Advertisement

ಬಿಟ್‌ಕಾಯಿನ್‌ ಹಗರಣ ಗೊಂದಲಗಳನ್ನು ಬೇಗನೇ ನಿವಾರಿಸಿ

12:39 AM Nov 12, 2021 | Team Udayavani |

ರಾಜ್ಯ ಸರಕಾರ ಮತ್ತು ವಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿರುವ ಬಿಟ್‌ಕಾಯಿನ್‌ ಹಗರಣದ ಬಗ್ಗೆ ರಾಜ್ಯದ ಜನರು ಗೊಂದಲಕ್ಕೀಡಾಗಿದ್ದಾರೆ. ಈ ಹಗರಣದಲ್ಲಿ ವಿಪಕ್ಷ ನಾಯಕರ ಮಕ್ಕಳೇ ಇದ್ದಾರೆ ಎಂಬುದು ಆಡಳಿತ ಪಕ್ಷದ ನಾಯಕರ ಆರೋಪವಾದರೆ ಆಡಳಿತ ಪಕ್ಷದವರೇ ಇದ್ದಾರೆ ಎಂಬುದು ವಿಪಕ್ಷ ನಾಯಕರ ಆರೋಪ. ಆದರೆ ಇವರಿಬ್ಬರ ಜಗಳದಲ್ಲಿ ಜನತೆ ಮಾತ್ರ ಏನಿದು ಹಗರಣ? ಇದರಲ್ಲಿ ಯಾರು ಭಾಗಿಯಾಗಿರಬಹುದು? ಹೇಗೆ ಹಣ ಸಂಪಾದಿಸಿದ್ದಾರೆ ಎಂಬುದನ್ನು ಅರಿಯದೇ ಕುಳಿತಿದ್ದಾರೆ.

Advertisement

ಇಡೀ ಬಿಟ್‌ಕಾಯಿನ್‌ ಹಗರಣ ಶುರುವಾಗುವುದೇ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಶ್ರೀಕಿ ಬಂಧನದ ಅನಂತರ. ಈತ ಹಲವಾರು ಖಾತೆಗಳನ್ನು ಹ್ಯಾಕ್‌ ಮಾಡಿ ಸಾವಿರಾರು ಕೋಟಿ ರೂ.ಗಳನ್ನು ಅಕ್ರಮವಾಗಿ ಸಂಪಾದಿಸಿದ್ದಾನೆ ಎಂಬ ಆರೋಪವಿದೆ. ಅಲ್ಲದೆ ಈತನಿಗೆ ಬಹಳಷ್ಟು ಪ್ರಭಾವಿಗಳೇ ಸಹಕಾರ ನೀಡಿದ್ದಾರೆ ಎಂಬ ಅಂಶಗಳು ಇವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಬಿಟ್‌ಕಾಯಿನ್‌ ಸುದ್ದಿ ಶ್ರೀಕಿ ಸುತ್ತ ಗಿರಕಿ ಹೊಡೆಯುವುದನ್ನು ಬಿಟ್ಟು ರಾಜಕಾರಣಿಗಳ ಸುತ್ತ ಸುತ್ತುತ್ತಿದೆ. ಅಲ್ಲದೆ ಬಿಜೆಪಿ ಹೈಕಮಾಂಡ್‌ ಕೂಡ ಈ ಬಿಟ್‌ಕಾಯಿನ್‌ ಹಗರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂಬ ಸುದ್ದಿಗಳಿವೆ. ಅತ್ತ ಸ್ವತಃ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ಮುಖ್ಯಮಂತ್ರಿಗಳನ್ನು ಕರೆಯಿಸಿ ಈ ಹಗರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂಬ ವರದಿಗಳು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ:ನ.18ರಂದು ಈ ಶತಮಾನದ ಅತಿದೀರ್ಘಾವಧಿಯ ಭಾಗಶಃ ಚಂದ್ರಗ್ರಹಣ

ಬಿಟ್‌ ಕಾಯಿನ್‌ ಪ್ರಕರಣ ಸಂಬಂಧ ಕಾಂಗ್ರೆಸ್‌ ನಾಯಕರು ಬಲವಾಗಿಯೇ ಆರೋಪ ಮಾಡುತ್ತಿದ್ದಾರೆ. ಬುಧವಾರವಂತೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ನೇರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಭಾಗಿಯಾದಂತೆ ತೋರುತ್ತಿದೆ ಎಂದು ಹೇಳಿದ್ದರು. ಜತೆಗೆ ಕಾಂಗ್ರೆಸ್‌ ನಾಯಕರು ಭಾಗಿಯಾಗಿದ್ದರೆ, ಅವರನ್ನು ಬಂಧಿಸಿ ಎಂದು ಆಗ್ರಹಿಸಿದ್ದರು. ಅವರ ಹೆಸರು ಹೇಳುವಂತೆಯೂ ಸವಾಲು ಹಾಕಿದ್ದರು. ಇದರ ನಡುವೆಯೇ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸಿಎಂ ಬದಲಾಗುತ್ತಾರೆ ಎಂದು ಹೇಳಿದ್ದರು.
ಇದಕ್ಕೆ ದಿಲ್ಲಿಯಲ್ಲಿ ತಿರುಗೇಟು ನೀಡಿದ್ದ ಬಸವರಾಜ ಬೊಮ್ಮಾಯಿ ಅವರು, ಇಡೀ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕರ ಮಕ್ಕಳೇ ಭಾಗಿಯಾಗಿದ್ದಾರೆ. ಈ ಬಗ್ಗೆ ತನಿಖೆಯೂ ನಡೆಯುತ್ತಿದೆ ಎಂದಿದ್ದರು.

ಬಿಜೆಪಿ ನಾಯಕರೂ ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿ, ನಿಮ್ಮವರೇ ಭಾಗಿಯಾಗಿದ್ದಾರೆ ಎಂದು ತಿರುಗೇಟು ನೀಡಿ ದ್ದರು. ಈ ವಾದ ವಿವಾದ ಗುರುವಾರವೂ ಮುಂದುವರಿದಿದೆ. ಅತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿಕೊಟ್ಟಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಇಡೀ ಪ್ರಕರಣ ಮತ್ತಷ್ಟು ಕಾವು ಪಡೆದುಕೊಂಡಿದೆ.

Advertisement

ಇವೆಲ್ಲದರ ನಡುವೆ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿಯೊಂದು ಜನಧನ ಖಾತೆಯಿಂದ ತಲಾ 2 ರೂ.ಗಳಂತೆ 6 ಸಾವಿರ ಕೋಟಿ ರೂ. ಹ್ಯಾಕ್‌ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆಯೂ ರಾಜ್ಯ ಸರಕಾರ ಗಂಭೀರವಾಗಿ ತನಿಖೆ ನ‚ಡೆಸಬೇಕಾಗಿದೆ. ಸದ್ಯ ಬಿಟ್‌ಕಾಯಿನ್‌ ಹಗರಣದಲ್ಲಿ ಅವರಿದ್ದಾರೆ, ಇವರಿದ್ದಾರೆ ಎಂಬ ಮಾತುಗಳ ನಡುವೆ, ನಿಜವಾದ ಆರೋಪಿಗಳನ್ನು ಕಂಡುಹಿಡಿದು ಅವರನ್ನು ಕಾನೂನಿನ ಕುಣಿಕೆಯೊಳಗೆ ತರಬೇಕು. ಇಲ್ಲದಿದ್ದರೆ, ರಾಜಕೀಯವಾಗಿ ಆಡಳಿತ   ವಿಪಕ್ಷ ನಾಯಕರು ಆರೋಪ  ಪ್ರತ್ಯಾರೋಪಕ್ಕೇ ಸೀಮಿತವಾಗಿ ನೈಜ ಆರೋಪಿಗಳನ್ನು ಬಯಲಿಗೆಳೆಯುವುದಿಲ್ಲ ಎಂಬ ಮಾತುಗಳು ಸಾರ್ವಜನಿಕರ ಕಡೆಯಿಂದ ಬರುವಂತೆ ಆಗಬಾರದು.

Advertisement

Udayavani is now on Telegram. Click here to join our channel and stay updated with the latest news.

Next