ವಿಧಾನಸಭೆ: ಆನೆ ಹಾವಳಿ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಪ್ರತಿಪಕ್ಷ ಸದಸ್ಯರನ್ನು ಮುಖ್ಯಮಂತ್ರಿ ಎಚ್ಚರಿಕೆ ನೀಡುವ ಮೂಲಕ ಬಾಯಿ ಮುಚ್ಚಿಸಿದ ಪ್ರಸಂಗಕ್ಕೆ ವಿಧಾನಸಭೆ ಮಂಗಳವಾರ ಸಾಕ್ಷಿಯಾಯಿತು. ಆನೆ ಹಾವಳಿ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ ಹೇಳಿದ ಮಾತಿನಿಂದ ಕೆರಳಿದ ಮುಖ್ಯಮಂತ್ರಿ, “ನಿಮಗನ್ನಿಸಿದಂತೆ ನೀವು ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಇದಾದ ಬಳಿಕ ಆನೆ ಹಾವಳಿ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಪ್ರತಿಪಕ್ಷ ಸದಸ್ಯರು ಸುಮ್ಮನಾದರು.
ಶೂನ್ಯ ವೇಳೆಯಲ್ಲಿ ಆನೆ ಹಾವಳಿ ಕುರಿತು ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಎಚ್.ಕೆ.ಕುಮಾರಸ್ವಾಮಿ, ಆನೆ ಹಾವಳಿ ತಡೆಗೆ ಕಂದಕ ನಿರ್ಮಾಣ, ರೈಲು ಕಂಬಿಯ ಬೇಲಿ ಹಾಕಿದರೂ ಆನೆಗಳು ನಾಡಿಗೆ ನುಗ್ಗುವುದು ತಪ್ಪಿಲ್ಲ. ಆದ್ದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ, ಹಾಸನ ಜಿಲ್ಲೆಯಲ್ಲಿ ಆನೆಗಳ ಆವಾಸ ಸ್ಥಾನ ರೂಪಿಸಲು ಯೋಜನೆ ಜಾರಿಯಾಗಬೇಕಿದೆ. ಅದಕ್ಕೆ 272 ಕೋಟಿ ರೂ. ಅಗತ್ಯವಿದೆ ಎಂದರು. ಕೆ.ಜಿ.ಬೋಪಯ್ಯ, ಮುಖ್ಯ ಮಂತ್ರಿಗಳೇ ಹೀಗೆ ನಿರ್ಲಕ್ಷ್ಯ ಮಾಡಿದರೆ ಹೇಗೆ? ಆನೆ ಹಾವಳಿ ನಿಲ್ಲಿಸಲು ಸಾಧ್ಯವಾಗದಿದ್ದರೆ ನೀವೇ ಅವುಗಳನ್ನು ಹೊಡೆದು ಕೊಂಡು ಹೋಗಿ. ಸರ್ಕಾರದಿಂದ ಸಾಧ್ಯವಾಗದೇ ಇದ್ದರೆ ಹೇಳಿ, ನಾವು ಏನು ಮಾಡಬೇಕೋ ಮಾಡ್ತೇವೆ ಎಂದರು. ಇದಕ್ಕೆ ತಿರುಗೇಟು ನೀಡಿದ ಸಿಎಂ, ನಿಮಗೆ ತಿಳಿದಂತೆ ನೀವು ಮಾಡಿದರೆ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ನಾವು ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.