ಸಕಲೇಶಪುರ: ಕರಗಡವಳ್ಳಿಯಲ್ಲಿ ಕಾಡು ಹೆಣ್ಣಾನೆಯೊಂದು ಕೆಸರಲ್ಲಿ ಹೂತು ಹೋಗಿದ್ದು ಮೇಲಕ್ಕೆ ಬರಲಾರದೆ ಪರದಾಡುತ್ತಿದೆ. ಪಕ್ಕದಲ್ಲೇ ಆನೆಯ ಮರಿ ಇದ್ದು ಆರ್ತನಾದ ಮಾಡುತ್ತಿದೆ.
ಅರಣ್ಯ ಇಲಾಖೆಯ ಸಿಬಂದಿಗಳು ಹಿಟಾಚಿಯೊಂದಿಗೆ ತೆರಳಿ ಆನೆಯನ್ನು ಮೇಲಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ.
ಎತ್ತಿನ ಹೊಳೆ ಯೋಜನೆಗಾಗಿ ತೆಗೆದ ಕಾಲುವೆಯ ಮಣ್ಣಿನಲ್ಲಿ ಆನೆ ಸಂಪೂರ್ಣವಾಗಿ ಹುಗಿದು ಹೋಗಿದೆ. ನಾಲ್ಕು ಕಾಲುಗಳು ಹೂತು ಹೋಗಿದ್ದು ಮೇಲಕ್ಕೆ ಬರುವುದು ಕಷ್ಟಸಾಧ್ಯವಾಗಿ ಒದ್ದಾಡುತ್ತಿದೆ. ಒಂದು ಕಾಲು ಮುರಿದು ಹೋಗಿರುವ ಬಗ್ಗೆಯೂ ಶಂಕೆ ವ್ಯಕ್ತ ಪಡಿಸಲಾಗಿದೆ.
ಪಕ್ಕದಲ್ಲಿರುವ ಮರಿ ಆನೆ ತಾಯಿಯನ್ನು ಬಿಟ್ಟು ಕದಲುತ್ತಿಲ್ಲ. ಈ ದೃಶ್ಯ ಕಣ್ಣುಗಳು ತೇವವಾಗಿಸುವಂತಿದೆ. ಎರಡೂ ಆನೆಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ. ಮರಿ ಆನೆ ಸೊಪ್ಪನ್ನು ತಿನ್ನುತ್ತಿದೆ ಆದರೆ ತಾಯಿ ಏನನ್ನೂ ತಿನ್ನುತ್ತಿಲ್ಲ.
ರಕ್ಷಣಾ ಕಾರ್ಯ ಮುಂದುವರಿದಿದೆ.