Advertisement

ಬಿಡಾಡಿ ದನಗಳ ಹಾವಳಿ ನಿವಾರಿಸಿ

10:02 AM Jun 25, 2019 | Suhan S |

ಮೂಡಿಗೆರೆ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ವಾಹನ ಗಳು ಹಾಗೂ ನಾಗರಿಕರ ಓಡಾಟಕ್ಕೆ ಇನ್ನಿಲ್ಲದ ತೊಂದರೆಯಾಗುತ್ತಿದೆ. ಆದರೆ, ಇದನ್ನು ತಡೆಗಟ್ಟುವಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

ಹಲವಾರು ವರ್ಷಗಳಿಂದ ಬಿಡಾಡಿ ದನಗಳು ಪಟ್ಟಣದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಬೀಡುಬಿಡುವುದು ಸರ್ವೇ ಸಾಮಾನ್ಯವಾಗಿದೆ. ಪಟ್ಟಣದಲ್ಲಿ ಅಲ್ಲಲ್ಲಿ ಗೋವುಗಳು ಬೀಡುಬಿಟ್ಟಿರುವುದರಿಂದ ಗೋ ಕಳ್ಳತನ ಯಥೇಚ್ಛವಾಗಿ ನಡೆಯುತ್ತಿದೆ. ಇತ್ತೀಚೆಗೆ ಗೋ ಕಳ್ಳರು ಐಷಾರಾಮಿ ವಾಹನಗಳಲ್ಲಿ ದನಗಳನ್ನು ಕದ್ದು ತುಂಬಿಸುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಇಲ್ಲಿಯವರೆಗೂ ಯಾವುದೇ ಆರೋಪಿಯನ್ನು ಪತ್ತೆ ಮಾಡಿರುವುದು ಕಂಡಬಂದಿಲ್ಲ.

ಹಿಂಡುಹಿಂಡಾಗಿ ಗೋವುಗಳು ಪಟ್ಟಣದಲ್ಲಿ ಓಡಾಡುತ್ತಿರುವುದರಿಂದ ವಾಹನ ಸಂಚಾರಕ್ಕೂ ತೀವ್ರ ಅಡಚಣೆಯುಂಟಾಗಿದೆ. ಕೆಲವೊಂದು ಹಸುಗಳು ರಸ್ತೆ ಬದಿ, ಪಟ್ಟಣದ ಮೈದಾನದಲ್ಲಿ ಕರು ಹಾಕುತ್ತವೆ. ಕರುಗಳೊಂದಿಗೆ ರಸ್ತೆಯಲ್ಲಿ ಹಾದುಹೋಗುವ ಸಮಯ ಹಸುಗಳು ಮತ್ತು ಗೂಳಿಗಳು ದಾರಿಹೋಕರ ಮೇಲೆ ದಾಳಿ ನಡೆಸಿರುವ ಉದಾಹರಣೆಗಳು ಸಾಕಷ್ಟಿವೆ.

ಬಿಡಾಡಿ ದನಗಳು ರಸ್ತೆಯಲ್ಲಿ ಮಲಗುವುದರಿಂದ ದಾರಿಹೋಕರಿಗಲ್ಲದೇ ವಾಹನ ಚಾಲಕರಿಗೂ ಕಿರಿಕಿರಿ ಉಂಟು ಮಾಡಿ, ಅಪಘಾತಗಳಿಗೆ ಕಾರಣವಾಗುತ್ತಿವೆ. ಅಲ್ಲದೇ, ಕೆಲವು ಭಾರೀ ವಾಹನಗಳು ರಸ್ತೆಯಲ್ಲಿ ಮಲಗಿರುವ ಗೋವುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಗೋವುಗಳ ಕಾಲು, ಸೊಂಟ ಮುರಿದು, ತಿರುಗಾಡಲಾಗದೇ ಪರದಾಡುತ್ತಿರುವುದು ಕಂಡುಬಂದಿದೆ.

ಇತ್ತೀಚೆಗೆ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಬಸ್‌ ಒಂದು ಕರುವೊಂದರ ಮೇಲೆ ಹರಿದ ಪರಿಣಾಮ ಕರು ಸಾವನ್ನಪ್ಪಿದೆ. ಪಟ್ಟಣ ಪಂಚಾಯ್ತಿ ಈ ರೀತಿ ಬೀಡುಬಿಡುತ್ತಿರುವ ಗೋವುಗಳ ವಾರಸುದಾರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

Advertisement

ಬಿಡಾಡಿ ದನಗಳನ್ನು ರಸ್ತೆಗೆ ಬಿಡುತ್ತಿರುವ ಅಂತಹ ಎಲ್ಲಾ ದನಗಳ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಥವಾ ಪಟ್ಟಣ ಪಂಚಾಯಿತಿಯೇ ಈ ಬೀಡಾಡಿ ಗೋವುಗಳನ್ನು ಹಿಡಿದು ಗೋಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಕಣ್ಣುಮುಚ್ಚಿ ಕುಳಿತಿರುವ ಪಪಂ ಅಧಿಕಾರಿಗಳ ಬೇಜವಾಬ್ದಾರಿತನವನ್ನು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಪಟ್ಟಣದ ಬಸ್‌ ನಿಲ್ದಾಣ ವೃತ್ತ, ಪೊಲೀಸ್‌ ಠಾಣೆ ವೃತ್ತ, ವೇಣುಗೋಪಾಲ ದೇವಸ್ಥಾನದ ಮುಂಭಾಗ, ಛತ್ರ ಮೈದಾನ, ಚಿತ್ರಮಂದಿರದ ಮುಂಭಾಗ, ಕೆ.ಎಂ.ರಸ್ತೆ, ತತ್ಕೊಳ ರಸ್ತೆ, ಸಂತೆ ಮೈದಾನ ಮುಂತಾದ ಆಯಕಟ್ಟಿನ ಸ್ಥಳಗಳೇ ಬಿಡಾಡಿ ದನಗಳ ತಂಗುದಾಣಗಳಾಗಿವೆ. ಗೋ ಕಳ್ಳರಿಗೆ ವರದಾನವಾಗುವ ರೀತಿಯಲ್ಲಿದೆ. ಗೋ ಕಳ್ಳತನ ತಡೆಗಡ್ಡುವ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಹೆಚ್ಚಿನ ಆಸಕ್ತಿ ವಹಿಸದಿರುವುದರಿಂದ ಗೋ ಕಳ್ಳರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ.

ಮುಂದಾದರೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಬೀಡಾಡಿ ದನಗಳಿಂದಾಗುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಗೋ ಕಳ್ಳತನಕ್ಕೆ ಅವಕಾಶ ಮಾಡಿಕೊಡದೇ ಬೀಡಾಡಿ ದನಗಳ ಬಗ್ಗೆ ಸೂಕ್ರ ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next