Advertisement

ದಕ್ಷಿಣ Vs ಉತ್ತರದ ಹಕೀಕತ್ತೇನು?

04:00 PM Mar 29, 2018 | Sharanya Alva |

ಉತ್ತರ ಭಾರತ ಮತ್ತು ದಕ್ಷಿಣ ಭಾರತ ರಾಜ್ಯ ಗಳ ನಡುವಿನ ತಿಕ್ಕಾಟ ಹೊಸತೇನಲ್ಲ. ಉತ್ತರ ಭಾರತದವರು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯದವರನ್ನೆಲ್ಲ “ಮದರಾಸಿ’ಗಳು ಎಂದೇ ಉಲ್ಲೇಖ ಮಾಡುತ್ತಿದ್ದರು. ಅದು ಎಲ್ಲಿಯವರೆಗೆ ಮುಂದುವರಿದಿತ್ತು ಎಂದರೆ ನಮ್ಮ ದೇಶದ ಅರ್ಥ ವ್ಯವಸ್ಥೆ ಜಾಗತೀಕರಣಕ್ಕೆ ತೆರೆದುಕೊಳ್ಳುವವರೆಗೆ ಅಂಥ ಒಂದು ಭಾವನೆ ಮುಂದುವರಿದಿತ್ತು. ಆ ಬಳಿಕ ಜಗತ್ತು ತೆರೆದು ಕೊಂಡಂತೆಲ್ಲ, ಆ ಹೊಳಹಿನಾಚೆ ಎಲ್ಲರೂ ಕೂಡ ಹೊರಳಿ ನಿಂತು ನೋಡಿದಾಗ ದಕ್ಷಿಣ ಭಾರತ ಎಂದರೆ “ಮದರಾಸಿ’ ಮಾತ್ರವಲ್ಲ, ಬೆಂಗಳೂರು, ತಿರುವನಂತಪುರ, ಮಂಗಳೂರು ಇತ್ಯಾದಿ ನಗರ, ಪಟ್ಟಣಗಳೂ ಇವೆ ಎಂಬ ತಿಳಿವಳಿಕೆ ಬಂದಿತು.

Advertisement

ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಕೆಲ ದಿನಗಳ ಹಿಂದೆ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪುದುಶ್ಶೇರಿ, ತೆಲಂಗಾಣ ಸೇರಿದಂತೆ ಪ್ರತ್ಯೇಕ ದ್ರಾವಿಡ ನಾಡು ಅಥವಾ ದೇಶ ರಚನೆಯಾಗಬೇಕು ಎಂದು ಪ್ರತಿಪಾದಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅದು ಚರ್ಚೆಯಾಗಿತ್ತು ಕೂಡ. ಅದು ಹೆಚ್ಚು ವೈರಲ್‌ ಆಗುತ್ತಿದ್ದಂತೆ ದ್ರಾವಿಡ ನಾಡು ಎಂಬ ಪದ ಪ್ರಯೋಗ ತಮ್ಮದಲ್ಲ, ಹೋರಾಟಗಾರ, ಚಿಂತಕ ಇ.ವಿ.ರಾಮಸ್ವಾಮಿ ಅವರದ್ದು ಎಂದು ಹೇಳಿ ಸ್ಟಾಲಿನ್‌ ಜಾರಿಕೊಂಡರು. ಅಲ್ಲಿಗೆ ಅದು ತಣ್ಣಗಾಯಿತು.

ಇನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳೇ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಪಾವತಿ ಮಾಡುತ್ತವೆ. ಆದರೆ ಕೇಂದ್ರ ಸರ್ಕಾರದ ವತಿಯಿಂದ ಆಯಾ ರಾಜ್ಯಗಳ ಪಾಲಿನ ತೆರಿಗೆ ಯನ್ನು ನೀಡುವ ಸಂದರ್ಭದಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ.

ಜತೆಗೆ ಟ್ವೀಟ್‌ ಕೂಡ ಮಾಡಿದ್ದರು. ಕೇರಳದಲ್ಲಿ ಅಧಿಕಾರದಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್)ದ ಹಣಕಾಸು ಸಚಿವ ಥಾಮಸ್‌ ಐಸಾಕ್‌ ಏ.10ರಂದು ದಕ್ಷಿಣದ ರಾಜ್ಯಗಳ ಹಣಕಾಸು ಸಚಿವರ ಸಭೆ ಕರೆದಿದ್ದಾರೆ. ಜತೆಗೆ ಖುದ್ದಾಗಿ ಅವರೇ ದಕ್ಷಿಣದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಹಣಕಾಸು ಸಚಿವರಿಗೆ ಫೋನ್‌ ಮಾಡಿ ಸಭೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ದ್ರಾವಿಡ ನಾಡು ಎಂಬ ವಿಚಾರ ಇ.ವಿ.ರಾಮಸ್ವಾಮಿ ಶತ ಮಾನಗಳ ಹಿಂದೆ ಕರೆ ನೀಡಿದ್ದ ವಿಚಾರವಾದರೂ, ಸದ್ಯ ಅದು ಮುಂಚೂಣಿಗೆ ಬರಲು ಕಾರಣವಾದ ಪ್ರಮುಖ ಅಂಶ
ವೊಂದಿದೆ. ಅದುವೇ ಹದಿನೈದನೇ ಹಣಕಾಸು ಆಯೋಗದ ಶಿಫ‌ರಾಸು. ಅದರಲ್ಲಿ ಉಲ್ಲೇಖವಾಗಿರುವ ನಿಯಮವೇ ಈಗ ಕೇಂದ್ರದ ವಿರುದ್ಧ ದಕ್ಷಿಣದ ರಾಜ್ಯಗಳು ಸೆಟೆದು ನಿಲ್ಲುವಂತೆ ಮಾಡಿವೆ. ಅದರ ಪ್ರಕಾರ 2011ನೇ ಸಾಲಿನ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರ ರಾಜ್ಯಗಳಿಗೆ ತೆರಿಗೆ ಮತ್ತು ಇತರ ಅನುದಾನಗಳನ್ನು ಹಂಚಿಕೆ ಮಾಡಬೇಕು ಎಂದು ಉಲ್ಲೇಖೀಸಲಾಗಿದೆ. ಅದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆಕ್ಷೇಪ ಮಾಡಿದ್ದಾರೆ. 

ಅವರು ಹೇಳುವ ಪ್ರಕಾರ ದಕ್ಷಿಣದ ಯಾವುದೇ ರಾಜ್ಯಗಳಿರಲಿ, ಕೇಂದ್ರ ಜಾರಿ ಮಾಡಿದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿವೆ. ಉತ್ತರ ಭಾರತದ ರಾಜ್ಯಗಳಿಗಿಂತ ಹೆಚ್ಚು ಜನರಿಗೆ ತಲುಪುವಂತೆ ಅನುಷ್ಠಾನ ಮಾಡಿದ್ದೇವೆ. ಹೀಗಾಗಿ ಕೇಂದ್ರ ದಿಂದ ರಾಜ್ಯಗಳಿಗೆ ಬರಬೇಕಾದ ಅನುದಾನ ಹಂಚಿಕೆಯಲ್ಲಿ 1971ನೇ ಜನಗಣತಿಯನ್ನೇ ಆಧಾರವಾಗಿ ಇರಿಸಲಾಗಿದೆ. 1976ರಿಂದಲೂ ಅದೇ ಅದನ್ನೇ ಮಾದರಿಯನ್ನಾಗಿ ಇರಿಸಲಾ ಗಿದೆ ಎನ್ನುವುದು ದಕ್ಷಿಣ ಭಾರತದ ರಾಜ್ಯಗಳ ಸರ್ಕಾರಗಳ ಮತ್ತು ಇತರ ಪಕ್ಷಗಳ ನಾಯಕರ ವಾದ.

Advertisement

1971ರ ಜನಗಣತಿಯೇ ರಾಷ್ಟ್ರಪತಿ ಚುನಾವಣೆ, ರಾಜ್ಯ ವಿಧಾನಸಭೆ, ಲೋಕಸಭೆ ಚುನಾವಣೆಗೆ ತಳಹದಿಯನ್ನಾಗಿ ಪರಿಗಣಿಸಲಾಗಿದೆ ಎಂಬುದನ್ನು ಗಮನಿಸಬೇಕು. 1976ರಲ್ಲಿ ತುರ್ತು ಪರಿಸ್ಥಿತಿಯ ಬಳಿಕ ದೇಶದ ಸಂವಿಧಾನದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು. ವಿಶೇಷವಾಗಿ ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲು ಕುಟುಂಬ ಯೋಜನೆ ಮತ್ತು ಜನಸಂಖ್ಯಾ ನಿಯಂತ್ರಣ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ವತಿಯಿಂದ ಜಾರಿಗೊಳಿಸಲಾಯಿತು. ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಅದು ಸಂಪೂರ್ಣವಾಗಿ ಜಾರಿಯಾಗುವವರೆಗೆ ರಾಷ್ಟ್ರಪತಿ ಚುನಾವಣೆ, ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಮತ್ತು ಅನುದಾನ ಹಂಚಿಕೆ, ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಸ್ಥಾನಗಳ ನಿಗದಿಗೆ ಅದನ್ನೇ ಮಾದರಿಯನ್ನಾಗಿಸಲು ನಿರ್ಧಾರ ಕೈಗೊಳ್ಳಲಾಗಿತ್ತು.

2001ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದೇಶದ ಸಂವಿಧಾನಕ್ಕೆ 1976ರಲ್ಲಿ ಕೈಗೊಂಡ 42ನೇ ತಿದ್ದುಪಡಿಯನ್ನು ಬದಲಾವಣೆ ಮಾಡುವ ಬಗ್ಗೆ ಯೋಚಿಸಿತ್ತು. ಏಕೆಂದರೆ ಅದೇ ವರ್ಷ ಜನಗಣತಿಯೂ ನಡೆದಿತ್ತು. ಹೀಗಾಗಿ 84ನೇ ತಿದ್ದುಪಡಿಯ
ನ್ವಯ ದೇಶಾದ್ಯಂತ ಇನ್ನೂ ಕೂಡ ಕುಟುಂಬ ಯೋಜನೆ ಮತ್ತು ಜನಸಂಖ್ಯೆ ನಿಯಂತ್ರಣ ದೇಶದ ವಿವಿಧ ರಾಜ್ಯಗಳಲ್ಲಿ ತೃಪ್ತಿಕರವಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಬದಲು ಮಾಡುವ ಅವಧಿಯನ್ನು 2026ಕ್ಕೆ ವಿಸ್ತರಿಸಿತ್ತು. ಹೀಗಾಗಿ 2031ರ ಜನಗಣತಿಯಲ್ಲಿ ಬರುವ ಮಾಹಿತಿಯನ್ನು ಆಧರಿಸಿ ಲೋಕಸಭೆ, ವಿಧಾನ ಸಭೆ ಚುನಾವಣೆಗಾಗಿ ಸ್ಥಾನಗಳ ಮರು ಬದಲಾವಣೆ, ಅನುದಾನ ಹಂಚಿಕೆಗೆ 1971ನೇ ಜನಸಂಖ್ಯೆಯನ್ನೇ ತಳಹದಿಯನ್ನಾಗಿರಿಸಲು ನಿರ್ಧರಿಸಲಾಯಿತು.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಯಾವುದೇ ಪಕ್ಷಗಳ ಸರ್ಕಾರ ಇರಲಿ, ಕೇಂದ್ರ ಸರ್ಕಾರದಿಂದ ಜಾರಿ ಮಾಡಲಾಗಿರುವ ಯೋಜನೆಗಳ ಜಾರಿಯಲ್ಲಿ ಉತ್ತರ ಭಾರತದ ರಾಜ್ಯಗಳಿಗಿಂತ ಮುಂದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಒಂದು ವೇಳೆ ಹದಿನೈದನೇ ಹಣಕಾಸು ಆಯೋಗದ ಶಿಫಾರಸು ಜಾರಿಗೊಳಿಸಿದರೆ ಉತ್ತರ ಭಾರತದ ರಾಜ್ಯಗಳಿಗಿಂತ ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ. ಅದು ಹೇಗೆಂದರೆ ಕರ್ನಾಟಕವೂ ಸೇರಿದಂತೆ ಈ ಭಾಗದ ರಾಜ್ಯಗಳಲ್ಲಿ ಕುಟುಂಬ ಯೋಜನೆ ಮತ್ತು ಜನ ಸಂಖ್ಯಾ ನಿಯಂತ್ರಣ ಯೋಜನೆ ಅನುಷ್ಠಾನ ಕಟ್ಟುನಿಟ್ಟಾಗಿ ಜಾರಿಯಾಗಿದೆ. ಇದರಿಂದಾಗಿ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ, ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗು
ತ್ತದೆ. ಜತೆಗೆ ಕೇಂದ್ರದಿಂದ ಕೊಡಮಾಡುವ ತೆರಿಗೆ ಮತ್ತು ಅನುದಾನದ ಪಾಲು ಗಣನೀಯವಾಗಿಯೇ ಕಡಿಮೆಯಾಗುತ್ತದೆ. ಹೀಗಾಗಿಯೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಉತ್ತರದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಯೋಜನೆಗಳ ಅನುಷ್ಠಾನದಲ್ಲಿ ದಕ್ಷಿಣ ಭಾರತದ ರಾಜ್ಯಗಳೇ ಮುಂದು ಎಂದು ಪ್ರತಿಪಾದಿಸಿದ್ದು. 

ಉತ್ತರ ಭಾರತದ ಸ್ಥಳೀಯ ನಾಯಕರಿಗೆ 15ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದರೆ ನಷ್ಟವೇನೂ ಇಲ್ಲ. ಅವರಿಗೆ ಹೆಚ್ಚಿನ ಅನುದಾನವೇ ಸಿಗುತ್ತದೆ. ಚುನಾವಣೆ ಗಾಗಿ ಸೀಟು ಹಂಚಿಕೆಯಲ್ಲಿ ಅವರಿಗೇ ಲಾಭ. ದಕ್ಷಿಣ ರಾಜ್ಯಗಳಿಗೆ ನಷ್ಟ ಎನ್ನುವುದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇರಳ ಹಣಕಾಸು ಸಚಿವ ಥಾಮಸ್‌ ಐಸಾಕ್‌, ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ವಾದ. ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌, ತಮಿಳುನಾಡು ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ದ್ರಾವಿಡ ನಾಡು ಎಂಬ ಹಳೆಯ, ಆದರೂ, ಸದ್ಯ ಸ್ಥಿತಿಗೆ ಸಂಬಂಧಿಸಿದಂತೆ ಹೊಸ
ವಾದಕ್ಕೆ ಬಾಯಿಬಿಟ್ಟಿಲ್ಲ.

ಕೇಂದ್ರದಲ್ಲಿ ಯಾವುದೇ ಸರ್ಕಾರ ಇರಲಿ, ವಿತ್ತೀಯ ಶಿಸ್ತು ಜಾರಿಗೆ ಒತ್ತು ಕೊಡಲೇಬೇಕು. ಅದಕ್ಕಾಗಿಯೇ 15ನೇ ಹಣಕಾಸು ಆಯೋಗದ ನೀತಿ ನಿರೂಪಣೆ(ಟಮ್ಸ್‌ì ಆಫ್ ರೆಫ‌ರೆನ್ಸ್‌) ಯಲ್ಲಿ ಅದಕ್ಕೆ ಹೆಚ್ಚು ನೀಡಲು ಸೂಚಿಸಲಾಗಿದೆ. 2019ರ ಅಕ್ಟೋಬರ್‌ನಲ್ಲಿ ಎನ್‌.ಕೆ.ಸಿಂಗ್‌ ನೇತೃತ್ವದ ಸಮಿತಿ ವರದಿ ಸಲ್ಲಿಸಲಿದೆ. ಹದಿನೈದನೇ ಹಣಕಾಸು ಆಯೋಗದ ಉಲ್ಲೇಖದಲ್ಲಿ ವಿವಿಧ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಎಷ್ಟು ಪ್ರಮಾಣ ದಲ್ಲಿ ಜಾರಿಯಾಗಿದೆ ಎಂಬ ಬಗ್ಗೆಯೂ ಕಟ್ಟುನಿಟ್ಟಾಗಿ ಗಮನಹರಿಸಲಿದೆ. ಜತೆಗೆ ತಮಿಳುನಾಡಿನಲ್ಲಿ ದಿ.ಜಯಲಲಿತಾ ಮುಖ್ಯಮಂತ್ರಿ 
ಯಾಗಿದ್ದಾಗ ಜಾರಿ ಮಾಡಿದ್ದ “ಅಮ್ಮಾ ಕ್ಯಾಂಟೀನ್‌’, “ಅಮ್ಮಾ ನೀರು’ ಮುಂತಾದ ಜನಮರುಳು ಯೋಜನೆಗಳ ವಿರುದ್ಧ ನಿಗಾ ವಹಿಸಿದೆ. ವಿತ್ತೀಯ ಶಿಸ್ತು ಕಾಪಾಡಲು ಇಂಥ ಯೋಜನೆಗಳಿಗೆ ಕಡಿವಾಣ ಹಾಕಬೇಕೆನ್ನುವುದು ನಿಜವಾದರೂ, ಭಾರತದಂಥ ದೇಶಗಳಲ್ಲಿ ಅದನ್ನು ಖಡಕ್‌ ಆಗಿ ಜಾರಿ ಮಾಡುವುದು ಕಷ್ಟ .

ಹೆಚ್ಚುತ್ತಿರುವ ವಿತ್ತೀಯ ಕೊರತೆ ತಗ್ಗಿಸಲು ಮತ್ತು ಇತ್ತೀಚಿನ ವರ್ಷಗಳಲ್ಲಿ ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಫ‌ಲ ಬೀರಲಾರಂಭಿಸಿರುವ ಹಿನ್ನೆಲೆಯಲ್ಲಿ ಜನ ಮರುಳು ಯೋಜನೆಗಳಿಗೆ ಕಡಿವಾಣ ಬಿದ್ದರೂ ಆಶ್ಚರ್ಯವಿಲ್ಲ. ಆಯೋಗ ಏನೇ ಶಿಫಾರಸು ಮಾಡಿದರೂ, ಅದು ಅನುಷ್ಠಾನಗೊಳ್ಳುವುದು 2019ರ ನವೆಂಬರ್‌ ಬಳಿಕವೇ. ಅದಿನ್ನೂ ದೂರದ ಮಾತಾಯಿತು. ವಾಸ್ತವವಾಗಿ ನೋಡಿದರೆ, ದ್ರಾವಿಡ ನಾಡು ಎಂಬ ಹಳೆಯದಾಗಿರುವ ಹೊಸ ವಿಚಾರ ಅನುಷ್ಠಾನ ಕಷ್ಟವೇ. ಕೇಂದ್ರದಿಂದ ರಾಜ್ಯಗಳಿಗೆ ತಾರತಮ್ಯ ನಿಜವೇ ಎನ್ನುವುದಾ
ದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಗಳಿಗೆ ಹೆಚ್ಚಿನ ರೀತಿಯಲ್ಲಿ ಹಣಕಾಸು ನೆರವು ನೀಡುವಲ್ಲಿ ಕೊಂಚವಾದರೂ ಪ್ರಯತ್ನ ನಡೆದಿದೆ. ಅದಕ್ಕೆ ಉದಾಹರಣೆ ನೀಡುವುದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದರೂ, ಬಹಳಷ್ಟು ಯೋಜನೆಗೆ ಕೇಂದ್ರದಿಂದ ಭರಪೂರವಾಗಿಯೇ ಹಣಕಾಸಿನ ನೆರವು ಪೂರೈಕೆಯಾಗಿದೆ.

ಇನ್ನು 1970ರ ಕಾಲಘಟ್ಟಕ್ಕೂ, 2018ರಲ್ಲಿನ ಮನಃಸ್ಥಿತಿಗೂ ವ್ಯತ್ಯಾಸಗಳಿವೆ. ಪ್ರಾಂತೀಯ ಭಾವನೆಯನ್ನು ಕೆರಳಿಸಿ ಪ್ರತ್ಯೇಕತೆಯ ನಿಲುವು ಘೋಷಣೆ ಮಾಡಿದರೆ ಏನಾಗಲಿದೆ ಎನ್ನುವುದೂ ಸ್ಪಷ್ಟ. ಅದಕ್ಕೆ ಹೆಚ್ಚಿನ ಒತ್ತಾಸೆ ಸಿಗುವುದು ಕಷ್ಟ. ಇದರ ಹೊರತಾಗಿಯೂ ಏ.10ರಂದು ಕೇರಳ ಹಣಕಾಸು ಸಚಿವ ಥಾಮಸ್‌ ಐಸಾಕ್‌ ನೇತೃತ್ವದಲ್ಲಿ ನಡೆಯುವ ದಕ್ಷಿಣ ಭಾರತದ ರಾಜ್ಯಗಳ ಹಣಕಾಸು ಸಚಿವರ ಸಭೆಯಲ್ಲೇನು ನಿರ್ಣಯವಾಗುತ್ತದೆ ಎನ್ನುವುದು ಮುಖ್ಯವಾಗಲಿದೆ.

ಮತ್ತೂಂದು ಪ್ರಮುಖ ವಿಚಾರವೇನೆಂದರೆ ಬಿಜೆಪಿಗೆ ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತ ಇತರ ರಾಜ್ಯಗಳಲ್ಲಿ ಹೇಳಿ ಕೊಳ್ಳುವಂಥ ತಳಹದಿ ಏನಿಲ್ಲ. ಆಂಧ್ರಪ್ರದೇಶದಲ್ಲಿ ಟಿಡಿಪಿ ಜತೆಗೆ ನಾಲ್ಕು ವರ್ಷಗಳ ಮೈತ್ರಿ ಮಾಡಿಕೊಂಡದ್ದನ್ನು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲವೆಂಬ ನೆಪದಲ್ಲಿ ಕಡಿದು ಕೊಂಡಿದೆ. ಇನ್ನು ತಮಿಳುನಾಡಿನಲ್ಲಂತೂ ಬಿಜೆಪಿ ಎಂದರೆ ಹಿಂದಿ ಪಕ್ಷ ಎಂಬ ಶಿರೋನಾಮೆ ಇದೆ. ಹೀಗಾಗಿ, ಆ ರಾಜ್ಯದಲ್ಲಿ ಪಕ್ಷ ವಿಸ್ತರಣೆಗೆ ಆ ಹಿನ್ನೆಲೆ ಅಡ್ಡಿಯಾಗಿದೆ. ಕೇರಳದಲ್ಲಿ ಎಲ್‌ಡಿಎಫ್, ಯುಡಿಎಫ್ನದ್ದೇ ಕಾರ್ಯಭಾರ. ಆದರೆ ಅಲ್ಲಿನ ಕೆಲವೊಂದು ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ.

25 ವರ್ಷಗಳಿಂದ ತ್ರಿಪುರಾದಲ್ಲಿ ಅಧಿಕಾರದಲ್ಲಿದ್ದ ಸಿಪಿಎಂ ಅನ್ನು ಕಿತ್ತೂಗೆದ ಕಾರಣ ಇನ್ನು ಮೂರು ವರ್ಷಗಳ ಬಳಿಕ ನಡೆಯುವ ವಿಧಾನಸಭೆಯಲ್ಲಿ ಅದೇ ಮಾದರಿಯ ಫ‌ಲಿತಾಂಶ ಬರಲಿದೆ ಎಂಬ ಕನಸು ಬಿಜೆಪಿಯದ್ದು. ಹೇಳಿಕೇಳಿ ಮುಂದಿನ ಲೋಕಸಭೆ ಚುನಾವಣೆ ನಡೆಯಲು ಸರಿಯಾಗಿ ಒಂದು ವರ್ಷವಷ್ಟೇ ಬಾಕಿ ಉಳಿದಿದೆ. ಅದಕ್ಕೆ ಪೂರಕವಾಗಿ ಸಿದ್ಧತೆಗಳು ನಡೆದಿವೆ. ಹೀಗಾಗಿ ವಿವಿಧ ಕಸರತ್ತುಗಳು ನಡೆದಿವೆ. ದ್ರಾವಿಡ ನಾಡು ಮಾತೂ ಅದರಲ್ಲಿ ಒಂದು ಎನ್ನಬೇಕಷ್ಟೆ.

*ಸದಾಶಿವ ಕೆ.

Advertisement

Udayavani is now on Telegram. Click here to join our channel and stay updated with the latest news.

Next