ಬಂಗಾರಪೇಟೆ: ಆಂಧ್ರಪ್ರದೇಶ ಹಾಗೂ ತಮಿಳುನಾಡು ಅರಣ್ಯದಿಂದ ಆಗಮಿಸಿ ಬೀಡು ಬಿಟ್ಟಿರುವ 12ಕ್ಕೂ ಹೆಚ್ಚು ಕಾಡಾನೆಗಳ ಹಿಂಡು 3 ದಿನಗಳಿಂದ ತಾಲೂಕಿನ ಗಡಿಭಾಗದ ಕಾಮಸಮುದ್ರ ಹೋಬಳಿ ಗ್ರಾಮಗಳಲ್ಲಿ ಸಂಚರಿಸುತ್ತಿರುವುದರಿಂದ ರೈತರಿಗೆ ಆತಂಕ ಶುರುವಾಗಿದೆ.
ತಮಿಳುನಾಡು ರಾಜ್ಯದಿಂದ ಕಳೆದ ಒಂದು ವಾರದಿಂದ 22 ಕಾಡಾನೆಗ ಹಿಂಡು ಬಂದಿದ್ದು, ತಾಲೂಕಿನ ಕಾಮಸಮುದ್ರ ಹೋಬಳಿಯಲ್ಲಿ ನೂರಾರು ಎಕರೆ ರೈತರ ಬೆಳೆ ನಾಶ ಮಾಡಿವೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಆ ಕಡೆಯಿಂದ ಈ ಕಡೆಗೆ ಓಡಿಸಿ ತಮಿಳುನಾಡಿನ ನೇರಳೆಕೆರೆ ಅರಣ್ಯ ಪ್ರದೇಶಕ್ಕೆ ಅಟ್ಟಿದ್ದಾರೆ.
ಪ್ರಸ್ತುತ 12ಕ್ಕೂ ಹೆಚ್ಚು ಕಾಡಾನೆಗಳು ಆಂಧ್ರಪ್ರದೇಶದ ಕುಪ್ಪಂ ತಾಲೂಕಿನ ಗುಡಿಪಲ್ಲಿ ಗ್ರಾಮದ ಅರಣ್ಯ ಪ್ರದೇಶದಿಂದ ಆಗಮಿಸಿ ತಾಲೂಕಿನ ಗಡಿಭಾಗ ಕಾಮಸಮುದ್ರ ಹೋಬಳಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿವೆ. ಶನಿವಾರ ರಾತ್ರಿ ತಮಿಳುನಾಡಿಗೆ ಓಡಿಸಿದ್ದರೂ ಮತ್ತೆ ಯಾವಾಗ ಬರುತ್ತವೆ ಎಂಬ ಆತಂಕದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ- ರೈತರಿದ್ದಾರೆ.
ಕ್ರಮವಿಲ್ಲ: ರಾಜ್ಯ ಸರ್ಕಾರ ಗಡಿಭಾಗದಲ್ಲಿ ಕಾಡಾನೆಗಳ ಅಕ್ರಮ ಪ್ರವೇಶಕ್ಕೆ ತುರ್ತು ಕ್ರಮಕೈಗೊಳ್ಳುವ ಬಗ್ಗೆ ಈ ಹಿಂದೆ ಹಲವಾರು ಭರವಸೆ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರತಿ ವರ್ಷ ಕನಿಷ್ಠ 3 ಕೋಟಿ ರೂ., ಬೆಳೆ ನಷ್ಟವಾಗುತ್ತಿದೆ. ಸರ್ಕಾರ ಈಗಾಗಲೇ ಕಾಮಸಮುದ್ರ ಅರಣ್ಯ ಪ್ರದೇಶ ವನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಿದೆ. ಆದರೆ, ಅನಂತರ ಯಾವುದೇ ಕ್ರಮ ಗಳನ್ನು ಕೈಗೊಂಡಿಲ್ಲ. ಸರ್ಕಾರ ಇನ್ನಾದರೂ ಘೋಷಿಸಿರುವ ವನ್ಯಜೀವಿ ಧಾಮದಂತೆ ಅಗತ್ಯ ಕ್ರಮ ಕೈಗೊಂಡು ಆನೆಗಳು ನಾಡಿನತ್ತ ಸುಳಿಯದಂತೆ ಕ್ರಮವಹಿಸಬೇಕಾಗಿದೆ.