Advertisement

26/11 ಮುಂಬಯಿ ದಾಳಿ: ಹನ್ನೊಂದು ವರ್ಷಗಳ ಹಿಂದೆ ಈ ಕರಾಳ ದಿನದಂದು ಏನು ನಡೆಯಿತು?

09:47 AM Nov 28, 2019 | Hari Prasad |

ಮುಂಬಯಿ: 26/11 ಇದನ್ನು ಕೇಳಿದೊಡನೆ ಮುಂಬಯಿಗರ ಎದೆ ಇವತ್ತಿಗೂ ಝಲ್ಲೆನ್ನುತ್ತದೆ. ಕೇವಲ ಮುಂಬೈಗರದ್ದು ಮಾತ್ರವಲ್ಲ, ಭಾರತೀಯರೆಲ್ಲರ ಎದೆಯಲ್ಲೊಂದು ನೋವಿನ ಝಲಕ್ ಮೂಡುತ್ತದೆ, ಮನಸ್ಸಿನಲ್ಲಿ ರೋಷದ ಜ್ವಾಲೆ ಉರಿದೇಳುತ್ತದೆ, ಹೃದಯದಲ್ಲಿ ಅನುಕಂಪದ ಅಲೆಯೊಂದು ಮೂಡಿ ಎರಡು ಹನಿ ಕಂಬನಿ ರೂಪದಲ್ಲಿ ಅದು ಕಣ್ಣಿನಿಂದ ಕೆನ್ನೆಗೆ ಜಾರುತ್ತದೆ.

Advertisement

ಇದಕ್ಕೆಲ್ಲಾ ಕಾರಣ 2008ರ ನವಂಬರ್ 26ರ ರಾತ್ರಿ ಪಾಕಿಸ್ಥಾನದ ಕಡೆಯಿಂದ ಸಮುದ್ರ ಮಾರ್ಗವಾಗಿ ವಾಣಿಜ್ಯ ನಗರಿಯ ಕಡಲ ತೀರಕ್ಕೆ ಬಂದಿಳಿದ ಯಮಸ್ವರೂಪಿ ಉಗ್ರರು ತಮ್ಮ ಕೈಯಲ್ಲಿದ್ದ ಅತ್ಯಾಧುನಿಕ ಕಲಾಶ್ನಿಕೋವ್ ಬಂದೂಕು ಮತ್ತು ಇತರೇ ಸ್ಪೋಟಕಗಳಿಂದ ಮುಂಬಯಿ ನಗರದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ ಅಮಾಯಕರ ಮಾರಣ ಹೋಮ ಮಾಡಿದ ದಿನವದು.

ಭಾರತ ಮಾತ್ರವಲ್ಲ ಇಡೀ ವಿಶ್ವವೇ ಭಯೋತ್ಪಾದನೆಯ ವಿರುದ್ಧ ಸಮರ ಸಾರುತ್ತಿರುವ ಈ ಸಂದರ್ಭದಲ್ಲಿ ಹನ್ನೊಂದು ವರ್ಷಗಳ ಹಿಂದೆ ಸುಮಾರು 166 ಜನ ಅಮಾಯಕರನ್ನು ಬಲಿಪಡೆದುಕೊಂಡ ಘಟನೆ ನಡೆದ ಈ ರಕ್ತರಾತ್ರಿಯ ಕರಾಳ ಘಟನೆಯನ್ನು ನೆನಪಿಸಿಕೊಂಡೇ ಮುಂದೆ ಸಾಗಬೇಕಾಗುತ್ತದೆ.

ಆ ದಿವಸ ಏನಾಗಿತ್ತು?
ನವಂಬರ್ 26 ಬುಧವಾರ, ಹಗಲು ಹೊತ್ತಿನಲ್ಲಿ ಸದಾ ಗಿಜಿಗಜಿಗುಡುವ ಮುಂಬೈ ನಗರದ ರಸ್ತೆಗಳಲ್ಲಿ ದಟ್ಟಣೆ ಒಂದು ಹಂತಕ್ಕೆ ಕಡಿಮೆಯಾಗಿತ್ತು. ಆದರೆ ಮುಂಬಯಿ ರೈಲು ನಿಲ್ದಾಣ ಮಾತ್ರ ದೇಶದ ವಿವಿಧ ಭಾಗಗಳಿಗೆ ಹೋಗುವ ಮತ್ತು ಬೇರೆ ಬೇರೆ ಕಡೆಗಳಿಂದ ವಾಣುಜ್ಯ ನಗರಿಗೆ ಬಂದಿಳಿಯುತ್ತಿರುವ ಪ್ರಯಾಣಿಕರಿಂದ ತುಂಬಿ ಹೋಗಿತ್ತು.

ಇದೇ ಸಂದರ್ಭದಲ್ಲಿ ವಾಣಿಜ್ಯ ನಗರಿಯ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ‘ಗೇಟ್ ವೇ ಆಫ್ ಇಂಡಿಯಾ’ದ ಸಮೀಪದ ಸಮುದ್ರ ತೀರಕ್ಕೆ ಅದೊಂದು ಬೋಟ್ ನಿಧಾನವಾಗಿ ತೀರದತ್ತ ಸಾಗಿಬರುತ್ತಿರುತ್ತದೆ. ಆ ಸಂದರ್ಭದಲ್ಲಿ ಮುಂಬಯಿಗೇನು ಗೊತ್ತಿತ್ತು ಅದರಲ್ಲಿದ್ದವರು ಸಾಕ್ಷಾತ್ ಯಮನ ಕಿಂಕರರು ಎಂದು!

Advertisement

ಪಾಕಿಸ್ಥಾನದ ಬಂದರು ನಗರಿ ಕರಾಚಿಯಿಂದ ಬೋಟ್ ನಲ್ಲಿ ಹೊರಟಿದ್ದ ಲಷ್ಕರ್-ಇ-ತೆಯ್ಬಾ ಉಗ್ರ ಸಂಘಟನೆಯ 10 ಮಂದಿ ನಿಷ್ಕರುಣಿ ಉಗ್ರರು ಸಮುದ್ರ ಮಾರ್ಗ ಮಧ್ಯದಲ್ಲಿ ಭಾರತೀಯ ಮೀನುಗಾರಿಕಾ ದೋಣಿಯನ್ನು ವಶಪಡಿಸಿಕೊಂಡು ಅದರಲ್ಲಿದ್ದವರನ್ನು ಕೊಂದು ಆ ದೋಣಿಯ ಮೂಲಕ ಸದ್ದೇ ಇಲ್ಲದೆ ಮುಂಬಯಿ ನಗರದ ಕಡಲ ಕಿನಾರೆಗೆ ಬಂದು ಆ ನೆಲದ ಮೇಲೆ ಕಾಲಿಟ್ಟಿದ್ದರು. ಅದಾಗಲೇ ಸಮುದ್ರದ ಮೇಲಿಂದ ಬೀಸಿ ಬರುತ್ತಿದ್ದ ಗಾಳಿ ಸಾವಿನ ವಾಸನೆಯನ್ನು ಮೆಲ್ಲನೆ ಹೊತ್ತು ಬಂದಂತಿತ್ತು!

ಹಾಗೆ ಮುಂಬಯಿ ನಗರಕ್ಕೆ ಕಾಲಿಟ್ಟಿದ್ದ ಆ 10 ಜನ ಉಗ್ರರು ಒಂದು ಪೊಲೀಸ್ ವ್ಯಾನ್ ಸೇರಿದಂತೆ ವಿವಿಧ ವಾಹನಗಳನ್ನು ವಶಪಡಿಸಿಕೊಂಡು ತಮ್ಮತಮ್ಮಲ್ಲೇ ನಗರದ ವಿವಿಧ ಭಾಗಗಳಿಗೆ ಚದುರಿಹೋಗಿದ್ದರು. ಮುಂಬಯಿ ಮಾರಣಹೋಮಕ್ಕೆ ಕ್ಷಣಗಣನೆ ಪ್ರಾರಂಭವಾಗಿತ್ತು!

ಆ ನರರಾಕ್ಷಸರ ಟಾರ್ಗೆಟ್ ಆದ್ರೂ ಯಾವುದು ಆಗಿತ್ತು ಅಂದ್ರೆ ಜನನಿಬಿಡ ಪ್ರದೇಶಗಳು, ವಿದೇಶಿ ಪ್ರವಾಸಿಗರು ಉಳಿದುಕೊಂಡಿದ್ದ ಐಶಾರಾಮಿ ಹೊಟೇಲ್ ಗಳು, ನೈಟ್ ಕ್ಲಬ್ ಗಳು.. ಹೀಗೆ ಜನಸಂದಣಿ ಇರುವ ಜಾಗಕ್ಕೆ ನುಗ್ಗಿ ಎಗ್ಗಿಲ್ಲದೇ ತಮ್ಮ ಕೈಯಲ್ಲಿದ್ದ ಬಂದೂಕುಗಳಿಂದ ಸಿಕ್ಕಸಿಕ್ಕವರನ್ನೆಲ್ಲಾ ಶೂಟ್ ಮಾಡುವ ನಿರ್ಧಾರದಿಂದಲೇ ಆ ಉಗ್ರರು ಮುಂಬಯಿಗೆ ಎಂಟ್ರಿ ಕೊಟ್ಟಿದ್ದರು.

ನಗರದ ಪ್ರತಿಷ್ಠಿತ ಹೊಟೇಲ್ ಗಳಾಗಿದ್ದ ತಾಜ್ ಮತ್ತು ಒಬೆರಾಯ್ ಟ್ರೈಡೆಂಟ್, ತಾಜ್ ಮಹಲ್ ಪ್ಯಾಲೇಸ್ ಮತ್ತು ಟವರ್ ಹೊಟೇಲ್, ನರಿಮನ್ ನಲ್ಲಿದ್ದ ಯಹೂದಿಗಳ ಒಂದು ಕಲ್ಚರಲ್ ಸೆಂಟರ್ – ಛಾಬಾದ್ ಹೌಸ್, ಲಿಯೋಫಾರ್ಡ್ ಕೆಫೆ, ಜನನಿಬಿಡ ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣ ಮತ್ತು ಕಾಮಾ ಆಸ್ಪತ್ರೆ. ಆದರೆ ಈ ನರರೂಪಿ ರಾಕ್ಷಸರ ಗುಂಡಿನ ದಾಳಿಗೆ ಅತೀ ಹೆಚ್ಚಿನ ಬಲಿ ನಡೆದಿದ್ದು ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣದಲ್ಲೇ. ಇಲ್ಲಿ ಸುಮಾರು 98 ನಿಮಿಷಗಳ ಕಾಲ ನಡೆದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಸುಮಾರು 58 ಜನ ಸಾವನ್ನಪ್ಪಿದ್ದರು ಮತ್ತು 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಛತ್ರಪತಿ ಶಿವಾಜಿ ಟರ್ಮಿನಲ್ಸ್ ನಲ್ಲಿ ರಾತ್ರಿ 9.20ಕ್ಕೆ ಪ್ರಾರಂಭವಾದ ಗುಂಡಿನ ದಾಳಿ ಸುಮಾರು ಒಂದೂವರೆ ಗಂಟೆಗಳವರೆಗೆ ಸಾಗಿತ್ತು. ಇದು ಈ ಯಮಕಿಂಕರರು ಪ್ರಾರಂಭಿಸಿದ್ದ ಮೊದಲ ದಾಳಿಯಾಗಿತ್ತು. ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಿದ್ದವರು, ವ್ಯಾಪಾರದಲ್ಲಿ ನಿರತರಾಗಿದ್ದವರು, ತಮ್ಮ ರೈಲು ತಡವಾಗಿ ಬರುತ್ತದೆಂದು ನಿಲ್ದಾಣದ ಮೂಲೆಯಲ್ಲಿ ನಿದ್ರೆಗೆ ಜಾರಿದ್ದವರು.. ಹೀಗೆ ಯಾರನ್ನೂ ಬಿಡದೇ, ಯಾರ ಮೇಲೂ ಕರುಣೆ ತೋರಿಸದೇ ಈ ಉಗ್ರರು ಮನಬಂದಂತೆ ಫೈರಿಂಗ್ ಮಾಡುತ್ತಿದ್ದರೆ, ಕೆಲವೇ ಕ್ಷಣಗಳಲ್ಲಿ ರೈಲು ನಿಲ್ದಾಣ ಮಹಾಸಂಗ್ರಾಮದ ಬಳಿಕದ ಯುದ್ಧಭೂಮಿಯಂತಾಗಿತ್ತು!

ಇನ್ನು ಇದಾದ 8-10 ನಿಮಿಷಗಳ ಬಳಿಕ ಎರಡನೇ ದಾಳಿ ವರದಿಯಾಗಿತ್ತು. ನರಿಮನ್ ಹೌಸ್ ವಾಣಿಜ್ಯ ಮತ್ತು ವಸತಿ ಸಂಕೀರ್ಣದಲ್ಲಿ. ಇಲ್ಲಿಗೆ ಬರುವುದಕ್ಕೂ ಮೊದಲು ಉಗ್ರರು ಗ್ಯಾಸ್ ಸ್ಟೇಷನ್ ಒಂದನ್ನು ಸ್ಪೋಟಿಸಿ ಬಂದಿದ್ದರು. ಮೂರು ದಿನಗಳ ಕಾಲ ನರಿಮನ್ ಹೌಸ್ ಒತ್ತೆ ಇರಿಸಿಕೊಂಡಿದ್ದ ಉಗ್ರರು ಈ ಸಂದರ್ಭದಲ್ಲಿ ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿರಿಸಿಕೊಂಡು ಯಹೂದಿ ಧಾರ್ಮಿಕ ಮುಖಂಡ (ರಬ್ಬಿ) ಮತ್ತು ಆತನ ಪತ್ನಿಯ ಸಹಿತ ಐವರು ಇಸ್ರೇಲಿಗರನ್ನು ಕೊಂದಿದ್ದರು. ಈ ದಾಳಿಯಲ್ಲಿ ರಬ್ಬಿ ಅವರ ಎರಡು ವರ್ಷದ ಪುತ್ರ ಮಾತ್ರವೇ ಬದುಕುಳಿದಿದ್ದ. ಆ ಮಗುವನ್ನು ಸಾಂದ್ರಾ ಸ್ಯಾಮ್ಯುವೆಲ್ಸ್ ಎಂಬ ಭಾರತೀಯ ಮಹಿಳೆ ರಕ್ಷಿಸಿದ್ದರು.

ಇದಾದ ಬಳಿಕ ರಾತ್ರಿ 9.40ರ ಹೊತ್ತಿಗೆ ಇವರಲ್ಲಿ ನಾಲ್ವರು ಉಗ್ರರು ನೇರವಾಗಿ ದಾಳಿಯಿಟ್ಟಿದ್ದು ವಿದೇಶಿ ಪ್ರಜೆಗಳ ಸಹಿತ ಸ್ಥಳೀಯರಿಂದ ಕಿಕ್ಕಿರಿದು ತುಂಬಿದ್ದ ಲಿಯೋಪಾರ್ಡ್ ಕೆಫೆಗೆ. ಅಲ್ಲಿದ್ದವರ ಮೇಲೆ ಸುಮಾರು 10-15 ನಿಮಿಷಗಳವರೆಗೆ ಗುಂಡಿನ ಮಳೆಗರೆದ ಉಗ್ರರು ಒಟ್ಟು ಹತ್ತು ಜನರನ್ನು ಹತ್ಯೆ ಮಾಡಿದ್ದರು. ಇನ್ನು ತಾವು ಸುತ್ತಾಡಿದ್ದ ಎರಡು ಟ್ಯಾಕ್ಸಿಗಳಲ್ಲಿ ಉಗ್ರರು ಟೈಮರ್ ಬಾಂಬ್ ಗಳನ್ನು ಅಳವಡಿಸಿದ್ದರಿಂದ ಅದು ಸ್ಪೋಟಿಸಿ ಐವರು ಸಾವನ್ನಪ್ಪಿದ್ದರು ಮತ್ತು 15 ಜನ ಗಾಯಗೊಂಡಿದ್ದರು.

ಇಲ್ಲಿಂದ ಬಳಿಕ ಉಗ್ರರು ತಮ್ಮ ಕೆಟ್ಟ ದೃಷ್ಟಿಯನ್ನು ಬೀರಿದ್ದು ವಾಣಿಜ್ಯ ನಗರಿಯ ಪ್ರತಿಷ್ಠೆಯ ಮುಕುಟವಾಗಿದ್ದ ಹೊಟೇಲ್ ತಾಜ್ ಮಹಲ್ ಪ್ಯಾಲೇಸ್ ಮತ್ತು ಟವರ್ ಹೊಟೇಲ್ ಗಳ ಒಳಕ್ಕೆ. ಹೊಟೇಲಿನ ಸೈಡ್ ಡೋರ್ ಮುರಿದು ಒಳನುಗ್ಗಿದ ಉಗ್ರರು ಮೊದಲಿಗೆ ಸ್ವಿಮ್ಮಿಂಗ್ ಪೂಲ್ ಬಳಿ ಸೇರಿದ್ದವರ ಮೇಲೆ ಗುಂಡಿನ ದಾಳಿ ನಡೆಸಿ ಬಳಿಕ ನೇರವಾಗಿ ಹೊಟೇಲ್ ಒಳಗಿದ್ದ ರೆಸ್ಟೋರೆಂಟ್ ಮತ್ತು ಬಾರ್ ಗಳಿಗೆ ನುಗ್ಗಿ ಮನಸೋ ಇಚ್ಛೆ ಗುಂಡಿನ ದಾಳಿಯನ್ನು ನಡೆಸುತ್ತಾರೆ.

ಈ ಹೊಟೇಲ್ ಅನ್ನು ನಾಲ್ಕು ದಿನಗಳ ಕಾಲ ತಮ್ಮ ವಶದಲ್ಲಿರಿಸಿಕೊಂಡಿದ್ದ ಉಗ್ರರು ಇಲ್ಲಿ ಹತ್ಯೆ ಮಾಡಿದ್ದು ಬರೋಬ್ಬರಿ 31 ಜನರನ್ನು! ಇಷ್ಟೂ ಸಾಲದೆಂಬಂತೆ ತಾಜ್ ಮಹಲ್ ಹೊಟೇಲ್ ನ ಮುಖ್ಯ ಗುಂಬಜ್ ಅಡಿಭಾಗದಲ್ಲಿ ಗ್ರೆನೇಡ್ ಇರಿಸಿ ಅದನ್ನು ಸ್ಪೋಟಿಸಿದ್ದ ಕಾರಣ ತಾಜ್ ಹೊಟೇಲಿನ ಮೇಲ್ಮಹಡಿವರೆಗೆ ಬೆಂಕಿ ವ್ಯಾಪಿಸಿ ಅಪಾರ ನಷ್ಟಕ್ಕೆ ಕಾರಣವಾಗಿತ್ತು. ಈ ಪ್ರತಿಷ್ಠಿತ ಹೊಟೇಲ್ ನಲ್ಲಿ ಸಿಲುಕಿಕೊಂಡಿದ್ದವರನ್ನು ಕಮಾಂಡೋ ಕಾರ್ಯಾಚರಣೆಯಲ್ಲಿ ತೆರವುಗೊಳಿಸಲಾಯಿತು.

ರೆಸ್ಟೋರೆಂಟ್ ಮೂಲಕ ಒಬೆರಾಯ್ ಹೊಟೇಲ್ ಒಳಗೆ ಪ್ರವೇಶಿಸಿದ್ದ ಇಬ್ಬರು ಉಗ್ರರು ಅಲ್ಲಿದ್ದವರ ಮೇಲೆಯೂ ಸತತ ಗುಂಡಿನ ದಾಳಿಯನ್ನು ನಡೆಸುತ್ತಾರೆ. ಬಳಿಕ ಹೊಟೆಲ್ ಒಳಭಾಗಗಳಿಗೆ ನುಗ್ಗಿ ಅಲ್ಲಿ ಸಿಕ್ಕವರನ್ನೆಲ್ಲಾ ಶೂಟ್ ಮಾಡುತ್ತಾ ಹೋಗುತ್ತಾರೆ.

ಇನ್ನು ಛತ್ರಪತಿ ರೈಲ್ವೇ ನಿಲ್ದಾಣದಲ್ಲಿ ಮಾರಣಹೋಮ ನಡೆಸಿದ ಉಗ್ರ ಕಸಬ್ ಹಾಗೂ ಇಸ್ಮಾಯಿಲ್ ಖಾನ್ ನೇರವಾಗಿ ಕಾಮಾ ಆಸ್ಪತ್ರೆಗೆ ನುಗ್ಗುತ್ತಾರೆ. ಆದರೆ ಅದೃಷ್ಟವಶಾತ್ ಹಿಂದಿನ ಗೇಟ್ ಮೂಲಕ ಈ ರಾಕ್ಷಸರು ಶೂಟ್ ಮಾಡಿಕೊಂಡು ಬರುವುದನ್ನು ಕಂಡು ಎಚ್ಚೆತ್ತುಕೊಂಡ ಆಸ್ಪತ್ರೆಯ ಸಿಬ್ಬಂದಿ ಎಲ್ಲಾ ಬಾಗಿಲುಗಳನ್ನು ಲಾಕ್ ಮಾಡುವ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದನ್ನು ತಡೆಯುತ್ತಾರೆ.

ಕಾಮಾ ಆಸ್ಪತ್ರೆಯ ಬಳಿಯೇ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕೆರೆ ಸೇರಿದಂತೆ ಆರು ಜನ ಪೊಲೀಸರನ್ನು ಕೊಂದು ಅವರ ಜೀಪನ್ನು ಹೈಜಾಕ್ ಮಾಡಿಕೊಂಡು ಮುಂದೆ ಸಾಗುತ್ತಾರೆ.

ಹೀಗೆ ಹೈಜಾಕ್ ಮಾಡಿದ ಪೊಲೀಸ್ ಜೀಪಿನಲ್ಲಿ ಬರುತ್ತಿದ್ದ ಇನ್ನೊಬ್ಬ ಉಗ್ರನನ್ನು ಗಿರ್ಗಾಂವ್ ಚೌಪಟ್ಟಿ ಹತ್ತಿರ ಪೊಲೀಸ್ ಪಡೆ ನಾಕಾಬಂಧಿ ಮೂಲಕ ಅಡ್ಡ ಹಾಕುತ್ತದೆ ಈ ಸಂದರ್ಭದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ತುಕಾರಾಂ ಒಂಬ್ಲೆ ಅವರು ಕಸಬ್ ಕೈಯಲ್ಲಿದ್ದ ರೈಪಲ್ ನ ಬ್ಯಾರೆಲ್ ಎಳೆಯುತ್ತಾರೆ ಆಗ ಕಸಬ್ ಟ್ರಿಗ್ಗರ್ ಅದುಮಿದಾಗ ಒಂಬ್ಲೆ ದೇಹದ ಒಳಹೊಕ್ಕಿದ ಗುಂಡು ಅವರನ್ನು ನಿಸ್ತೇಜಗೊಳಿಸುತ್ತದೆ. ಆದರೆ ಉಳಿದ ಪೊಲೀಸರು ಕಸಬ್ ನನ್ನು ಜೀವಂತ ಸೆರೆಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ ಇನ್ನೊಬ್ಬ ಉಗ್ರ ಇಸ್ಮಾಯಿಲ್ ಖಾನ್ ಪೊಲೀಸ್ ಗುಂಡಿಗೆ ಬಲಿಯಾಗುತ್ತಾನೆ.

ಹೀಗೆ ಸೆರೆಸಿಕ್ಕದ ಉಗ್ರ ಕಸಬ್ ನಿಂದ ಈ ಬೃಹತ್ ಸಂಚಿನ ಹಿಂದೆ ಪಾಕಿಸ್ಥಾನದ ಪಾತ್ರ ಮತ್ತು ಲಷ್ಕರ್ ಇ ತೆಯ್ಬಾ ಉಗ್ರ ಸಂಘಟನೆಯ ನೇರ ಭಾಗೀದಾರಿಕೆಯ ಕುರಿತಾದ ಮಹತ್ವದ ಮಾಹಿತಿಗಳು ಲಭ್ಯವಾಗುತ್ತವೆ. ಭಾರತ ಸರಕಾರದ ಅನುಮತಿಯ ಮೇರೆಗೆ ಅಮೆರಿಕಾದ ತನಿಖಾ ಸಂಸ್ಥೆ ಎಫ್.ಬಿ.ಐ. ಉಗ್ರ ಕಸಬ್ ನನ್ನು ನೇರ ವಿಚಾರಣೆ ನಡೆಸುತ್ತದೆ.

ತಾನು ಪಾಕಿಸ್ಥಾನದ ಪ್ರಜೆಯಾಗಿದ್ದು ಎಲ್.ಇ.ಟಿ. ಉಗ್ರ ಸಂಘಟನೆಯ ಸದಸ್ಯ ಎಂಬುದರಿಂದ ಹಿಡಿದು ಮುಂಬೈ ದಾಳಿ ಸಂಚಿನ ಎಲ್ಲಾ ಮಾಹಿತಿಗಳನ್ನುಕಸಬ್ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ ಬಾಯಿ ಬಿಡುತ್ತಾನೆ. ಅಂತಿಮವಾಗಿ ಕಸಬ್ ಗೆ 2010ರ ಮೇ ತಿಂಗಳಲ್ಲಿ ಮರಣ ದಂಡನೆ ವಿಧಿಸಿ ವಿಚಾರಣಾ ನ್ಯಾಯಾಲಯ ತೀರ್ಪನ್ನು ನೀಡುತ್ತದೆ. ಮತ್ತು ಆತನನ್ನು 2012ರಲ್ಲಿ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.

ಮುಂಬಯಿ ಮಾರಣ ಹೋಮದ ನೇರ ರೂವಾರಿಗಳಾದ ಹತ್ತು ಜನ ಉಗ್ರರಲ್ಲಿ ಒಂಭತ್ತು ಜನರನ್ನು ಹೊಡೆದುರುಳಿಸುವಲ್ಲಿ ಮುಂಬಯಿ ಪೊಲೀಸ್, ಮತ್ತು ನಮ್ಮ ಕಮಾಂಡೋಗಳು ಯಶಸ್ವಿಯಾದರೆ ಅಜ್ಮಲ್ ಕಸಬ್ ಎಂಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಮುಂಬಯಿ ಪೊಲೀಸರು ಯಶಸ್ವಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next