ರಾಯಚೂರು: ಒಂದೆಡೆ ದೇಶ ತಾಂತ್ರಿಕವಾಗಿ ಹೇಗೆ ಬೆಳೆಯುತ್ತಿದೆಯೋ, ಮತ್ತೂಂದೆಡೆ ಅದೇ ವೇಗದಲ್ಲಿ ಜಾತೀಯತೆ ಕೂಡ ಬೇರು ಬಿಡುತ್ತಿದೆ. ಜಾತೀಯತೆ ನಿವಾರಿಸುವ ಶಕ್ತಿ ಸಾಹಿತ್ಯಕ್ಕೆ ಮಾತ್ರ ಇದೆ ಎಂದು ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಭಾನುವಾರ ದಲಿತ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ವೆಂಕಟೇಶ ಬೇವಿನಬೆಂಚಿ ರಚಿಸಿದ ಮಹಾತ್ಮ ಗಾಂ ಧೀಜಿ ಮತ್ತು ಸುಭಾಷ್ ಚಂದ್ರಬೋಸ್ ಹಾಗೂ ಶಿವಶಂಕರ ಸೀಗೆಹಟ್ಟಿ ಅವರ ಕರುಳ ಬಳ್ಳಿ ಮತ್ತು ಜೀವಕಾರುಣ್ಯ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ದಲಿತ ಸಾಹಿತ್ಯಕ್ಕೆ ತನ್ನದೆಯಾದ ಇತಿಹಾಸವಿದೆ. ಬಡವರ, ಶೋಷಿತರ ಧ್ವನಿಯಾಗಿದೆ. ದಲಿತ ಸಾಹಿತ್ಯಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರವಾಗಿದೆ.
ಈ ಭಾಗದ ಸಾಹಿತಿಗಳು ಸಾಕಷ್ಟು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ ಎಂದರು. ವೈಚಾರಿಕತೆ, ಸಾಕ್ಷರತೆ ಬೆಳೆದಂತೆ ಮೌಡ್ಯ, ಅಂಧಾಚಾರಗಳು ತೊಲಗಬೇಕಾಗಿತ್ತು. ಆದರೆ, ಅದು ಹೆಚ್ಚಾಗುತ್ತಲೇ ಸಾಗುತ್ತಿದೆ. ಇಂದಿಗೂ ದೇಶದಲ್ಲಿ ಜಾತಿ ಹೆಸರಿನಲ್ಲಿ ಶೋಷಣೆ ನಡೆಯುತ್ತಿರುವುದು ವಿಪರ್ಯಾಸ. ಡಾ| ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿ ಮಾಡುವ ಮೂಲಕ ಸರ್ವರ ಸಮಾನತೆಗೆ ಶ್ರಮಿಸಿದ್ದರು. ಅನೇಕ ಕಡೆ ಜಾತಿ ಹೆಸರಿನಲ್ಲಿ ಇಂದಿಗೂ ಅಸಮಾನತೆ ಮುಂದುವರಿಯುತ್ತಿರುವುದು ಖೇದಕರ ಎಂದರು.
ಮಾನವೀಯ ಮೌಲ್ಯ ಬಿತ್ತರಿಸುವ ಗ್ರಂಥ, ಲಿಖೀತ ಸಂವಿಧಾನವನ್ನು ಕಡೆಗಣಿಸಿ ಅಲಿಖೀತ ನಿಯಮಗಳನ್ನೇ ಅನುಕರಿಸುವುದು ಸರಿಯಲ್ಲ. ದೇಶದಲ್ಲಿ ಭೀಮನಾಮ ಬಿಟ್ಟು ರಾಮನಾಮ ಜನ ಹೆಚ್ಚುತ್ತಿದೆ. ರಾಮನಾಮದಿಂದ ಹಸಿವು ನೀಗಿಸಲು ಅಸಾಧ್ಯ. ಮನುಷ್ಯ-ಮನುಷ್ಯ ನಡುವೆ ಪ್ರೀತಿ ವಾತ್ಸಲ್ಯ ಮೂಡಬೇಕು ಎಂದರು.
ಅವಕಾಶವಾದಿಗಳು, ಸಮಯ ಸಾಧಕರು ಸಂವಿಧಾನ ಶಕ್ತಿ ಕುಗ್ಗಿಸಲು ಯತ್ನಿಸುತ್ತಿದ್ದಾರೆ. ದೇಶದ ಸಂವಿಧಾನಕ್ಕೆ ಧಕ್ಕೆಯಾದರೆ ದೇಶಕ್ಕೆ ಆಪತ್ತು ಎಂಬುದನ್ನು ಅರಿಯಬೇಕು. ಸಂವಿಧಾನ ರಕ್ಷಣೆ ಆಗಲೇಬೆಕು. ಅಂಬೇಡ್ಕರ್ ಅವರ ದೂರದೃಷ್ಟಿ, ಕಾಳಜಿಯನ್ನು ಎಲ್ಲರೂ ಅರಿತು ಬಾಳಬೇಕು.
ಸಮಾಜದ ಬದಲಾವಣೆಗೆ ಸಂಘಟಿತವಾಗಿ ಹೋರಾಟ, ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು. ಸಾಹಿತಿ ಡಿ.ಎಚ್. ಕಂಬಳಿ, ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ಬಿ.ಎಂ.ಶರಭೇಂದ್ರ ಸ್ವಾಮಿ ಕೃತಿ ಪರಿಚಯಿಸಿದರು. ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಮೋಹನ್, ರಾಜೇಂದ್ರ ಜಲ್ದಾರ್, ಹಿರಿಯ ಉಪನೋಂದಣಾ ಧಿಕಾರಿ ರಾಮಚಂದ್ರಪ್ಪ, ಜಿಲ್ಲಾ ಶಿಕ್ಷಣಾಧಿ ಕಾರಿ ಎಚ್.ಸುಖದೇವ್, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚೆಟಾಳ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಶಿಖರಮಠ, ಬಸವರಾಜ ಬ್ಯಾಗವಾಟ್, ಬಿ.ವಿಜಯ ರಾಜೇಂದ್ರ, ವೆಂಕಟೇಶ ಬೇವಿನಬೆಂಚಿ, ಕೋರೆನಲ್, ರಾಜೀವ್‌ಗೌಡ, ಹಂಪಿ ಕನ್ನಡ ವಿವಿಯ ಶಿವಕುಮಾರ ಸೇರಿ ಇತರರಿದ್ದರು.