Advertisement

ಕೈಕಂಬ: ಮನೆಯಂಗಳಕ್ಕೆ  ಕಾಡಾನೆ

05:41 PM Aug 08, 2018 | Harsha Rao |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪದ ಕೈಕಂಬದಲ್ಲಿ ಸೋಮವಾರ ತಡರಾತ್ರಿ ಕಾಡಾನೆಯೊಂದು ಮನೆಯಂಗಳಕ್ಕೆ ಬಂದು ಕೃಷಿಯನ್ನು ಹಾಳುಗೆಡವಿ ಕಾಡಿಗೆ ಮರಳಿದೆ.

Advertisement

ರಾತ್ರಿ 1 ಗಂಟೆ ಸುಮಾರಿಗೆ ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ತಾಗಿ ಕೊಂಡಿ ರುವ ಪದ್ಮನಾಭ ಕಳಿಗೆ ಅವರ ಜಮೀನಿನ ಮುಖ್ಯ ಗೇಟನ್ನು ಮುರಿದು ಆನೆ ಅಂಗಳ ಪ್ರವೇಶಿಸಿದೆ. ಗೇಟು ಮುರಿಯುತ್ತಿರುವ ಸದ್ದು ಕೇಳಿ ಎಚ್ಚರವಾದ ಪದ್ಮನಾಭ ಅವರು ಮನೆ ಹೊರಗಿನ ದೀಪ ಉರಿಸಿ ಕಿಟಕಿಯಿಂದ ನೋಡಿದಾಗ ಅಂಗಳದಲ್ಲಿ ಆನೆ ನಿಂತಿದ್ದು ಕಾಣಿಸಿತು.

ಅಂಗಳದಲ್ಲಿ ಓಡಾಡಿದ ಆನೆ ಮನೆ ಮುಂದೆ ಇರುವ ಬಾಳೆ ಗಿಡಗಳನ್ನು ಎಳೆದು ತಿಂದಿತು. ತೋಟದ ಮೂಲಕ ನೆರೆಯ ಕೃಷಿಕ ನಾರಾಯಣ ಗೌಡ ಕಳಿಗೆ ಅವರ ತೋಟಕ್ಕೆ ತೆರಳಿತು. ಅಲ್ಲಿಂದ ಮುಂದಕ್ಕೆ ಗುಂಡಿಗದ್ದೆ, ಕೋಟೆ ಬಾಗಿಲು ಮೂಲಕ ಹಲವರು ತೋಟಗಳಲ್ಲಿ ಹಾನಿ ಮಾಡುತ್ತಾ ಪಕ್ಕದ ಅರಣ್ಯ ಸೇರಿದೆ. ಮನೆಯ ಅಂಗಳದಲ್ಲಿ ಆನೆಯ ಹೆಜ್ಜೆ ಗುರುತು ಕಾಣಿಸುತ್ತಿದೆ.

ಇಲ್ಲಿ ಹೆದ್ದಾರಿಯ ಒಂದು ಬದಿಯಲ್ಲಿ ಎತ್ತರದ ಬರೆ ಇದ್ದು ಅಲ್ಲಿಂದ ಆನೆ ಇಳಿದು ಬರುವ ಸಾಧ್ಯತೆ ಕಡಿಮೆ. ರಾಜ್ಯ ಹೆದ್ದಾರಿಯ ಮೂಲಕವೇ ಮನೆಯಂಗಳಕ್ಕೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವು ಸಮಯದ ಹಿಂದೆ ಇಲ್ಲೇ ಸಮೀಪದಲ್ಲಿ ಪ್ರವಾಸಿಗರ ಆಮ್ನಿ ಕಾರಿನ ಮೇಲೆ ಆನೆಯೊಂದು ದಾಳಿ ನಡೆಸಿತ್ತು. ಅದೇ ಆನೆ ಮತ್ತೆ ಆ ದಾರಿಯಾಗಿ ಬಂದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಪಾರ ಹಾನಿ
ತೋಟಗಳಿಗೆ ನುಗ್ಗಿದ ಆನೆ ಫಲ ಭರಿತ ತೆಂಗು, ಅಡಿಕೆ, ಬಾಳೆ ಗಿಡಗಳನ್ನು ತಿಂದು, ತುಳಿದು ಹಾನಿ ಮಾಡಿದೆ. ಸಮೀಪದ ಕುಕ್ಕಾಜೆ, ಮುಳ್ಳುಗುಡ್ಡೆ ಕಾಳಪ್ಪಾಡಿ ಪರಿಸರದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ರಾತ್ರಿ ಹೊತ್ತು ಸಂಚರಿಸಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ಬೀದಿ ದೀಪಗಳೂ ಕೆಟ್ಟು ಹೋಗಿದ್ದು ರಾತ್ರಿ ವೇಳೆ ನಡೆದು ಹೋಗುವುದು ಅಪಾಯಕಾರಿಯಾಗಿದೆ. ಈ ಬಗ್ಗೆ ಸ್ಥಳಿಯಾಡಳಿತದ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next