Advertisement

ಆನೆಗಳಿಗೆ ಖೆಡ್ಡಾ; ಅನುಭವವೇ ರೋಚಕ, ಹೇಗಿರುತ್ತೆ ಖೆಡ್ಡಾ ವಿನ್ಯಾಸ

10:19 AM Oct 26, 2020 | Nagendra Trasi |

ಮೈಸೂರು: ದಸರಾ ಎಂದರೆ ಜಂಬೂಸವಾರಿ…ಜಂಬೂ ಸವಾರಿ ಎಂದರೆ ಆನೆಗಳು ಎನ್ನುವ ಮಟ್ಟಕ್ಕೆ ಆನೆಗಳು ಮೈಸೂರು ದಸರೆಗಿರುವ ಸಂಬಂಧ. ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವಾಗ ನೋಡುವುದೇ ಸೊಗಸು. ಅದರಲ್ಲೂ ಸಿಂಗರಿಸಿಕೊಂಡು ಅಂಬಾರಿ ಹೊತ್ತು ಮೆರವಣಿಗೆ ಹೋಗುವುದನ್ನು ನೋಡಲು ದೇಶ-ವಿದೇಶದಿಂದ ಜನ ಬರುತ್ತಾರೆ.

Advertisement

ಆದರೆ ಇಂತಹ ಆನೆಗಳನ್ನು ಸೆರೆ ಹಿಡಿಯುವುದೇ ಒಂದು ಸೋಜಿಗ ಮತ್ತು ಸವಾಲಿನ ಕೆಲಸ. ಸಾಮಾನ್ಯವಾಗಿ ಆನೆಗಳನ್ನು ಸೆರೆ ಹಿಡಿಯುವ ಕ್ರಮ ಎರಡು ರೀತಿಯಲ್ಲಿದೆ. ಖೆಡ್ಡಾಗಳನ್ನು ತೋಡಿ, ಅವುಗಳಿಗೆ ಆನೆಗಳು ಬೀಳುವಂತೆ ಮಾಡಿ ಸೆರೆ ಹಿಡಿಯುವುದು ಒಂದು ಕ್ರಮವಾದರೆ, ಸಾಕಾನೆಗಳ ಸಹಾಯದಿಂದ ಅರಿವಳಿಕೆ ನೀಡಿ ಸೆರೆ ಹಿಡಿಯುವುದು ಮತ್ತೂಂದು ಕ್ರಮ. ಸದ್ಯಕ್ಕೆ ಈಗ ಚಾಲ್ತಿಯಲ್ಲಿರುವುದು ಎರಡನೇ ಕ್ರಮ. ಆದರೆ ಇತ್ತೀಚೆಗೆ ಖೆಡ್ಡಾ ಆನೆಗಳನ್ನು ಸೆರೆ ಹಿಡಿಯುವುದನ್ನು ನಿಲ್ಲಿಸಲಾಗಿದೆ.

ಹಳೇ ಮೈಸೂರು ಪ್ರಾಂತ್ಯದಲ್ಲಿ ಖೆಡ್ಡಾ ತೋಡಿ ಆನೆ ಹಿಡಿಯುವುದಕ್ಕೆ ಈಗಿನ ಎಚ್‌.ಡಿ. ಕೋಟೆ ತಾಲೂಕು ಕಾಕನಕೋಟೆ ಹೆಸರುವಾಸಿಯಾಗಿತ್ತು. ಸ್ವಾತಂತ್ರ್ಯ ನಂತರ ಕಬಿನಿ ಜಲಾಶಯ ನಿರ್ಮಾಣದಿಂದಾಗಿ ಎಲ್ಲಾ ಖೆಡ್ಡಾಗಳು ಹಿನ್ನೀರಿನಿಂದ ಮುಳುಗಡೆಯಾದವು. ಇದಾದ ಬಳಿಕ ಆನೆಗಳನ್ನು ಖೆಡ್ಡಾದ ಮೂಲಕ ಸೆರೆ ಹಿಡಿಯುವುದನ್ನು ಕೈಬಿಡಲಾಗಿದೆ.

ವಿಶೇಷ ಬೋನು ಅಥವಾ ಸಣ್ಣ ಗುಂಡಿಗೆ ಆನೆಗಳನ್ನು ಬೀಳಿಸಿ, ಪಳಗಿಸುವ ಕಾರ್ಯಾಚರಣೆಗೆ ಖೆಡ್ಡಾ ಎನ್ನುತ್ತೇವೆ. ಕಾಡಿನಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿ ಅವು ಜನಗಳಿಗೂ ಬೆಳೆಗಳಿಗೂ ಹಾನಿಮಾಡತೊಡಗಿದಾಗ ಅವನ್ನು ಸೆರೆಹಿಡಿಯಲಾಗುತ್ತದೆ. ಒಂದೋ ಎರಡೋ ಪುಂಡಾನೆಗಳಾದರೆ ಬೆದರಿಸಿ ಕಾಡಿಗೆ ಅಟ್ಟುತ್ತಾರೆ. ಇಲ್ಲವೆ ಗುಂಡಿಟ್ಟು ಕೊಂದುಬಿಡುತ್ತಾರೆ.

Advertisement

ಬಹುಸಂಖ್ಯೆಯಲ್ಲಿ ಅವನ್ನು ಹಿಡಿಯ ಬೇಕಾದಾಗ ಮಾತ್ರ ಖೆಡ್ಡಾ ಯೋಜನೆ ಯನ್ನು ಹಾಕಲಾಗುತ್ತದೆ. ಇದಕ್ಕೆ ಕಾಡಿನಲ್ಲಿ ವಾಸಿಸುವ ಹಾಡಿ ಜನರ ಪಾತ್ರ ಮಹತ್ವದ್ದು. ಇವರಿಲ್ಲದೆ ಆನೆ ಹಿಡಿಯುವುದು ಮತ್ತು ಪಳಗಿಸುವುದು ಕನಸಿನ ಮಾತು. ಹಾಗಾಗಿ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಜೇನುಕುರುಬರ ಪಾತ್ರ ಮಹತ್ವದ್ದಾಗಿರುತ್ತದೆ.

ಕಾಡಾನೆ ಕಾರ್ಯಾಚರಣೆ ವಿಧಾನ ಆನೆಗಳನ್ನು ಹಿಡಿದು ಪಳಗಿಸುವುದು ಬಹಳ ಸೂಕ್ಷ್ಮ ಮತ್ತು ಆಯಾಸದ ಕೆಲಸ. ಹತ್ತಾರು ಜನ ದಟ್ಟಾರಣ್ಯದಲ್ಲಿ ಅಡಗಿ ಕುಳಿತು, ಆನೆಗಳ ಚಲನವಲನಗಳನ್ನು ಪರಿಶೀಲಿಸುತ್ತಾ, ಅವು ಮೇಯುವ, ನೀರು ಕುಡಿಯುವ, ವಿಶ್ರಾಂತಿಸುವ ಸ್ಥಳಗಳನ್ನು ಗುರುತುಮಾಡಿ ಬೇರೆ ಬೇರೆ ಸ್ಥಳಗಳಲ್ಲಿ ಆಳವಾದ ಕುಳಿಗಳನ್ನು ತೋಡುತ್ತಾರೆ.

ಹೀಗಿರುತ್ತೆ ಖೆಡ್ಡಾ ವಿನ್ಯಾಸ
ನದಿಯ ಒಂದು ಪಕ್ಕದಲ್ಲಿ ಖೆಡ್ಡಾ ಬೋನು ಇರುತ್ತದೆ. ಅದರ ಸುತ್ತಲೂ 8 ರಿಂದ 9 ಅಡಿ ಆಳವಾದ ಕಂದಕವೊಂದು ಇರುತ್ತದೆ. ಖೆಡ್ಡಾಕ್ಕೆ 3
ಪ್ರವೇಶದ್ವಾರಗಳಿರುತ್ತವೆ. ಒಂದೊಂದು ದ್ವಾರದ ಬಳಿಯೂ ಉದ್ದನೆಯ ಕಾಡುಮರಗಳ ಕಂಬಗಳನ್ನು ಆಳವಾಗಿ ಹೂಳಿ ಒಂದೊಂದು ಅಡ್ಡಪಟ್ಟಿಗಳಿರುವ ಬಾಗಿಲನ್ನು ಅಳವಡಿಸಲಾಗಿರುತ್ತದೆ. ಖೆಡ್ಡಾದಿಂದ 10-12 ಮೈಲಿಗಳವರೆಗೆ ಓಡಾಡಲು ಅನುಕೂಲವಾಗುವಂತೆ ನೇರದಾರಿಗಳನ್ನೂ ಅಡ್ಡದಾರಿಗಳನ್ನೂ ಮಾಡಿರುತ್ತಾರೆ. ಸೆರೆಸಿಕ್ಕುವ ಮೊದಲು, ಆ ಮೇಲೂ ಆನೆಗಳಿಗೆ ಅಸಹಜವೆನ್ನಿಸದಂತೆ ಈ ದಾರಿಗಳನ್ನು ಸೊಪ್ಪು, ತರಗೆಲೆಗಳಿಂದ ಮುಚ್ಚಿಬಿಡಲಾಗುತ್ತದೆ.

ಸುತ್ತಮುತ್ತ ಸಾವಿರಾರು ಜನ ಡೋಲು, ನಗಾರಿ
ಮೊದಲಾದ ವಾದ್ಯಗಳ ಗದ್ದಲ ಮಾಡುತ್ತ ಆನೆಗಳತ್ತ ಗುಂಡಿಯತ್ತ ಓಡಿಸುತ್ತಾರೆ. ಆನೆಗಳೆಲ್ಲ ಈ ಸದ್ದಿಗೆ ಕಂಗಾಲಾಗಿ ಅರಣ್ಯದ ಮಧ್ಯ ಧಾವಿಸಿ ಮುಚ್ಚಿದ ಕುಳಿಗಳು ಕಾಣದೇ ಅವುಗಳಲ್ಲಿ ಕುಸಿದು ಗಂಟಲು ಬಿರಿಯುವಂತೆ ಘೀಳಿಡುತ್ತವೆ. ಬಳಿಕ ಅವುಗಳನ್ನು ಪಳಗಿಸುವ ಕಾರ್ಯ ನಡೆಯುತ್ತದೆ. ಈ ಸಂದರ್ಭದಲ್ಲಿ ಬಲಿಷ್ಠ ಆನೆಗಳ ಶಕ್ತಿಯನ್ನು ಕುಂದಿಸಲು ಹಲವಾರು ದಿನ ಅವಕ್ಕೆ ಉಪವಾಸ ಹಾಕುತ್ತಾರೆ. ಮಾನವನ ಅಪ್ಪಣೆಯಂತೆ ನಡೆದರೆ ಸಾಕಾನೆಗೆ ಆಹಾರ ದೊರೆಯುತ್ತದೆ. ತನಗೂ ಏಕೆ ದೊರೆಯಬಾರದು ಎಂಬ ವಿವೇಕ ಕಾಡಾನೆಗೆ ಬಂದಾಗ ಅದು ಪಳಗಿದೆ ಎಂದರ್ಥ. ಒಟ್ಟಾರೆ ಕಾಡಾನೆಗಳನ್ನು ಸೆರೆ ಹಿಡಿದು
ಅವುಗಳನ್ನು ಪಳಗಿಸುವುದು ಸವಾಲಿನ ಕೆಲಸವಾದರೂ ಬೃಹತ್‌ ಪ್ರಾಣಿಯನ್ನು ಮಾನವ ತನ್ನ ಅಂಕೆಯಲ್ಲಿಟ್ಟುಕೊಳ್ಳುವಂತೆ ಮಾಡುವ ಕ್ರಮವೇ ಸೋಜಿಗ.

ಸತೀಶ್ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next