ಪಾತಪಾಳ್ಯ: ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು, ಸುಶಿಕ್ಷಿತರಾದಲ್ಲಿ ಬಾಲ್ಯ ವಿವಾಹದಂತಹ ಅನಿಷ್ಟ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ಕಿರಿಯ ಆರೋಗ್ಯ ಸಹಾಯಕಿ ಜೀನತ್ ತಿಳಿಸಿದರು.
ಗರಿಗಿರೆಡ್ಡಿಪಾಳ್ಯದಲ್ಲಿ ಟಿ.ಡಿ.ಎನ್.ಹೆಚ್.ಎಲ್. ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ಬಾಲ್ಯ ವಿವಾಹಿತ ಹೆಣ್ಣು ಮಕ್ಕಳ ಗರ್ಭದಾರಣೆ ಮುಂದೂಡಿಕೆಯ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಅಂಧಶ್ರದ್ಧೆಗೊಳಗಾಗಿ ಬಾಲ್ಯ ವಿವಾಹ ನಡೆಸಲಾಗುತ್ತಿದೆ.
ಮಕ್ಕಳ ಬಾಲ್ಯ ಕಸಿದುಕೊಳ್ಳಲಾಗುತ್ತಿದೆ: ಬಾಲ್ಯ ವಿವಾಹ ಪದ್ಧತಿಯು ಮಕ್ಕಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸ್ವಾತಂತ್ರ ಪೂರ್ವದಿಂದಲೂ ಅನೇಕ ಮಹನೀಯರು ಹೋರಾಟ ನಡೆಸುತ್ತಾ ಬಂದಿದ್ದಾರೆ. ವೈವಾಹಿಕ ಬಂಧನದ ಬಗ್ಗೆ ಅರಿವು ಹೊಂದಿಲ್ಲದ ಮಕ್ಕಳನ್ನು ವಿವಾಹ ಬಂಧನಕ್ಕೆ ದೂಡುವುದರ ಮೂಲಕ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎಂದರು.
ಮಾನಸಿಕ ದೌರ್ಬಲ್ಯ: ಶಾರೀರಿಕವಾಗಿ ಬೆಳವಣಿಗೆ ಹೊಂದಿಲ್ಲದ ಹೆಣ್ಣು ಮಕ್ಕಳು ಬೇಗ ಮಕ್ಕಳನ್ನು ಹೆಡೆಯುವುದರಿಂದ ತಾಯಿ ಶಿಶುವಿನ ಮರಣ ಪ್ರಮಾಣ ಹೆಚ್ಚಾಗಿದೆ. 18 ವರ್ಷಕ್ಕೂ ಮೊದಲು ಹೆಣ್ಣು ಮಕ್ಕಳಲ್ಲಿ ಶಾರೀರಿಕ ಬೆಳವಣಿಗೆ ಆಗಿರುವುದಿಲ್ಲ. ಇದಕ್ಕೂ ಮೊದಲೇ ಮದುವೆ ಮಾಡಿಸುವುದರಿಂದ ಇವರಿಗೆ ಹುಟ್ಟುವ ಮಗು ಉತ್ತಮ ಆರೋಗ್ಯ ಹೊಂದಲು ಸಾಧ್ಯವಿಲ್ಲ. ಆ ಹೆಣ್ಣು ಮಕ್ಕಳೂ ಮಾನಸಿಕವಾಗಿ ದೌರ್ಬಲ್ಯಕ್ಕೆ ಒಳಗಾಗುತ್ತಾರೆ.
ಶಾಲೆ ಬಿಡುವ ಹೆಣ್ಣು ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತದೆ. ಮದುವೆ ಎಂಬ ವೈವಾಹಿಕ ಜೀವನದ ಬಗ್ಗೆ ಅರಿಯುವುದರ ಮೊದಲೇ ವಿದವೆಯಾಗುತ್ತಾರೆ. ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ಕನಿಷ್ಟ ವಯೋಮಿತಿಯನ್ನು ನಿಗದಿಗೊಳಿಸಿ ಕಾಯ್ದೆ ಜಾರಿಗೊಳಿಸಿದೆ. ಬಾಲ್ಯ ವಿವಾಹ ಪದ್ಧತಿಯನ್ನು ನಿಷೇಧಿಸಿ ಕಾಯ್ದೆ ಜಾರಿಗೊಳಿಸಿದ್ದರೂ ನಡೆಯುತ್ತಿವೆ. ಈ ಅನಿಷ್ಟ ಪಿಡುಗನ್ನು ತೊಲಗಿಸಬೇಕಾಗಿದೆ.
ಈ ಬಗ್ಗೆ ಸಂಘ ಸಂಸ್ಥೆಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸಮುದಾಯ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು. ಟಿ.ಡಿ.ಎನ್.ಹೆಚ್.ಎಲ್.ಸಂಸ್ಥೆಯ ಜಿಲ್ಲಾ ಸಂಯೋಜಕ ಅಶೋಕ್, ಕೌನ್ಸಿಲರ್‌ಗಳಾದ ಎನ್.ಮಂಜುಳ, ಭಾರತಿ, ಅಯ್ಯಪ್ಪ, ಮುನಿರಾಜು ಇದ್ದರು.