ಬೆಂಗಳೂರು: ಹನ್ನೊಂದು ವರ್ಷದ ಬಾಲಕಿ ನೀರಿನ ಸಂಪ್‌ನಲ್ಲಿ ಮುಳುಗಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ರಾಜಗೋಪಾಲನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದ್ದು , ಪೋಷಕರು ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಪುತ್ರಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನ ನೋವಲ್ಲೂ ಮಾನವೀಯತೆ ಮೆರೆದಿದ್ದಾರೆ.
ಗಣಪತಿನಗರ ನಿವಾಸಿ ದುಗ್ಗಪ್ಪ ಮತ್ತು ಪಾರ್ವತಿ ದಂಪತಿಯ ಎರಡನೇ ಪುತ್ರಿ ಜ್ಯೋತಿ ಮೃತ ಬಾಲಕಿ. ಸ್ಥಳೀಯ ನಿವಾಸಿ ಅನುºನಾಥನ್ ಎಂಬುವರ ಮನೆಯ ಸಂಪ್‌ನಲ್ಲಿ ಈ ದುರಂತ ಸಂಭವಿಸಿದೆ.
ಈ ಸಂಬಂಧ ಮೃತಳ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಉದ್ದೇಶಪೂರ್ವಕವಾಗಿಯೇ ಕೃತ್ಯ ಎಸಗಿದ್ದಾರೆ ಎಂದು ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ನಿರ್ಲಕ್ಷ್ಯ ಆರೋಪದಡಿ ಮನೆಯ ಮಾಲೀಕ, ಗುಜರಿ ವ್ಯಾಪಾರಿ ಅನುºನಾಥನ್, ಆತನ ಪತ್ನಿ ರೇಣುಕಾದೇವಿ ಹಾಗೂ ಸಹೋದರಿಯ ಪತಿ ಮುನಿಸ್ವಾಮಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಯಾದಗಿರಿ ಜಿಲ್ಲೆ ಮೂಲದ ದುಗ್ಗಪ್ಪ -ಪಾರ್ವತಿ ದಂಪತಿ ಇಪ್ಪತ್ತು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ರಾಜಗೋಪಾಲನಗರದ ಗಣಪತಿನಗರದ ಒಂದನೇ ಕ್ರಾಸ್‌ನಲ್ಲಿ ವಾಸವಾಗಿದ್ದಾರೆ. ದಂಪತಿಗೆ ಆರು ಹೆಣ್ಣು ಮಕ್ಕಳು. ದುಗ್ಗಪ್ಪ ಗಾರೆ ಕೆಲಸಗಾರ, ಪತ್ನಿ ಪಾರ್ವತಿ ಮನೆ ಕೆಲಸ ಮಾಡುತ್ತಾರೆ.
ಜ್ಯೋತಿ ಐದನೇ ತರಗತಿ ತೇರ್ಗಡೆಯಾಗಿದ್ದಳು. ಬೇಸಿಗೆ ರಜೆ ಇರುವುದರಿಂದ ಮಂಗಳವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ತಾಯಿ ಜತೆ ಕೆಲಸಕ್ಕೆ ಹೋಗಿದ್ದಳು. ಈ ವೇಳೆ ನೀರು ತರಲು ಹೋದಾಗ ಸಂಪ್‌ನಲ್ಲಿ ಆಯಾತಪ್ಪಿ ಬಿದ್ದಿದ್ದು, ಹೊರ ಬರಲಾಗದೇ ರಕ್ಷಣೆಗಾಗಿ ಕೂಗಿಕೊಂಡಿದ್ದಾಳೆ. ಮಗಳ ಕೂಗಾಟ ಕೇಳಿ ತಾಯಿ ಪಾರ್ವತಿ ಕೂಡ ಸಂಪ್ ಬಳಿ ಬಂದಾಗ ಮಗಳು ಸಂಪ್‌ನಲ್ಲಿ ಬಿದ್ದು ಒದ್ದಾಡುತ್ತಿರುವುದು ಕಂಡು ಬಂದಿದೆ.
ಕೂಡಲೇ ಮನೆ ಮಾಲೀಕ ಅನುನಾಥನ್ ಹಾಗೂ ಆತನ ಸಂಬಂಧಿ ಮುನಿಸ್ವಾಮಿಗೆ ವಿಷಯ ತಿಳಿಸಿ ಪುತ್ರಿಯನ್ನು ಕಾಪಾಡುವಂತೆ ಅಂಗಲಾಚಿದ್ದಾರೆ. ಆದರೆ, ಅವರು ಪೊಲೀಸ್ ಕೇಸ್ ಆಗುತ್ತದೆಂದು ರಕ್ಷಣೆಗೆ ಮುಂದಾಗಿಲ್ಲ. ಕೊನೆಗೆ ಪಾರ್ವತಿ ಚೀರಾಟ ಕೇಳಿ ಸ್ಥಳೀಯರು ನೆರವಿಗೆ ಬಂದಿದ್ದರು.
ಅಷ್ಟರಲ್ಲಿ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಜ್ಯೋತಿ ಮಾವ ಆನಂದ್, ಚಿಕ್ಕಪ್ಪ ಮಹದೇವ್ ಹಾಗೂ ಕೆಲ ಸ್ಥಳೀಯರು ಅನುºನಾಥನ್ ಹಾಗೂ ಮುನಿಸ್ವಾಮಿಯವರನ್ನು ಪಕ್ಕಕ್ಕೆ ತಳ್ಳಿ ನೀರಿನ ಸಂಪ್‌ಗೆ ಇಳಿದು ಮಗುವನ್ನು ಎತ್ತಿಕೊಂಡು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಮೂವರ ಬಂಧನ: ಮೃತ ಬಾಲಕಿ ಪೋಷಕರು ಮನೆ ಮಾಲೀಕರ ವಿರುದ್ಧ ದೂರು ನೀಡಿದ್ದಾರೆ. ಬಾಲಕಿ ಸಂಪ್‌ಗೆ ಬಿದ್ದು ಆಕೆಯ ಪ್ರಾಣಕ್ಕೆ ಹಾನಿಯಾಗುವ ಸಾಧ್ಯತೆಯಿದರೂ ರಕ್ಷಣೆಗೆ ಮುಂದಾಗಿಲ್ಲ. ಸ್ಥಳೀಯರು ರಕ್ಷಣೆಗೆ ಯತ್ನಿಸಿದರೂ ನಿರ್ಲಕ್ಷ್ಯ ಮಾಡಿದ್ದಾನೆ.
ಈ ಹಿನ್ನೆಲೆಯಲ್ಲಿ ಅನುಕುಮಾರ್, ಆತನ ಪತ್ನಿ ರೇಣುಕಾದೇವಿ ಹಾಗೂ ಆಕೆಯ ಸಹೋದರಿಯ ಪತಿ ಮುನಿಸ್ವಾಮಿಯನ್ನು ಬಂಧಿಸಲಾಗಿದೆ. ಸದ್ಯ ವಾಮಾಚಾರ ಮಾಡಿರುವ ಬಗ್ಗೆ ಯಾವುದೇ ಕುರುಹುಗಳು ಕಂಡು ಬಂದಿಲ್ಲ. ವಾಮಾಚಾರದ ಬಗ್ಗೆ ಅನುಮಾನವಿದ್ದರೆ ಈ ಬಗ್ಗೆಯೂ ಬಾಲಕಿ ಪಾಲಕರು ದೂರು ನೀಡಬಹುದೆಂದು ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ತಿಳಿಸಿದರು.
ಕಣ್ಣುಗಳು ದಾನ: ದುರಂತದ ನಡುವೆಯೂ ಮೃತ ಜ್ಯೋತಿ ಪೋಷಕರು, ಆಕೆಯ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಮಗಳ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಜ್ಯೋತಿ ಮಾವ ಆನಂದ್, ಜ್ಯೋತಿಯನ್ನು ಕಳೆದುಕೊಂಡಿದ್ದೇವೆ.
ಆದರೆ, ಆಕೆಯ ಕಣ್ಣುಗಳು ಇನ್ನಷ್ಟು ದಿನ ಪ್ರಪಂಚವನ್ನು ನೋಡಲಿ ಎಂಬ ಆಸೆಯಿಂದ ಕಣ್ಣುಗಳನ್ನು ದಾನ ಮಾಡಿದ್ದೇವೆ ಎಂದು ಭಾವುಕರಾದರು. ಮನೆಯ ಮಾಲೀಕರು ಜ್ಯೋತಿ ಸಂಪ್‌ಗೆ ಬಿದ್ದ ತಕ್ಷಣ ರಕ್ಷಿಸಿದ್ದರೆ ಆಕೆ ಬದುಕುಳಿಯುತ್ತಿದ್ದಳೇನೋ. ಆದರೆ, ಸಂಪ್‌ಗೆ ಟೈರ್ ಮುಚ್ಚಿ ಯಾರನ್ನೂ ರಕ್ಷಣೆ ಮಾಡಲು ಬಿಟ್ಟಿಲ್ಲ ಎಂದು ದೂರಿದರು.
ಮಾಲೀಕನ ವಿರುದ್ಧ ಹರಿಹಾಯ್ದ ಸ್ಥಳೀಯರು: ಬೆಳಗ್ಗೆ ಒಂಭತ್ತು ಗಂಟೆ ಸುಮಾರಿಗೆ ದುರ್ಘಟನೆ ಬೆಳಕಿಗೆ ಬರುತ್ತಿದ್ದಂತೆ ನೂರಾರು ಮಂದಿ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು. ಮೃತ ದೇಹವನ್ನು ಸಂಪ್‌ನಿಂದ ಹೊರ ತೆಗೆಯಲು ಅವಕಾಶ ನೀಡದ ಮನೆ ಮಾಲೀಕನ ವಿರುದ್ಧ ಹರಿಹಾಯ್ದರು. ಮತ್ತೂಂದೆಡೆ ಕೃತ್ಯದ ಹಿಂದೆ ವಾಮಾಚಾರದ ಕೈವಾಡವಿದೆ ಎಂಬ ಸುದ್ದಿ ಹೊರಬಿಳುತ್ತಿದ್ದಂತೆ ಒಂದು ಹಂತದಲ್ಲಿ ಮನೆ ಮಾಲೀಕ ಹಾಗೂ ಆತನ ಸಂಬಂಧಿಕರ ಮೇಲೆ ಹಲ್ಲೆಗೂ ಮುಂದಾದರು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲೇ ಆತಂಕದ ವಾತವರಣ ಕೂಡ ನಿರ್ಮಾಣವಾಗಿತ್ತು.
ದಯವಿಟ್ಟು ನ್ಯಾಯ ಕೊಡಿಸಿ: ರಾಜಗೋಪಾಲನಗರ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಕೃತ್ಯಕ್ಕೆ ಮನೆ ಮಾಲೀಕನೇ ನೇರ ಹೊಣೆ ಎಂದು ಬಾಲಕಿ ಪೋಷಕರು ಹಾಗೂ ಸಂಬಂಧಿಕರ ಆರೋಪಕ್ಕೆ ಧ್ವನಿಗೂಡಿಸಿದ ಕೆಲ ಸ್ಥಳೀಯರು ಠಾಣೆ ಎದುರು ಜಮಾಯಿಸಿ, ನ್ಯಾಯ ಕೊಡಿಸುವಂತೆ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಠಾಣೆಯೊಳಗೆ ದೂರು ನೀಡುವಾಗ ಒಂದು ಹಂತದಲ್ಲಿ ಮೃತಳ ಮಾವ ಆನಂದ್, ನ್ಯಾಯಕ್ಕಾಗಿ ಪೊಲೀಸ್ ಅಧಿಕಾರಿ ಕಾಲಿಗೆ ಬೀಳಲು ಮಂದಾದರು.”ನಾವು ಬಡವರು ಸರ್. ನಮ್ಮ ಅಕ್ಕನಿಗೆ ಆರು ಮಂದಿ ಹೆಣ್ಣು ಮಕ್ಕಳು. ದಯವಿಟ್ಟು ನ್ಯಾಯ ಕೊಡಿಸಿ ಎಂದು ಅಂಗಲಾಚಿದರು. ಆನಂದ್ ಅವರನ್ನು ಡಿಸಿಪಿ ಸಂತೈಸಿದರು.
ಬುಧವಾರ ಅಂತ್ಯಕ್ರಿಯೆ: ಮೃತಳ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದ್ದು, ಆಕೆಯ ತಂದೆ ದುಗ್ಗಪ್ಪ ಕಾರ್ಯನಿಮಿತ್ತ ಊರಿಗೆ ತೆರಳಿದ್ದು, ಮಂಗಳವಾರ ತಡರಾತ್ರಿ ದುಗ್ಗಪ್ಪ ವಾಪಸ್ ಬಂದಿದ್ದಾರೆ. ಹೀಗಾಗಿ ಬುಧವಾರ ಯಾದಗಿರಿ ಅಥವಾ ಬೆಂಗಳೂರಿನಲ್ಲೇ ಬಾಲಕಿಯ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಅಮವಾಸ್ಯೆ ದಿನ ನಮ್ಮ ಮನೆ ಮುಂದೆ ಮಡಿಕೆ ಹಾಗೂ ಇತರೆ ವಸ್ತುಗಳನ್ನು ಪೂಜೆ ಮಾಡಿ ಇಟ್ಟಿರುವುದು ಕಂಡು ಬಂತು. ಆದರೆ, ಯಾರು ಇಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ನಮ್ಮ ಅಣ್ಣ ಆ ಮಡಿಕೆಯನ್ನು ಸುಟ್ಟು ಹಾಕಿದ್ದರು. ಅನುºಕುಮಾರ್ ಅಮವಾಸ್ಯೆ ದಿನ ತಮಿಳುನಾಡಿನಲ್ಲಿರುವ ದೇವಾಲಯಕ್ಕೆ ಹೋಗುತ್ತಿದ್ದರು.
-ಪಾರ್ವತಿ, ಮೃತ ಜ್ಯೋತಿ ತಾಯಿ.