Advertisement
ಸುಮಾರು 22 ವರುಷಗಳ ಹಿಂದೆ ಬಾಳೆಹೊನ್ನೂರಿನ ಉದ್ಯಮಿಯೋರ್ವರು ಕೊಲ್ಲೂರು ದೇಗುಲಕ್ಕೆ ಕಾಣಿಕೆ ರೂಪದಲ್ಲಿ ಸಮರ್ಪಿಸಿದ್ದ ೕ ಆನೆಯನ್ನು ಸಾಕಿ ಸಲಹಿ ಪೋಷಿಸಲಾಗಿತ್ತು. ಭಕ್ತರೊಡನೆ ಪುಂಡಾಟವಾಡದೆ ತಲೆಯಾಡಿಸುತ್ತ ಪ್ರಸಾದ ರೂಪದ ಬಾಳೆ ಹಣ್ಣನ್ನು ಸ್ವೀಕರಿಸುತ್ತಿದ್ದ ಸೌಮ್ಯ ಸ್ವಭಾವದ ಇಂದಿರಾ ಮಕ್ಕಳು ಸಹಿತ ವಯೋವೃದ್ಧರಿಗೆ ಸೊಂಡಿಲಿನ ಮೂಲಕ ಆಶೀರ್ವದಿಸುವ ಪರಿ ಭಕ್ತರ ಪಾಲಿಗೆ ಹೊಸ ಚೈತನ್ಯ ತುಂಬಿದಂತಾಗುತ್ತಿತ್ತು.
Related Articles
Advertisement
ಏನಾಯಿತು ಇಂದಿರೆಗೆ?
ಕಳೆದ 3 ದಿವಸಗಳಿಂದ ಜ್ವರದಿಂದ ಬಳಲುತ್ತಿದ್ದ 62 ವರುಷದ ಇಂದಿರಾಗೆ ತುರ್ತು ಚಿಕಿತ್ಸೆ ನೀಡಲು ಸಕ್ರೆಬೈಲಿನಿಂದ ತಜ್ಞ ವೈದ್ಯರು ಆಗಮಿಸಿ ಪರಿಶೀಲಿಸಿ ಚಿಕಿತ್ಸೆ ನೀಡಿದ್ದರೂ ಫಲಕಾರಿಯಾಗದೆ ಆ. 13ರ ರಾತ್ರಿ ಆಕೆ ಮೃತಪಟ್ಟಳು.
ಅರಣ್ಯ ಇಲಾಖಾಧಿಕಾರಿಗಳಿಂದ ಪರಿಶೀಲನೆ :
ಕುಂದಾಪುರ, ಕೊಲ್ಲೂರಿನ ಅರಣ್ಯಾಧಿಕಾರಿಗಳು ಸಹಿತ ವನ್ಯ ಜೀವಿ ವಿಭಾಗದ ಅಧಿಕಾರಿಗಳು ಕೊಲ್ಲೂರಿಗೆ ಆಗಮಿಸಿ ಆನೆಯ ಸಾವಿನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದರು.
ಸಾವಿಗೆ ಉಲ್ಭಣಗೊಂಡ ರೋಗ ಕಾರಣವೇ ಅಥವಾ ಇನ್ನಿತರ ಯಾವುದೇ ಕಾರಣಗಳಿಂದ ಮೃತಪಟ್ಟಿರಬಹುದೇ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಮಹಜರು ಬಳಿಕ ದಹನ :
ಸಕ್ರೆ ಬೈಲಿನ ವೈದ್ಯರ ತಂಡವು ಸುಮಾರು 6 ತಾಸು ಕಾಲ ಮರಣೋತ್ತರ ಪರೀಕ್ಷೆ ನಡೆಸಿ ದಹನ ಕಾರ್ಯಕ್ಕೆ ಇಂದಿರಾಳ ದೇಹವನ್ನು ಬಿಟ್ಟು ಕೊಟ್ಟರು.
ದೇಗುಲದಲ್ಲಿ ನಡೆದ ಗಜ ಪೂಜೆಯ ಅನಂತರ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿವಿಧಾನ ನಡೆಸಿ ದಹನ ಕಾರ್ಯಕ್ಕೆ ಅಣಿಮಾಡಿದರು.
15 ಅಡಿ ಗಾತ್ರದ ಹೊಂಡ ನಿರ್ಮಿಸಿ ಕಟ್ಟಿಗೆಯನ್ನು ಇಟ್ಟು ಅದರ ಮೇಲೆ ಇಂದಿರಾಳನ್ನು ಮಲಗಿಸಿ ತುಪ್ಪ, ಗಂಧವನ್ನು ಇಟ್ಟು ದಹನ ಕಾರ್ಯ ನಡೆಸಲಾಯಿತು.
ಗ್ರಾಮಸ್ಥರ ರೋದನೆ :
ಇಂದಿರಾ ಸಾವಿನಪ್ಪಿದ ಸುದ್ದಿ ತಿಳಿದೊಡನೆ ಸ್ಥಳಕ್ಕೆ ಆಗಮಿಸಿದ ಸಹಸ್ರಾರು ಗ್ರಾಮಸ್ಥರು ಸಹಿತ ಭಕ್ತರು ಕಣ್ಣೀರು ಇಟ್ಟು ಆಕೆಯ ಇತಿಹಾಸವನ್ನು ಮೆಲಕು ಹಾಕಿದರು.
ಪೊಲೀಸ್ ಬಂದೋಬಸ್ತ್ :
ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕೊಲ್ಲೂರು ಪರಿಸರ ಸಹಿತ ಕಲ್ಯಾಣಿ ಗುಡ್ಡೆಯಲ್ಲಿ ನಡೆದ ದಹನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಗಣ್ಯರ ನಮನ :
ಕೊಲ್ಲೂರು ದೇಗುಲದ ಮಾಜಿ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಸಮಿತಿ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ್ ಗಾಣಿಗ, ಅಭಿಲಾಷ್, ನರಸಿಂಹ ಹಳಗೇರಿ, ಅಂಬಿಕಾ ದೇವಾಡಿಗ, ಅರ್ಚಕರು, ಸಿಬಂದಿಗಳು ಸೇರಿದಂತೆ ಇನ್ನಿತರ ಅನೇಕ ಗಣ್ಯರು ಇಂದಿರಾಗೆ ಮಾಲಾರ್ಪಣೆ ಮಾಡಿದರು.