Advertisement

ತೋಟದ ಮನೆಗಳಿಗೆ ಸದ್ಯಕ್ಕಿಲ್ಲ ‘ಬೆಳಕು’

06:19 PM Oct 02, 2022 | Team Udayavani |

ಕೊಪ್ಪಳ: ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಬದುಕಿನೊಂದಿಗೆ ತೋಟಗಳಲ್ಲಿಯೇ ವಾಸವಾಗಿರುವ ಮನೆಗಳಿಗೆ ಈವರೆಗೂ ವಿದ್ಯುತ್‌ ಸಂಪರ್ಕವಿಲ್ಲ. ಅಂತಹ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದರೆ ಈವರೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಮಾಡಿಲ್ಲ. ಜಿಲ್ಲೆಯಲ್ಲಿನ ಜೆಸ್ಕಾಂ ಇಲಾಖೆಗೆ ಸರ್ಕಾರದಿಂದ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಯಾವುದೇ ಸ್ಪಷ್ಟ ನಿರ್ದೇಶನ ಬಂದಿಲ್ಲ. ಹಾಗಾಗಿ ತೋಟದ ಮಾಲಿಕರು ಬೆಳಕಿಗಾಗಿ ಕಾಯ್ದು ಕುಳಿತಿದ್ದಾರೆ.

Advertisement

ರಾಜ್ಯ ಬಿಜೆಪಿ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಕುಟುಂಬಗಳಿಗೆ ವಿದ್ಯುತ್‌ ಇಲ್ಲದ ಕುಟುಂಬವನ್ನು ಸರ್ವೇ ಮಾಡಿ ಅವರಿಗೆ ಬೆಳಕು ಯೋಜನೆಯಡಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಭರವಸೆ ನೀಡಿದೆ. ಈ ಕುರಿತಂತೆ ಸ್ವತಃ ಸಿಎಂ ಸೇರಿದಂತೆ ಇಂಧನ ಸಚಿವ ಸುನೀಲಕುಮಾರ ಅವರೇ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಜೆಸ್ಕಾಂ ವ್ಯಾಪ್ತಿಯಲ್ಲಿ ಈಗಾಗಲೇ ವಿದ್ಯುತ್‌ ಇಲ್ಲದ ಮನೆಗಳನ್ನು ಸರ್ವೇ ಮಾಡಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಪ್ರಯತ್ನ ನಡೆದಿದೆ. ಇದರ ಜತೆಗೆ ತೋಟಗಳಲ್ಲಿ ಕೃಷಿ ಚಟುವಟಿಕೆಯನ್ನೇ ನಂಬಿ ಜೀವನ ನಡೆಸುವ ರೈತ ಕುಟುಂಬಕ್ಕೆ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕುರಿತಂತೆ ಸ್ವತಃ ಇಂಧನ ಸಚಿವರೇ ಹೇಳಿದ್ದಾರೆ. ಆದರೆ ಈವರೆಗೂ ಜಿಲ್ಲೆಯಲ್ಲಿನ ಯಾವುದೇ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ.

ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಗ್ರಾಮದಿಂದ ರೈತರ ತೋಟದ ಮನೆ ಎಷ್ಟು ದೂರವಿದೆ. ಆ ಜಮೀನಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಎಷ್ಟು ವಿದ್ಯುತ್‌ ಕಂಬ, ತಂತಿ ಸೇರಿ ಇತರೆ ವೆಚ್ಚ ಎಷ್ಟಾಗಲಿದೆ. ಸರಕಾರ ಈ ಕುರಿತಂತೆ ಕ್ರಿಯಾಯೋಜನೆ ತಯಾರಿಸುವಂತೆ ಜೆಸ್ಕಾಂ ಅಧಿಕಾರಿಗಳ ಮೂಲಕ ಸರ್ವೇ ನಡೆಸಿತ್ತು. ಈಗಾಗಲೇ ಜೆಸ್ಕಾಂ ವ್ಯಾಪ್ತಿಯಲ್ಲಿ ಎಷ್ಟು ತೋಟದ ಮನೆಗಳಿವೆ ಎನ್ನುವ ಕುರಿತಂತೆ ರೈತರಿಂದಲೂ ಅರ್ಜಿ ಪಡೆಯಲಾಗಿದೆ. ಆದರೆ ಆ ಅರ್ಜಿಗಳು ಜೆಸ್ಕಾಂ ಇಲಾಖೆಯಲ್ಲಿಯೇ ಬಾಕಿ ಇವೆ.

ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಇಲ್ವಂತೆ : ಕೊಪ್ಪಳ ಜೆಸ್ಕಾಂಗೆ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕುರಿತಂತೆ ಸರ್ಕಾರದಿಂದ ಯಾವುದೇ ನಿರ್ದೇಶನ, ನಿರ್ದಿಷ್ಟ ಆದೇಶ ಹಾಗೂ ನಿಯಮಾವಳಿ ನಮಗೆ ಬಂದಿಲ್ಲ. ಆದರೆ ರೈತರಿಂದ ಬಂದ ಅರ್ಜಿಯನ್ನು ಮಾತ್ರ ನಾವು ಸಂಗ್ರಹಿಸಿಟ್ಟುಕೊಂಡಿದ್ದೇವೆ. ಸರ್ಕಾರ ಘೋಷಣೆ ಮಾಡಿರುವ ಬೆಳಕು ಯೋಜನೆಯೇ ಬೇರೆ, ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದೇ ಬೇರೆ ಎಂದೆನ್ನುತ್ತಿದೆ ಜೆಸ್ಕಾಂ ಇಲಾಖೆ.

“ಬೆಳಕು’ಗಾಗಿ ಕಾದು ಕುಳಿತ ರೈತ ಸಮೂಹ : ರೈತಾಪಿ ಕುಟುಂಬ ಕೆಲ ಸಂದರ್ಭದಲ್ಲಿ ತೋಟಗಳಲ್ಲಿಯೇ ಜಾನುವಾರು ಸೇರಿ ಕೃಷಿ ಉಪ ಕಸಬುಗಳೊಂದಿಗೆ ಜೀವನ ನಡೆಸುತ್ತಿವೆ. ಹಗಲು ರಾತ್ರಿ ಎನ್ನದೇ ವಿಷ ಜಂತುಗಳ ಭಯದ ಮಧ್ಯೆ ಜೀವನ ನಡೆಸುತ್ತಿದೆ. ಸರ್ಕಾರ ಘೋಷಣೆ ಮಾಡಿದ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಯೋಜನೆ ರೈತರಲ್ಲಿ ಸ್ವಲ್ಪ ಆಶಾಭಾವನೆ ಮೂಡಿಸಿತ್ತು. ಆದರೆ ಈವರೆಗೂ ಯಾವುದೇ ಪ್ರಕ್ರಿಯೆ ನಡೆಯದೇ ಇರುವುದು ರೈತರಲ್ಲಿ ಬೇಸರ ತರಿಸಿದೆ. ನಮ್ಮ ತೋಟದ ಮನೆಗಳಿಗೆ ಎಂದು ಬೆಳಕು ಬರಲಿದೆಯೋ ಎಂದು ಕಾದು ಕುಳಿತಿದೆ.

Advertisement

ಒಟ್ಟಿನಲ್ಲಿ ಸರ್ಕಾರ ಘೋಷಣೆ ಮಾಡಿರುವ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಯೋಜನೆ ಬೇಗ ಜಾರಿಯಾಗಲಿ. ತೋಟಗಳಲ್ಲಿ ಕತ್ತಲಲ್ಲಿಯೇ ಜೀವನ ನಡೆಸುವ ಕುಟುಂಬಗಳಿಗೆ ಬೆಳಕು ದೊರೆತರೆ ಅವರಿಗೆ ಜೀವನದಲ್ಲೇ ಬೆಳಕು ದೊರೆತಂತಾಗಲಿದೆ.

ಸರ್ಕಾರವು ಬೆಳಕು ಯೋಜನೆ ಘೋಷಣೆ ಮಾಡಿದೆ. ಇದು ಕೇವಲ ಗ್ರಾಮೀಣ ಪ್ರದೇಶದಲ್ಲಿ ಯಾವ ಕುಟುಂಬಗಳು ವಿದ್ಯುತ್‌ ಸಂಪರ್ಕ ಇಲ್ಲದೇ ವಾಸ ಮಾಡುತ್ತಿವೆಯೋ ಅವರಿಗೆ ಈ ಯೋಜನೆ ಅನ್ವಯವಾಗಲಿದೆ. ಇದು ಬಿಪಿಎಲ್‌ ವ್ಯಾಪ್ತಿಯ ಕುಟುಂಬಗಳಿಗೆ ಅನ್ವಯವಾಗಲಿದೆ. ಆದರೆ ತೋಟದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕುರಿತಂತೆ ಸರ್ಕಾರ ಹೇಳಿದ್ದರೂ ನಮಗೆ ಯಾವುದೇ ಆದೇಶ, ನಿರ್ದೇಶನ, ಮಾರ್ಗಸೂಚಿ ಬಂದಿಲ್ಲ. ತೋಟದ ಮನೆಯ ರೈತರು ನಮಗೆ ಸಲ್ಲಿಸಿರುವ ಅರ್ಜಿ ಸಂಗ್ರಹಿಸಿಟ್ಟುಕೊಂಡಿದ್ದೇವೆ. ರಾಜೇಶ, ಜೆಸ್ಕಾಂ ಇಇ, ಕೊಪ್ಪಳ ವಿಭಾಗ -ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next