ಉಪ್ಪಿನಂಗಡಿ: ಕಾಡಾನೆಗಳ ಹಾವಳಿ ಯಿಂದ ಕೃಷಿಕರ ನಿತ್ಯ ತೊಂದರೆ ಅನುಭವಿಸುತ್ತಿದ್ದರೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಆನೆಗಳು ಹಿಂಡು ಹಿಂಡಾಗಿ ಸಾಗುವ ಮೂಲಕ ವಾಹನ ಸವಾರರಲ್ಲಿ ಭೀತಿ ಮೂಡಿಸುತ್ತಿವೆ.
ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಕೆಲವು ದಿನಗಳಿಂದೀಚೆಗೆ ಪ್ರತಿದಿನ ನಸುಕಿನಲ್ಲಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಕಡೆಯಿಂದ ಕೌಕ್ರಾಡಿಯತ್ತ ಸಾಗುವ ನಾಲ್ಕು ಆನೆಗಳ ಹಿಂಡು ಸಂಜೆಯ ವೇಳೆಗೆ ಅದೇ ದಾರಿಯಿಂದ ಮರಳುತ್ತಿವೆ.
ಇತ್ತ ಭೂತಲಡ್ಕ, ಹೊನ್ನೆಜಾಲು ಮೊದಲಾದ ಗ್ರಾಮಗಳ ಇಬ್ರಾಹಿಂ, ನಾರಾಯಣ ಗೌಡ, ಸೇಸಪ್ಪ, ಥಾಮಸ್, ಹರಿಯಪ್ಪ, ಪ್ರಸನ್ನ, ನೌಶಾದ್ ಅಮೀದ್, ನೀಲಮ್ಮ ಮುಂತಾದವರ ಭತ್ತದ ಪೈರು, ಬಾಳೆ, ತೆಂಗು ಇತ್ಯಾದಿ ಕೃಷಿಯನ್ನು ಆನೆಗಳು ಹಾನಿಪಡಿಸಿವೆ. ಇದರಿಂದ ಕೃಷಿಕರು ಆರ್ಥಿಕ ನಷ್ಟದ ಜತೆಗೆ ಭಯದಲ್ಲಿ ಬದುಕುವಂತಾಗಿದೆ.
ಸ್ಥಳೀಯರು ಅರಣ್ಯ ಇಲಾಖೆಗೆ ಲಿಖೀತ ದೂರು ನೀಡಿದ್ದಾರೆ. ಅರಣ್ಯ ಪಾಲಕರು ಸ್ಥಳಕ್ಕೆ ಬಂದು ಸುಡುಮದ್ದನ್ನು ನೀಡಿ ಧೈರ್ಯ ತುಂಬಿ ಹೋಗುತ್ತಾರೆ ಹೊರತು ಆನೆಗಳ ಉಪಟಳಕ್ಕೆ ಕೊನೆ ಹಾಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಸಂತ್ರಸ್ತರು.
ಎರಿಂಞಿಪುಳದಲ್ಲಿ ಕಾಡಾನೆ ದಾಂಧಲೆ
ಕಾಸರಗೋಡು: ಎರಿಂಞಿಪುಳದಲ್ಲಿ ಮತ್ತೆ ಕಾಡಾನೆ ಹಿಂಡು ದಾಂಧಲೆ ನಡೆಸಿದ್ದು, ಹಲವು ತೋಟಗಳಿಗೆ ನುಗ್ಗಿ ವ್ಯಾಪಕವಾಗಿ ಕೃಷಿ ನಾಶ ಮಾಡಿವೆ. ಕಾಡಾನೆ ದಾಳಿಯಿಂದಾಗಿ ಸ್ಥಳೀಯರು ಆತಂಕಿತರಾಗಿದ್ದಾರೆ.