ಬಾಗೇಪಲ್ಲಿ: ಗ್ರಾಮ ಪಂಚಾಯ್ತಿ, ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ತಾಲೂಕಿನಲ್ಲಿ ಅರ್ಹ 2,229 ಫಲಾನುಭವಿಗಳಿಗೆ ನಿವೇಶನ ಮತ್ತು ವಸತಿ ಇನ್ನೂ ದೊರೆತಿಲ್ಲ.
ಅತಿ ಹಿಂದುಳಿದ, ಗಡಿ ತಾಲೂಕಿನ ಪರಿಶಿಷ್ಟ ಜಾತಿ-1538, ಪರಿಶಿಷ್ಟ ಪಂಗಡ-1037, ಸಾಮಾನ್ಯ – 8217, ಅಲ್ಪಸಂಖ್ಯಾತ-1152 ಸೇರಿ 11,944 ನಿವೇಶನ, ಮನೆರಹಿತರ ಕುಟುಂಬಗಳಿವೆ. 25 ಪಂಚಾಯ್ತಿಯಿಂದ 2632 ಫಲಾನುಭವಿ ಗಳು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕೇವಲ 403 ಮಂದಿಗೆ ಮಾತ್ರ ಹಕ್ಕುಪತ್ರ ವಿತರಣೆ ಆಗಿದೆ. ಉಳಿದಂತೆ 2,229 ಮಂದಿ ಫಲಾನುಭವಿಗಳಿಗೆ ಇನ್ನು ಹಕ್ಕು ಪತ್ರ ವಿತರಣೆಯಾಗಿಲ್ಲ. ಇದಕ್ಕೆ ಅಧಿಕಾರಿಗಳು ನೀಡುವ ಉತ್ತರವು ಅಸ್ಪಷ್ಟ. ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ಹಕ್ಕುಪತ್ರ ದೊರೆತಿಲ್ಲ. ಇದರಿಂದ ಬಡವರು ಕಚೇರಿಗೆ ಅಲೆಯುವುದು ತಪ್ಪಿಲ್ಲ.
ಹಕ್ಕುಪತ್ರ ಮಾತ್ರ ವಿತರಣೆ: ತಾಲೂಕಿನಲ್ಲಿ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ ಒಂಬತ್ತು ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಮಾತ್ರ ವಿತರಿಸಲಾಗಿದೆ. ಮೂರು ಪಂಚಾಯಿತಿಗಳಲ್ಲಿ ನಿವೇಶನಕ್ಕೆ ಜಾಗ ಗುರುತಿಸ ಲಾಗಿದೆ. 11 ಗ್ರಾಮಗಳ ಫಲಾನುಭವಿಗಳಿಗೆ ನಿವೇಶನ ನೀಡಲು ಸಮೀಕ್ಷೆ ನಡೆಯಬೇಕಿದೆ. ಎರಡು ಗ್ರಾಮಗಳಿಗೆ ನಿವೇಶನ ಹಂಚಿಕೆ ಮಾಡಲು ಸ್ಥಳ ವಾಸಕ್ಕೆ ಯೋಗ್ಯವಿಲ್ಲ ಎಂದು ಎಇಇ ವರದಿ ನೀಡಿದ್ದಾರೆ.
ತಾಲೂಕಿನಲ್ಲಿ 92.17 ಎಕರೆ ಜಾಗದಲ್ಲಿ ಅನುಬಂಧ-1ರಲ್ಲಿ 57.37 ಕುಂಟೆ, ಅನುಬಂಧ-2 ರಲ್ಲಿ 34.20 ಕುಂಟೆಯಷ್ಟು ಜಾಗವನ್ನು ಅರ್ಹ ಫಲಾನುಭವಿಗಳಿಗೆ ವಸತಿ, ನಿವೇಶರಹಿತರಿಗೆ ಹಂಚಿಕೆ ಮಾಡಲು ಜಾಗ ಗುರುತಿಸಲಾಗಿದೆ.
ಗುಡಿಸಲಿನಲ್ಲಿ ವಾಸ: ತಾಲೂಕಿನ 25 ಗ್ರಾಮ ಪಂಚಾಯ್ತಿಗಳಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಜನರು ವಾಸವಾಗಿದ್ದಾರೆ. ಕೆಲವರಿಗೆ ಮನೆ, ನಿವೇಶನ ಮಂಜೂರಾದರೂ, ವಸತಿ ಭಾಗ್ಯ ಸಿಕ್ಕಿಲ್ಲ. ತಾಲೂಕಿನ ಪರಗೋಡು ಗ್ರಾಮದಲ್ಲಿನ ಕಾಲೋನಿಯ ನಿವಾಸಿಗಳು ಇಂದಿಗೂ ಗುಡಿಸಿಲಿನಲ್ಲಿ ವಾಸವಾಗಿದ್ದಾರೆ. ಇನ್ನೂ ಕೆಲವರು ವಸತಿ ಇಲ್ಲದೇ ಶಾಲಾ, ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ವಾಸಿಸುತ್ತಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ, ನಿವೇಶನ, ವಸತಿ ರಹಿತರನ್ನು ಗುರುತಿಸುತ್ತಿಲ್ಲ.