ಮತ್ತು ಎಂಐಟಿಯಲ್ಲಿ ಬಿಟೆಕ್ ಮುಗಿಸಿದ ಅಂಕಿತ್ ಅವಾಲ್ ಅವರು ವಿದ್ಯಾರ್ಥಿಗಳು ಕಸ್ತೂರ್ಬಾ ಆಸ್ಪತ್ರೆಯ ವೈದ್ಯರನ್ನು ಭೇಟಿಯಾಗಲು ಸಮಯ ಕಾಯ್ದಿರಿಸಲು ಅನುಕೂಲವಾಗುವಂತೆ ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.
ಇದನ್ನು ಮಂಗಳವಾರ ವಿ.ವಿ. ಆಡಳಿತ ಕಟ್ಟಡದಲ್ಲಿ ಉದ್ಘಾಟಿಸಲಾಯಿತು.
ಪ್ರಸ್ತುತ ವಿದ್ಯಾರ್ಥಿಗಳು ಅವರ ಕಡತವನ್ನು ತರಿಸಿ ರೆಕಾರ್ಡ್ ವಿಭಾಗದ ಮೂಲಕ ನಿಗದಿತ ವಿಭಾಗದ ವೈದ್ಯರಲ್ಲಿಗೆ ಕಳುಹಿಸಬೇಕು. ಆ್ಯಪ್ ಪ್ರಕಾರ ಯಾವುದೇ ವೈದ್ಯರ ಭೇಟಿಯನ್ನು ನಿಗದಿಪಡಿಸಬಹುದು. ಹೋದ ವರ್ಷ ಆಸ್ಪತ್ರೆಯವರು ವಿದ್ಯಾರ್ಥಿ ಕ್ಲಿನಿಕ್ ಆ್ಯಪ್ ಅಭಿವೃದ್ಧಿ ಪಡಿಸಲು ಯೋಚಿಸಿ ಖಾಸಗಿ ಕಂಪೆನಿಗೆ ವಹಿಸಿಕೊಟ್ಟರು. ಅದರಂತೆ ಮಣಿಪಾಲ ವಿ.ವಿ.ಯ ಟೆಕ್ನಾಲಜಿ ಬಿಸಿನೆಸ್ ಇಂಕ್ಯೂಬೇಟರ್‌ನಲ್ಲಿ (ಎಂಯುಟಿಬಿಐ) ಆ್ಯಪ್ ತಯಾರಿಯಾಗಿದೆ.
“ನಾವು ಕೌಡ್ ಆಧಾರಿತ ತಂತ್ರಜ್ಞಾನದಲ್ಲಿ ಕೆಲಸ ಮಾಡಿದೆವು’ ಎನ್ನುತ್ತಾರೆ ಅಂಕಿತ್. “ಕೇವಲ ಕಾಯಿಲೆ ಗುಣಮುಖ ಆಗುವುದಕ್ಕೆ ಮಾತ್ರವಲ್ಲದೆ, ಕೆಲಸದ ಅವಧಿಯಲ್ಲಿ ತರಗತಿ ತಪ್ಪಿಸಿಕೊಂಡು ಆಸ್ಪತ್ರೆಗೆ ಭೇಟಿ ಕೊಡುವ ಸಮಸ್ಯೆಯನ್ನು ಕಡಿಮೆ ಮಾಡಲಾಗಿದೆ’ ಎಂದು ಸೌರೀಶ್ ಹೇಳಿದರು. ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ, ಉಪನಿರ್ದೇಶಕಿಯರಾದ ಡಾ| ಸುಮಾ ನಾಯರ್, ಡಾ| ಸುಲತಾ ಭಂಡಾರಿಯವರು ವಿದ್ಯಾರ್ಥಿಗಳು ಆ್ಯಪ್ ರೂಪಿಸಿದರು. ಆಸ್ಪತ್ರೆ ಆಡ ಳಿತದ ವಿಭಾಗ ಮುಖ್ಯಸ್ಥ ಡಾ| ಸೋಮು ಜಿ. ಅವರಿಗೆ ಸಲ್ಲಿಸಿ ಅನುಮತಿ ಪಡೆಯಲಾಯಿತು. ಸಹಕುಲಪತಿ (ಆರೋಗ್ಯ ವಿಜ್ಞಾನ) ಡಾ| ಪೂರ್ಣಿಮಾ ಬಾಳಿಗಾರ ಅಧ್ಯಕ್ಷತೆಯಲ್ಲಿ, ಡೀನ್ ಡಾ| ಪ್ರಜ್ಞಾ ರಾವ್, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಕ| ಎಂ. ದಯಾನಂದರ ಉಪಸ್ಥಿತಿಯಲ್ಲಿ ನಡೆದ ಕೆಎಂಸಿ ಡೀನ್ ಮಂಡಳಿ ಸಭೆಯಲ್ಲಿ ಪ್ರಸ್ತುತ ಪಡಿಸಲಾಯಿತು. ಎಲ್ಲ ತಾಂತ್ರಿಕ ಆಯಾಮಗಳಲ್ಲಿ ಸರಿಯಾದ ಬಳಿಕ ಉದ್ಘಾಟಿಸಲಾಯಿತು.
“ಹಲವು ವಿಭಾಗದ ಜ್ಞಾನಗಳನ್ನು ಒಂದೆಡೆ ಸೇರಿಸಿ ಈ ಸಾಧನೆ ಮಾಡಲಾಗಿದೆ’ ಎಂದು ಆ್ಯಪ್ ಬಿಡುಗಡೆಗೊಳಿಸಿದ ಕುಲಪತಿ ಡಾ| ಎಚ್. ವಿನೋದ ಭಟ್ ಹರ್ಷ ವ್ಯಕ್ತಪಡಿ ಸಿದರು. ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು ಉಪಸ್ಥಿತರಿದ್ದರು.