ಹಸಿರು ಬೆಟ್ಟಗಳ ನಡುವೆ ಒಂದು ಪುಟ್ಟ ಹಳ್ಳಿ. ಅಲ್ಲಿ ಇದ್ದಿದ್ದು ಎರಡೇ ಮನೆ. ಅದೂ ಅಣ್ಣ- ತಮ್ಮನದ್ದು. ಪಿತ್ರಾರ್ಜಿತ ಆಸ್ತಿಯನ್ನು ಸಮನಾಗಿ ಹಂಚಿಕೊಂಡು, ಇಬ್ಬರೂ ವ್ಯವಸಾಯ ನಡೆಸುತ್ತಿದ್ದರು. ಅಣ್ಣ ಬಹಳ ಪ್ರಾಮಾಣಿಕ. ಕೃಷಿಯನ್ನು ತಪಸ್ಸಿನಂತೆ ನಡೆಸುತ್ತಾ, ಜೀವನದಲ್ಲಿ ಉನ್ನತಿ ಕಂಡಿದ್ದ. ಅಣ್ಣನ ಏಳ್ಗೆಯನ್ನು ತಮ್ಮ ಹಾಗೂ ಆತನ ಹೆಂಡತಿ ಸಹಿಸುತ್ತಿರಲಿಲ್ಲ. ಅಣ್ಣನ ಬಗ್ಗೆ ಅವರಿಬ್ಬರಿಗೂ ವಿಪರೀತ ಹೊಟ್ಟೆಕಿಚ್ಚು ಇತ್ತು.
ಅದೊಂದು ದಿನ ಮನೆಯಲ್ಲಿ ಅಣ್ಣನ ಹೆಂಡತಿಯೊಬ್ಬಳೇ ಇದ್ದಳು. ಬಂಗಾರದಿಂದ ಸಿಂಗಾರಗೊಂಡಿದ್ದ, ದೇವಲೋಕದ ಆನೆಯೊಂದು ಅವರ ಮನೆಯ ಹಿತ್ತಲಿನಲ್ಲಿ ಓಡಾಡುತ್ತಿರುವುದು ಅವಳಿಗೆ ಕಂಡಿತು. ಆನೆಯ ಕಿವಿಯಲ್ಲಿ ಅಗಲಗಲ ಓಲೆ, ಕಾಲುಗಳಿಗೆ ಗೆಜ್ಜೆ, ಕೊರಳಿನಲ್ಲಿ ದಪ್ಪ ಸರಪಳಿಯಂತೆ ಇರುವ ಚಿನ್ನದ ಸರ, ತಲೆಯ ಮೇಲೆ ರತ್ನಾಭರಣಗಳಿಂದ ಹೊಳೆಯುವ ದೊಡ್ಡ ಕಿರೀಟ… ಅಷ್ಟೊಂದು ಪ್ರಮಾಣದಲ್ಲಿ ಬಂಗಾರದಾಭರಣ ಕಂಡಾಗ ಯಾವ ಹೆಣ್ಣಿಗಾದರೂ ಅದರ ಮೇಲೆ ಮೋಹ ಹುಟ್ಟದೇ ಇರದು. ಅಣ್ಣನ ಹೆಂಡತಿಯೂ ಆಸೆ ಪಟ್ಟುಕೊಂಡು, ಅದನ್ನು ನೋಡುತ್ತಲಿದ್ದಳು. ಗಂಡನನ್ನು ಕರೆಯೋಣವೆಂದರೆ, ಅವರು ಮನೆಯಲ್ಲಿ ಇರಲಿಲ್ಲ. ಸುಮಾರು ಮೂರ್ನಾಲ್ಕು ನಿಮಿಷ ಕಾಲ ಹಿತ್ತಲಿನಲ್ಲಿಯೇ ಇದ್ದ ದೇವಲೋಕದ ಆನೆ, ನಿಧಾನ ಮೇಲಕ್ಕೆ ಹೊರಟಿತು. ಮೋಡದ ಮರೆಯಲ್ಲಿ ಸಾಗಿ, ಕಣ್ಣಿಗೆ ಕಾಣಿಸದಾಯಿತು.
ಸಂಜೆ ಆಗುತ್ತಿದ್ದಂತೆ ಮನೆಗೆ ಬಂದ ಗಂಡನಿಗೆ, ಚಿನ್ನಾಭರಣ ತೊಟ್ಟಿದ್ದ ಆನೆಯ ವಿಚಾರವನ್ನು ಹೇಳಿದಳು. “ನಾವು ಜೀವಮಾನವಿಡೀ ಸಂಪಾದಿಸಿದರೂ, ಆ ಆನೆಯ ಮೈಯಲ್ಲಿದ್ದ ಬಂಗಾರವನ್ನು ಸಂಪಾದಿಸಲು ಸಾಧ್ಯವೇ ಇಲ್ಲ’ ಎಂದಳು. ಹೆಂಡತಿ ಹೇಳುವುದನ್ನು ಗಂಡ ನಂಬಲು ಹೋಗಲಿಲ್ಲ. ಬಹುಶಃ ಈಕೆ ಕನಸಿನಲ್ಲಿ ಆನೆಯನ್ನು ಕಂಡಿರಬೇಕೆಂದುಕೊಂಡು ಸುಮ್ಮನಾದ.
ಮರುದಿನ ಅದೇ ಸಮಯ. ಮನೆಯ ಹಿತ್ತಲಿನಲ್ಲಿ ಅದೇ ಆನೆ ಪ್ರತ್ಯಕ್ಷವಾಯಿತು. ಅಣ್ಣ ಮತ್ತು ಆತನ ಹೆಂಡತಿ ಇಬ್ಬರೂ ಆಗ ಮನೆಯಲ್ಲಿಯೇ ಇದ್ದುದ್ದರಿಂದ ಅದನ್ನು ಹತ್ತಿರದಿಂದ ವೀಕ್ಷಿಸಿ, ಆನಂದಿಸಿದರು. ಆನೆ ಇನ್ನೇನು ಹೊರಟಿತು ಎನ್ನುವಾಗ, ಸೊಂಡಿಲನ್ನು ಮೇಲಕ್ಕೆತ್ತಿದ ಆನೆ, “ಬರುತ್ತೀಯಾ? ದೇವಲೋಕ ತೋರಿಸುತ್ತೇನೆ’ ಎಂದು ಅಣ್ಣನಿಗೆ ಹೇಳಿತು. ಅಣ್ಣ ಆರಂಭದಲ್ಲಿ ಅಂಜಿದ. ಆನೆ ಪುನಃ ಒತ್ತಾಯಿಸಿತು. ಗಜರಾಜನ ಆಹ್ವಾನ ಕಡೆಗಣಿಸುವುದೆಂತು ಎಂದುಕೊಂಡು, ಒಪ್ಪಿದ. ಆನೆಯ ಬಾಲವನ್ನು ಗಟ್ಟಿಯಾಗಿ ಹಿಡಿದುಕೊಂಡ. ಆನೆ ಮೇಲಕ್ಕೆ ಕರೆದೊಯ್ಯಿತು.
ದೇವಲೋಕ ಬಂತು. ಅಲ್ಲಿನ ಹಾದಿ ಸಂಪೂರ್ಣ ಚಿನ್ನಮಯ. ಮರಗಿಡ ಬಳ್ಳಿಗೂ ಸ್ವರ್ಣದ ಅಲಂಕಾರ. ರತ್ನಾಭರಣಗಳ ದೊಡ್ಡ ದೊಡ್ಡ ಬೆಟ್ಟಗಳು ಸುತ್ತಮುತ್ತ. ನಡುವೆ ಹರಿಯುವ ನದಿಯಲ್ಲೂ ಚಿನ್ನದ ನಾಣ್ಯಗಳು ತೇಲಿಕೊಂಡು ಹೋಗುತ್ತಿದ್ದವು. ಬೆಳ್ಳಿಯ ತೆಪ್ಪಗಳು, ದೋಣಿಗಳು ಅಲ್ಲಿ ತೇಲುತ್ತಿದ್ದವು. ಅಣ್ಣನಿಗೆ ಆನೆ ಹೇಳಿತು, “ನಿನಗೆಷ್ಟು ಬೇಕೋ ಅಷ್ಟು ಸಂಪತ್ತನ್ನು ತಗೋ…’. ಅಣ್ಣ “ಬೇಡ’ ಎಂದ. “ಇಲ್ಲಿನ ಎಲ್ಲ ದೇವರಿಗೂ ನಿನ್ನ ಪ್ರಾಮಾಣಿಕತೆ ಗೊತ್ತು. ಅದನ್ನು ಮೆಚ್ಚಿಯೇ ನಿನಗೆ, ದೇವತೆಗಳು ಈ ಉಡುಗೊರೆಯನ್ನು ನೀಡುತ್ತಿದ್ದಾರೆ’ ಎಂದು ಆನೆ ಚಿನ್ನಾಭರಣವಿದ್ದ ದೊಡ್ಡ ಮೂಟೆಯನ್ನು ಆತನಿಗೆ ಕೊಟ್ಟಿತು. ಅದನ್ನು ಆತ ಆನೆಯ ಮೇಲೆ ಹಾಕಿಕೊಂಡು, ಮರುದಿನ ತನ್ನ ಮನೆಗೆ ಬಂದ.
ಹೆಂಡತಿಗೆ ಖುಷಿಯೋ ಖುಷಿ. ಅದ್ಹೇಗೋ ಈ ವಿಚಾರ ತಮ್ಮನ ಪತ್ನಿಗೂ ಗೊತ್ತಾಯಿತು. ಆಕೆಗೆ ಹೊಟ್ಟೆಕಿಚ್ಚನ್ನು ತಡೆಯಲಾಗಲಿಲ್ಲ. ಗಂಡನಿಗೆ ಇವೆಲ್ಲ ಸಂಗತಿಯನ್ನು ಹೇಳಿದಳು. ಮರುದಿನ ಇಬ್ಬರೂ ಕಾದು ಕುಳಿತು, ಆನೆ ಬರುತ್ತಾ ಎಂದು ನೋಡಿದರು. ಆನೆ ಬಂದು, ಅಣ್ಣನ ಹಿತ್ತಲಿನಲ್ಲಿ ಓಡಾಡುವ ಸಂಗತಿ ನಿಜವೇ ಆಗಿತ್ತು.
ತಮ್ಮನ ಪತ್ನಿ “ನೀವೂ ಆನೆಯ ಬಾಲ ಹಿಡಿದು, ದೇವಲೋಕ್ಕೆ ಹೋಗಿ, ಚಿನ್ನದ ಮೂಟೆ ತನ್ನಿ’ ಎಂದು ಗಂಡನಿಗೆ ಹೇಳಿದಳು. ಗಂಡ, ಹೆಂಡತಿಯ ಮಾತಿಗೆ ಕಿವಿಗೊಟ್ಟ. ಚಿನ್ನಾಭರಣ ತುಂಬಿಕೊಂಡು ಬರಲು, ದೊಡ್ಡ ಗೋಣಿಚೀಲವನ್ನು ಹಿಡಿದುಕೊಂಡು ಆನೆ ಹೊರಡುವಾಗ, ಅದರ ಬಾಲ ಹಿಡಿದುಕೊಂಡ.
ಆನೆ ಸ್ವಲ್ಪ ಮೇಲಕ್ಕೆ ಹೋಗುತ್ತಿದ್ದಂತೆ, ಕೆಳಗೆ ಇದ್ದ ಹೆಂಡತಿ, “ಏನ್ರೀ… ವಾಪಸು ಬರೋವಾಗ ಎಷ್ಟು ಚಿನ್ನ ತರುತ್ತೀರಿ?’ ಅಂತ ದುರಾಸೆಯಲ್ಲಿ ಕೂಗಿ ಕೇಳಿದಳು. ಆಗ ಆನೆಯ ಬಾಲ ಹಿಡಿದುಕೊಂಡಿದ್ದ ತಮ್ಮ, “ಇಷ್ಟು….’ ಎಂದು ಎರಡೂ ಕೈಯನ್ನು ಅಗಲ ಮಾಡಿ ಹೇಳಿದ. ಧೊಪ್ಪನೆ ಕೆಳಗೆ ಬಿದ್ದ!
– ರಮೇಶ್ ಎಸ್.ಕೆ.