ಮಾಸ್ತಿ: ಐದು ದಿನ ಮಾಲೂರು ತಾಲೂಕಿನಲ್ಲಿ ಬೀಡುಬಿಟ್ಟಿದ್ದ 6 ಕಾಡಾನೆಗಳನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಸಂಜೆ ಕಾರ್ಯಾಚರಣೆ ನಡೆಸಿ, ತಮಿಳುನಾಡು ಅರಣ್ಯಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಲೂರು ತಾಲೂಕಿನ ಡಿ.ಎನ್.ದೊಡ್ಡಿ, ಬಂಟಹಳ್ಳಿ, ನಾಗಾಪುರ, ಮಾಲೂರು ಪಟ್ಟಣಕ್ಕೆ ಹೊಂದಿಕೊಂಡಿರುವ ಅರಳೇರಿ ಸೇರಿ ಹಲವು ಗ್ರಾಮಗಳ ಸುತ್ತಮುತ್ತ ಸಂಚರಿಸಿ, ಕೆಲವು ಪ್ರದೇಶಗಳಲ್ಲಿ ಬೀಡು ಬಿಡುತ್ತಿದ್ದ 6 ಆನೆಗಳ ಹಿಂಡು ಗುರುವಾರ ಟೇಕಲ್ ಹೋಬಳಿಯ ಬಲ್ಲಹಳ್ಳಿ ಗ್ರಾಮ ಸಮೀಪದ ನೀಲಗಿರಿ ತೋಪಿನಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ್ದವು. ನಂತರ ಅಂದಿನ ರಾತ್ರಿ ಹುಳದೇನಹಳ್ಳಿ, ಮಾಸ್ತಿ ಹೋಬಳಿಯ ತೊಳಸನದೊಡ್ಡಿ ಸಮೀಪ ತೋಟಗಳ ಮೂಲಕ ಆಗಮಿಸಿ, ಶುಕ್ರವಾರ ಬೆಳಗ್ಗೆ ದಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳೇಹಾರೋಮಾಕನಹಳ್ಳಿ ಸಮೀಪದ ಕೆರೆಯಲ್ಲಿ ಪ್ರತ್ಯಕ್ಷವಾಗಿದ್ದವು.
ಕಾರ್ಯಾಚರಣೆ: ಗಡಿ ಭಾಗ ಹಳೇಹಾರೋಮಾಕನಹಳ್ಳಿ ಕೆರೆಯಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ವೀಕ್ಷಿಸಲು ಜನ ತಂಡೋಪ ತಂಡವಾಗಿ ಆಗಮಿಸಿ ಅಲ್ಲಲ್ಲಿ ಗುಂಪಾಗಿ ನಿಂತು ಗಲಾಟೆ ಮಾಡುತ್ತಿದ್ದರು. ಇದರಿಂದ ಆನೆಗಳು ಕದಲದೇ ಕೆರೆಯಲ್ಲಿ ಸುತ್ತಾಡುತ್ತಾ ಸಂಜೆವರೆಗೂ ಬೀಡುಬಿಟ್ಟಿದ್ದವು. ಸಂಜೆಯಾಗುತ್ತಿದ್ದಂತೆ ಆನೆಗಳು ಮುಂದಕ್ಕೆ ತೆರಳಲು ಪ್ರಾರಂಭಿಸಿದಾಗ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪಟಾಕಿ ಸಿಡಿಸುತ್ತಾ ಕಾರ್ಯಾಚರಣೆ ಆರಂಭಿಸಿದರು.
ಆನೆಗಳು ಮುಂದಕ್ಕೆ ಹೋಗುತ್ತಿದ್ದಂತೆ ಜನತೆಯೂ ಕೂಗಾಟ, ಕಿರುಚಾಟ, ಶಿಳ್ಳೆ ಹೊಡೆಯುತ್ತಾ ಆನೆಗಳನ್ನು ಹಿಂಬಾಲಿಸುತ್ತಿದ್ದರು. ಇದರಿಂದ ಗಾಬರಿಗೊಂಡ ಆನೆಗಳು ಮತ್ತಷ್ಟು ಜೋರಾಗಿ ಓಡಲು ಪ್ರಾರಂಭಿಸಿದವು. ನಂತರ ಕಾಂಚಾಳ, ದುಡವನಹಳ್ಳಿ ಕೆರೆ ಹಾಗೂ ಗಡಿಭಾಗದ ಅರಣ್ಯದ ಮೂಲಕ ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಸೇರಿದವು.
ನಿಟ್ಟಿಸಿರು ಬಿಟ್ಟ ಅರಣ್ಯ ಸಿಬ್ಬಂದಿ: ಐದು ದಿನಗಳಿಂದ ಮಾಲೂರು ತಾಲೂಕಿನ ಹಲವು ಗ್ರಾಮಗಳ ಸಮೀಪ ಸಂಚರಿಸಿ ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆ ನೋವಾಗಿದ್ದವು. ಹಲವು ಗ್ರಾಮಗಳಲ್ಲಿ ಮಾವು, ತರಕಾರಿ, ಬಾಳೆ ಬೆಳೆಯನ್ನು ನಾಶ ಮಾಡಿದ್ದವು. ಶುಕ್ರವಾರ ರಾತ್ರಿ ವೇಳೆಗೆ ಹಳೇಹಾರೋಮಾಕನಹಳ್ಳಿ ಕೆರೆಯ ಮೂಲಕ ತಮಿಳುನಾಡು ಅರಣ್ಯ ಪ್ರದೇಶಕ್ಕೆ ಓಡಿಸುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರುಬಿಟ್ಟಿದ್ದಾರೆ.
ಶಾಶ್ವತ ಪರಿಹಾರ ಕಲ್ಪಿಸಿ: ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳು ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಿವೆ. ಆಗಾಗ ಚಿರತೆ, ಮುಂತಾದ ಕಾಡು ಪ್ರಾಣಿಗಳು ಬರುತ್ತವೆ. ಬೇಸಿಗೆಯಲ್ಲಿ ಆಹಾರ ಸಿಗದೇ ಮತ್ತೆ ಕಾಡಾನೆಗಳು ಬರಬಹುದೆಂಬ ಆತಂಕ ಜನರನ್ನು ಕಾಡುತ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ.