Advertisement

ಅಂಚೆ ವಿಶ್ವದಲ್ಲಿ ಆನೆ ದರ್ಬಾರು

08:40 AM Sep 17, 2017 | Harsha Rao |

ದಸರೆ ಸನಿಹ ಬರುತ್ತಿದೆ. ಇದು ನಾಡಿಗೆಲ್ಲ ದೊಡ್ಡ ಹಬ್ಬ. ಕರ್ನಾಟಕದಲ್ಲಿ ವಿಜಯನಗರ ಕಾಲದಿಂದಲೂ ದಸರೆ ಹಬ್ಬ ಬಹು ಪ್ರಸಿದ್ಧಿ. ವಿಜಯನಗರ ಸಾಮ್ರಾಜ್ಯದ ಬಳಿಕ ನವರಾತ್ರಿಗಳಿಗೆ ಮತ್ತಷ್ಟು ಮೆರುಗು ತಂದುಕೊಟ್ಟಿದ್ದು ಮೈಸೂರು ಒಡೆಯರ ಆಡಳಿತ.

Advertisement

ಒಂಬತ್ತು ರಾತ್ರಿಗಳ ಈ ಉತ್ಸವದಲ್ಲಿ ಆನೆಗಳಿಗೆ ಹೆಚ್ಚಿನ ಮರ್ಯಾದೆ. ಒಂದರ್ಥದಲ್ಲಿ ಆನೆಗಳೇ ದಸರಾ ಹಬ್ಬದ ಮುಖ್ಯ ಆಕರ್ಷಣೆ. ದಸರೆಯ ಹೊಸ್ತಿಲಲ್ಲೇ ಸಂತಸದ ಸುದ್ದಿಯೊಂದು ಹೊರ ಬಿದ್ದಿದೆ. ಅದೆಂದರೆ ದೇಶದಲ್ಲಿ ಕಾಡಾನೆಗಳು ಹೆಚ್ಚಿರುವ ರಾಜ್ಯ ಕರ್ನಾಟಕವೆಂಬುದು. ಅಪಾಯದ ಅಂಚಿನಲ್ಲಿರುವ ವನ್ಯಮೃಗಗಳ ಪಟ್ಟಿಯಲ್ಲಿ ಕಾಣಸಿಗುವ “ಆನೆ’ ಕನ್ನಡ ನೆಲದಲ್ಲಿ ಹೆಚ್ಚಾಗಿ ವಾಸಿಸುತ್ತಿದೆ ಎಂಬುದು ಹೆಮ್ಮೆಯ ವಿಚಾರ.

ಧರೆಯ ಮೇಲೆ ಇರುವ ಬೃಹತ್‌ ಗಾತ್ರದ ಪ್ರಾಣಿಗಳಲ್ಲಿ ಆನೆಗಳಿಗೆ ಮೊದಲ ಸ್ಥಾನ. ಅಂದಾಜು 24 ಸಾವಿರ ಪೌಂಡ್‌ ತೂಗುವ ಆನೆಗಳ ಸೊಂಡಿಲು 12-13 ಅಡಿಗಳಷ್ಟು ಉದ್ದವಿರುತ್ತವೆ! ಏಷ್ಯಾ ಹಾಗೂ ಆಫ್ರಿಕಾ ಖಂಡಗಳಲ್ಲಿ ಮಾತ್ರ ಜೀವಿಸುವ ಆನೆ ಸಂತತಿ ಮಾನವರೊಂದಿಗೆ ಹೆಚ್ಚು ಹಾಸುಹೊಕ್ಕಾಗಿರುವ ವನ್ಯಮೃಗ. ಬಹು ಹಿಂದಿನಿಂದಲೂ ಆನೆಯನ್ನು ಹಿಡಿದು ಪಳಗಿಸಿ ಅದನ್ನು ದುಡಿಸಿಕೊಳ್ಳುತ್ತಿರುವ ಮನುಷ್ಯ ಇಂದಿಗೂ ಆ ಪ್ರವೃತ್ತಿಯನ್ನು ಬಿಟ್ಟುಕೊಟ್ಟಿಲ್ಲ.

ಜೀವನದಲ್ಲಿ ನಾಲ್ಕು ಬಾರಿ ಮಾತ್ರ ಮರಿ ಹೆರುವ ಹೆಣ್ಣಾನೆ ಗರ್ಭಿಣಿ ಆಗಿರುವುದು ಕನಿಷ್ಟ 22 ತಿಂಗಳುಗಳು. ಮರಿಗಳೂ ಕೂಡ ಅಂದಾಜು ಏಳರಿಂದ 26 ಪೌಂಡ್‌ ತೂಗುತ್ತವೆ. ನಡಿಗೆ ಹಾಗೂ ಓಟ ಎರಡರಲ್ಲೂ ಪರಿಣಿತಿ ಪಡೆದಿರುವ ಆನೆ ಜಿಗಿಯಲಾಗದ ಏಕಮಾತ್ರ ಪ್ರಾಣಿ. ಮನುಷ್ಯರಿಗಿಂತ 3-4 ಪಟ್ಟು ತೂಕದ ಮೆದುಳಿರುವ ಆನೆ ಚರ್ಮ ಒಂದು ಇಂಚು ದಪ್ಪ. 

ರಾಷ್ಟ್ರೀಯ ಪಾರಂಪರಿಕ ಪ್ರಾಣಿ
ಭಾರತದಲ್ಲಿ ಆನೆ ಪ್ರಕೃತಿ ಮತ್ತು ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂಬ ಹಣೆಪಟ್ಟಿಯನ್ನು ಪಡೆದು ಕೊಂಡಿದೆಯಾದರೂ ಅದರ ಜೀವ ರಕ್ಷಣೆಗೆ ಹೆಚ್ಚಿನ ಮುತುವರ್ಜಿ ಮಾತ್ರ ವಹಿಸುತ್ತಿಲ್ಲ. ಸೊಪ್ಪುಸದೆ-ಗಡ್ಡೆ-ಹಣ್ಣು ತಿನ್ನುತ್ತ ಬದುಕು ನಡೆಸುವ ಆನೆಗಳ ಸಂತತಿ ಏಷ್ಯಾ-ಆಫ್ರಿಕಾ ಖಂಡಗಳಲ್ಲಿ ಕಾಣಸಿಗುತ್ತವೆ. ಉಳಿದ ದೇಶಗಳಲ್ಲಿ ಆನೆದರ್ಶನ ಮೃಗಾಲಯ ಮತ್ತು ಸರ್ಕಸ್‌ ಪ್ರದರ್ಶನಗಳಲ್ಲಿ ಮಾತ್ರ.

Advertisement

ದೇವಾಲಯ, ಯುದ್ಧ , ಮೆರವಣಿಗೆ, ಮರಮಟ್ಟು ಸಾಗಾಟಗಳಲ್ಲಿ ಸಾಮಾನ್ಯವಾಗಿ  ಕಾಣಿಸಿಕೊಳ್ಳುವ ಪಳಗಿಸಿದ ಆನೆಗಳಿಗೆ ಮನುಷ್ಯನೇ ಯಜಮಾನ. ಅರಣ್ಯಗಳ ಅತಿಕ್ರಮಣ ದೊಂದಿಗೆ ವನ್ಯಮೃಗಗಳ ಜೀವಕ್ಕೆ ಎರವಾಗಿರುವ ಮನುಷ್ಯ ಪ್ರಾಣಿಗೆ ಆನೆಗಳ ದಂತಗಳ ಮೇಲೆ ಕಣ್ಣು.

ಹೀಗಾಗಿ, ಈ ವಿಶಾಲ ಭೂಮಂಡಲದಲ್ಲಿ ಈಗ ಉಳಿದಿರುವುದು ಕೇವಲ ನಾಲ್ಕೈದು ಲಕ್ಷ ಆನೆಗಳು ಮಾತ್ರ. ವಿಶ್ವವನ್ಯ ಜೀವಿ ಸಂಘದ ಪೋಷಣೆಯಂತೆ ಆನೆಗಳೂ ಅಪಾಯದ ಅಂಚಿನಲ್ಲಿರುವ ಪ್ರಾಣಿಗಳು.

ಆನೆಗಳನ್ನು ಹಿಡಿದು ಪಳಗಿಸಿ ದುಡಿಸಿಕೊಳ್ಳುತ್ತಲೇ ಇರುವ ಮಾನವ ಕೆತ್ತನೆಗಳಲ್ಲಿ, ಕಲಾಕೃತಿಗಳಲ್ಲಿ, ಬರಹಗಳಲ್ಲಿ, ಚಿತ್ರಕೃತಿಗಳಲ್ಲಿ ಆನೆಗಳಿಗೆ ಸ್ಥಾನ ಕೊಟ್ಟಿದ್ದಾನೆ. ಮರದ ದಿಮ್ಮಿಗಳಂತಹ ಹೆಚ್ಚು ಶ್ರಮ ಬೇಡುವ ಕೆಲಸಗಳೊಂದಿಗೆ ರಾಜ-ಮಹಾರಾಜರನ್ನು ದೇವಾನುದೇವತೆಗಳ ಪ್ರತಿಮೆಗಳನ್ನು ಹೊತ್ತು ಸಾಗುವ ಪ್ರಕ್ರಿಯೆಯಲ್ಲೂ ಮಾನವ ಆನೆಗಳಿಗೆ ಸ್ಥಾನ ಕೊಟ್ಟಿದ್ದಾನೆ.

ಅರಮನೆ-ಗುರುಮನೆಗಳಲ್ಲಿ ಕಾಣಿಸಿಕೊಳ್ಳುವ ಆನೆ ಸಮುದಾಯ ಆಧುನಿಕ ಸಂಪರ್ಕ ಸಾಧನಗಳಾದ ಅಂಚೆ ಚೀಟಿಗಳಲ್ಲಿ ಹಾಗೂ ಅಂಚೆ ಮೊಹರು-ದಸ್ತಾವೇಜುಗಳಲ್ಲೂ ಸ್ಥಾನ ಪಡೆದಿದೆ. ಭಾರತ, ಚೀನಾ, ಶ್ರೀಲಂಕಾ, ಥಾಯ್‌ಲೆಂಡ್‌, ಲಾವೋಸ್‌, ಕೀನ್ಯ, ಸೋಮಾಲಿಯಾ, ನೈಜೀರಿಯಾ, ಉಗಾಂಡ ಮೊದಲಾದ ಗಜ ಸಂತತಿ ಇರುವ ದೇಶಗಳಲ್ಲಿ 500ಕ್ಕೂ ಹೆಚ್ಚು ಅಂಚೆಚೀಟಿಗಳು ಗಜ ಮಹಾರಾಜನನ್ನು ಹೊತ್ತು ತಂದಿವೆ.     ಝೂ-ಸರ್ಕಸ್‌ಗಳಲ್ಲಿ ಮಾತ್ರ ಆನೆಗಳನ್ನು ನೋಡುವ ಅವಕಾಶ ವಿರುವ ಅಮೆರಿಕ, ರಷ್ಯಾ, ಇಂಗ್ಲೆಂಡ್‌, ಯುರೋಪ್‌ ದೇಶಗಳ ಅಂಚೆಚೀಟಿಗಳಲ್ಲೂ ಆ ಪ್ರಾಣಿಗಳಿಗೆ ಗೌರವ ಸಿಕ್ಕಿದೆ.

ನೂರೊಂದು ಆನೆದಾರಿಗಳು ಈಗಲೂ ಇದ್ದರೂ ಕೇವಲ 27,312 (ಈಚಿನ ಗಣತಿ ಪ್ರಕಾರ) ಆನೆಗಳನ್ನು ತನ್ನಲ್ಲಿಟ್ಟುಕೊಂಡ ಭಾರತವೇ ಅಂಚೆಚೀಟಿಗಳಲ್ಲೂ ಆನೆಗಳ ಗುರುತು ಕಾಣಿಸಿದ ದೇಶ. ಹಿಂದೆ ಹಿಮಾಚಲ ಪ್ರದೇಶದಲ್ಲಿದ್ದ ಸ್ವತಂತ್ರ ರಾಜ್ಯ ಸಿಗಮೋರ್‌ 1865-1876ರ ಸುಮಾರಿಗೆ ತನ್ನ ಪತ್ರ ವ್ಯವಹಾರದಲ್ಲಿ ಆನೆ ಮೊಹರುಗಳನ್ನು ಉಪಯೋಗಿಸುತ್ತಿತ್ತು.

ಗಜರಾಜನ ಅಂಚೆಚೀಟಿ !
ಸ್ವತಂತ್ರ ಭಾರತದಲ್ಲಿ 1949ರ ಆಗಸ್ಟ್‌ 15ರಂದು ಬಿಡುಗಡೆಗೊಂಡ ನಿಯತವಾಗಿ ಉಪಯೋಗಿಸುವ ಅಂಚೆ ಚೀಟಿಗಳ ಸರಣಿಯಲ್ಲಿ ಪ್ರಸಿದ್ಧ ಅಜಂತಾ ಗುಹಾಂತರ ದೇವಾಲಯದ ಭಿತ್ತಿಗಳಲ್ಲಿರುವ ಗಜರಾಜನ ಚಿತ್ರ ಪ್ರಥಮ ವಾಗಿ ಕಾಣಿಸಿಕೊಂಡಿತು. ಆಗ ಅದರ ಬೆಲೆ 3 ಪೈಸೆ! ಆ ಬಳಿಕ ಸ್ಮರಣಾರ್ಥ ಅಂಚೆಚೀಟಿಗಳಲ್ಲಿ ಆನೆ ಮಹಾರಾಜ ಮೂಡಿಬಂದಿದ್ದು 1963ರ ಅಕ್ಟೋಬರ್‌ ಮಾಹೆಯಲ್ಲಿ ಪ್ರಕಟವಾದ ವನ್ಯಜೀವಿ ಸರಣಿ ಅಂಚೆ ಚೀಟಿಗಳಲ್ಲಿ.

ಭಾರತ ಸರ್ಕಾರ ಅಂಚೆ ಇಲಾಖೆ ಮುಖೇನ 1977ರಲ್ಲಿ ನವದೆಹಲಿಯಲ್ಲಿ ವ್ಯವಸ್ಥೆ ಮಾಡಿದ್ದ ವಿಶ್ವ ಅಂಚೆಚೀಟಿ ಪ್ರದರ್ಶನದ ಲಾಂಛನದಲ್ಲಿ ಜಾಗ ಪಡೆದುಕೊಂಡಿದ್ದು ಆನೆ.

ಜೈಪುರ ಸರ್ಕಾರ 1937ರಷ್ಟು ಹಿಂದೆಯೇ ಆನೆ ಅಂಬಾರಿಯುಳ್ಳ ಅಂಚೆ ಚೀಟಿಯನ್ನು ಹೊರತಂದಿದ್ದರೆ ಭಾರತ ಸರ್ಕಾರ ಪ್ರವಾಸೋದ್ಯಮ ಸಪ್ತಾಹ, ವನ್ಯಜೀವಿ ಆಚರಣೆ, ಜಿರ್ಮ್ಕಾರ್ಬೆಟ್‌ ಅಭಯಾರಣ್ಯ ಸ್ಮರಣಾರ್ಥ ಹೀಗೆ- ಅನೇಕ ಸಂದರ್ಭಗಳಲ್ಲಿ ಒಟ್ಟು 11ಕ್ಕೂ ಹೆಚ್ಚು ನೆನಪಿನ ಆನೆ ಅಂಚೆಚೀಟಿಗಳನ್ನು ಪ್ರಕಟಿಸಿದ್ದು ಹಲವಾರು ಅಂಚೆಕಾರ್ಡು, ವಿಶೇಷ ಮತ್ತು ಮೊದಲ ದಿನ ಲಕೋಟೆಗಳಲ್ಲೂ ಅನೇಕ ಚಿತ್ರ ಗಳನ್ನು ಪ್ರಧಾನವಾಗಿ ಮೂಡಿಸಿದೆ.

ಜಗತ್ತಿನ 75ಕ್ಕೂ ಅಧಿಕ ರಾಷ್ಟ್ರಗಳು ತಮ್ಮ ದೇಶದ ಅಂಚೆಚೀಟಿಗಳಲ್ಲಿ “ಗಜರಾಜ’ನಿಗೆ ಮಾನ್ಯತೆ ನೀಡಿವೆ. ಯುರೋಪ್‌ ದೇಶಗಳು ವಿರಳವಾಗಿ ಆನೆ ಅಂಚೆಚೀಟಿಗಳನ್ನು ಹೊರತಂದ ಆಫ್ರಿಕಾ ಮತ್ತು ಏಷ್ಯನ್‌ ದೇಶಗಳು ವರ್ಷದುದ್ದಕ್ಕೂ ಹೊರತರುವ “ಆನೆ’ ಅಂಚೆಚೀಟಿಗಳು ಹತ್ತಾರು.

ಆಸ್ಟ್ರೀಯಾ “ವಿಯಾನ್ನಾ’ದ ಮೃಗಾಲಯಕ್ಕೆ 250 ವರ್ಷ ತುಂಬಿದಾಗ, ಡೆನ್ಮಾರ್ಕ್‌ನ ಕೊಪನ್‌ಹೇಗನ್‌ ಮೃಗಾಲಯಕ್ಕೆ 150 ವರ್ಷವಾದ ಸಂದರ್ಭದಲ್ಲಿ ಹೊರತಂದಿರುವ ವಿಶಿಷ್ಟ ಬಗೆಯ ಅಂಚೆಚೀಟಿಗಳು ಸಂಗ್ರಹಕಾರರ ಗಮನ ಸೆಳೆದಿವೆ. ಚೆಕ್‌ ಗಣರಾಜ್ಯ ಆನೆ-ಮರಿ ಇರುವ ಅಂಚೆಚೀಟಿ ನಾಲ್ಕು ಆನೆ ಭಂಗಿಗಳಿರುವ ಅಂಚೆ ಸ್ಟಾಂಪುಗಳನ್ನು ಬಿಡುಗಡೆಗೊಳಿಸಿದೆ.

ದಶಲಕ್ಷ ಆನೆಗಳ ಬೀಡು ಎಂಬ ಖ್ಯಾತಿ ಪಡೆದಿರುವ ಲಾವೋಸ್‌, ಆನೆಗಳ ಪೂಜೆಯಲ್ಲಿ ಮುಂದಿರುವ ಕಾಂಬೋಡಿಯಾ, ಥಾಯ್‌ಲ್ಯಾಂಡ್‌ ವಿಶಿಷ್ಟ ಹಾಗೂ ವೈವಿಧ್ಯಮಯವಾದ ಅಂಚೆಚೀಟಿಗಳನ್ನು ಆಗಿಂದಾಗ್ಗೆ ಹೊರತಂದರೆ ಆಫ್ರಿಕಾದ ಮೊಜಾಂಬಿಕ್‌, ಕಾಂಗೋ, ಉಗಾಂಡ, ಕೀನ್ಯ, ನೈಜೀರಿಯಾ, ಸೋಮಾಲಿಯಾ ದೇಶಗಳೂ ಚಿತ್ತಾಕರ್ಷಣೆಯ ಆನೆ ಚೀಟಿಗಳನ್ನು ಪ್ರಕಟಿಸುವಲ್ಲಿ ಹಿಂದೆ ಬಿದ್ದಿಲ್ಲ.

ಕಲಾಕೃತಿಗಳಲ್ಲಿ, ರೇಖಾಚಿತ್ರಗಳಲ್ಲಿ, ವ್ಯಂಗ್ಯಚಿತ್ರಗಳಲ್ಲಿ ಮೂಡಿಬಂದಿರುವ ಆನೆಗಳ ಚಿತ್ರಗಳ ಅಂಚೆಚೀಟಿಗಳಲ್ಲಿ ಕಾಣಿಸಿ ಕೊಳ್ಳುವುದು ಒಂದೆಡೆಯಾದರೆ, ಛಾಯಾಚಿತ್ರಗಳ ಆನೆಗಳೂ ಅಂಚೆಚಿತ್ರಗಳಲ್ಲಿ ಮುದ್ರಣಗೊಂಡಿರುವ ಪೋಲೆಂಡ್‌ನ‌ “ಕಪ್ಪು ಬಿಳುಪು’ ಆನೆ ಚಿತ್ರವಿರುವ ಅಂಚೆಚೀಟಿ ಬಹು ಬೇಡಿಕೆಯ ಅಂಚೆಚೀಟಿ.

ಹಸಿರು-ನೀರು ಹೆಚ್ಚು ಇಷ್ಟಪಡುವ “ಆನೆ’ಗಳ ನೆನಪಿಗಾಗಿ ಪ್ರತಿ ಆಗಸ್ಟ್‌ 12ರಂದು “ವಿಶ್ವ ಆನೆ ದಿನ’ ಆಚರಿಸುವ ರೂಢಿ ಇದೆ. ದೇಶದ ಹಲವೆಡೆ ಆನೆ ಸ್ನೇಹ ತಂಡಗಳು ಆನೆ ಬದುಕಿನ ಬಗ್ಗೆ ಆಗಾಗ ಕಾರ್ಯಕ್ರಮಗಳನ್ನು ಏರ್ಪಡಿಸುತ್ತವೆ. ರಾಷ್ಟ್ರದುದ್ದಕ್ಕೂ ಆನೆ ಅಂಚೆಚೀಟಿಗಳನ್ನು ಆನೆಗೆ ಸಂಬಂಧಿಸಿದ ವಸ್ತು ವಿಶೇಷ ಗಳನ್ನು ಸಂಗ್ರಹಿಸುವ ಆಸಕ್ತರಿದ್ದಾರೆ.
ಕರ್ನಾಟಕ ಅಂಚೆಚೀಟಿ ಸಂಗ್ರಹಕಾರ ಸಂಘದಲ್ಲೂ ಹಲವು “ಆನೆ’ಪ್ರಿಯರುಂಟು. “ಆನೆ’ಗೆ ಸಂಬಂಧಪಟ್ಟ ಅಂಚೆಚೀಟಿ-ಅಂಚೆ ಲಕೋಟೆ, ನಾಣ್ಯ-ಮೊಹರುಗಳನ್ನು ಸಂಗ್ರಹಿಸುವುದು ಬಹಳ ಮಂದಿಯ ಹವ್ಯಾಸ.

ಅಂಚೆಚೀಟಿ ಜಗತ್ತಿಗೆ ಬಂದರೆ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆಂದೇ ಭಾರತೀಯ ಅಂಚೆ ಇಲಾಖೆ ಮೈಸೂರು ಅಂಬಾವಿಲಾಸ ಅರಮನೆಯ ಹಿನ್ನೆಲೆಯಲ್ಲಿ ಅಂಬಾರಿ ಹೊತ್ತಿರುವ ಆನೆ ಇರುವ ಅಂಚೆಚೀಟಿಯನ್ನು ಸ್ಮರಣಾರ್ಥವಾಗಿ ಬಿಡುಗಡೆ ಮಾಡಿದೆ.

– ಎನ್‌. ಜಗನ್ನಾಥ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next