ಕೊಟ್ಟಾಯಂ: ಮಾವುತನೊಬ್ಬನ ಅಂತ್ಯಕ್ರಿಯೆಯ ಸ್ಥಳಕ್ಕೆ ಧಾವಿಸಿದ ಆನೆಯು, ತನ್ನನ್ನು 25 ವರ್ಷಗಳ ಕಾಲ ನೋಡಿಕೊಂಡ ಮಾವುತನಿಗೆ ಶ್ರದ್ಧಾಂಜಲಿ ಸಲ್ಲಿಸಿ ಅಶ್ರುತರ್ಪಣಗೈದ ಭಾವನಾತ್ಮಕ ಘಟನೆಯೊಂದು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯ ವಿಡಿಯೋವನ್ನು ಪರ್ವೀನ್ ಕಾಸ್ವಾನ್ ಎಂಬವರು ಟ್ವಿಟರ್‌ನಲ್ಲಿ ಅಪ್ ಲೋಡ್ ಮಾಡಿದ್ದು, ಮಾವುತನ ಮೇಲಿನ ಆನೆಯ ಪ್ರೀತಿಯನ್ನು ನೋಡಿ ಎಲ್ಲರೂ ದಿಗ್ಭ್ರಮೆಗೊಳಗಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಾಮೋದರ್ ನಾಯರ್ ಅವರು ಹಿಂದಿನಿಂದಲೂ ಆನೆಗಳನ್ನು ಪಳಗಿಸುವಲ್ಲಿ ಎತ್ತಿದ ಕೈ. 60 ವರ್ಷಗಳಿಂದಲೂ ಅವರು ಮಾವುತನಾಗಿ ಕಾರ್ಯನಿರ್ವಹಿಸುತ್ತಿದ್ದರು. 25 ವರ್ಷಗಳ ಕಾಲ ಈ ಆನೆ(ಬ್ರಹ್ಮದಾತನ್)ಗೂ ಮಾವುತನಾಗಿ ಕೆಲಸ ಮಾಡಿದ್ದರು. ಬ್ರಹ್ಮದಾತನ್ ಮೇಲೆ ನಾಯರ್‌ಗೆ ಎಷ್ಟೊಂದು ಪ್ರೀತಿಯಿತ್ತೆಂದರೆ, ಅದನ್ನು ಅವರು ತಮ್ಮ “ಮಗ’ ಎಂದೇ ಕರೆಯುತ್ತಿದ್ದರು.
Related Articles
ಅವರು ಕ್ಯಾನ್ಸರ್ ಪೀಡಿತರಾದ ಮೇಲೂ, “ಬ್ರಹ್ಮದಾತನ್ ನನ್ನು ಒಮ್ಮೆ ಕಣ್ತುಂಬ ನೋಡಬೇಕು’ ಎಂಬ ಆಸೆ ವ್ಯಕ್ತಪಡಿಸಿದ್ದರು. ಗುರುವಾರ ನಾಯರ್ ಕೊನೆಯುಸಿರೆಳೆದರು.
ಇದನ್ನೂ ಓದಿ :12 ರಿಂದ 15 ವರ್ಷದ ಮಕ್ಕಳಿಗೆ ಫೈಜರ್ ಲಸಿಕೆ ನೀಡಲು ಯುಕೆ ಅನುಮೋದನೆ
ಅಪ್ಪನ ಕೊನೆಯಾಸೆ ಈಡೇರಿಸಲೆಂದು ಮಗನು, ಅಂತ್ಯಕ್ರಿಯೆ ವೇಳೆ ಬ್ರಹ್ಮದಾತನ್ ಆನೆಯನ್ನು ಕರೆತರಲು ಸೂಚಿಸಿದ್ದರು. ಅಲ್ಲಿಗೆ ಬಂದ ಆನೆಯು ಮಾವುತ ನಾಯರ್‌ರ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ, ಕಣ್ಣೀರಿಟ್ಟಿತಲ್ಲದೇ, ತನ್ನ ಸೊಂಡಿಲಿನ ಮೂಲಕ ನಾಯರ್‌ರ ಮೃತದೇಹವನ್ನು ಸ್ಪರ್ಶಿಸಿ ಅಂತಿಮ ನಮನ ಸಲ್ಲಿಸಿತು. ಇದನ್ನು ನೋಡಿ ಅಲ್ಲಿದ್ದ ಎಲ್ಲರ ಕಣ್ಣಾಲಿಗಳೂ ತೇವಗೊಂಡವು. ದಾಮೋದರನ್ ಮತ್ತು ಬ್ರಹ್ಮದಾತನ್ ನಡುವಿನ ಅವ್ಯಕ್ತ ಸಂಬಂಧವು ಎಲ್ಲರನ್ನೂ ಮೂಕರಾಗಿಸಿತು.