Advertisement
ಮೇದಿನಡ್ಕ ಸಂರಕ್ಷಿತ ಅರಣ್ಯ ಭಾಗದಿಂದ ಪಯಸ್ವಿನಿ ನದಿ ತಟದ ತೋಟಗಳು ಹಲವು ವರ್ಷಗಳಿಂದ ಆನೆ ದಾಳಿಗೆ ನಲುಗಿವೆ. ವಾರದ ಹಿಂದೆ ಮೂರು ಮರಿಯಾನೆ ಸಹಿತ ಎಂಟಾನೆಗಳ ಹಿಂಡು ಭಸ್ಮಡ್ಕದ ಪಯಸ್ವಿನಿ ನದಿಗೆ ಇಳಿದು ಮೂರು ದಿನ ಅಲ್ಲೇ ಬೀಡು ಬಿಟ್ಟಿತ್ತು. ನಗರಕ್ಕೆ ನುಗ್ಗುವ ಆತಂಕವೂ ಸೃಷ್ಟಿಯಾಗಿತ್ತು. ಒಂದು ಮರಿಯಾನೆ ಸ್ಥಳದಲ್ಲಿ ಬಾಕಿಯಾಗಿ ಅಸ್ವಸ್ಥಗೊಂಡ ಬಳಿಕ ಸಕ್ರೆಬೈಲಿಗೆ ರವಾನೆಯಾಗಿತ್ತು.
ಉಳಿದ ಏಳು ಆನೆಗಳು ಮೇದಿನಡ್ಕ ಅರಣ್ಯ ಭಾಗಕ್ಕೆ ತೆರಳಿದ್ದರೂ ಹೆಚ್ಚು ದೂರ ಹೋಗಿಲ್ಲ. ಮೂರು ದಿನಗಳ ಬಳಿಕ ಮತ್ತೆ ತೋಟಕ್ಕೆ ನುಗ್ಗಿವೆ. ಈ ಆನೆಗಳು ಮರಿಯನ್ನು ಅರಸುತ್ತಾ ಮರಳಿ ಬರುವ ಗುಮಾನಿ ಇದ್ದ ಹಿನ್ನೆಲೆಯಲ್ಲಿ, ಕೃಷಿಕರು ಆತಂಕದಿಂದ ಇದ್ದರು. ಗುರುವಾರ ಸಂಜೆಯೇ ನದಿ ಭಾಗದಲ್ಲಿ ಕಾಡಾನೆ ಹಿಂಡು ಕಾಣಿಸಿಕೊಂಡಿದ್ದು, ಶುಕ್ರವಾರ ಬೆಳಗ್ಗೆೆ ತೋಟಕ್ಕೆ ನುಗ್ಗಿ ಹಾನಿ ಮಾಡಿವೆ. ಶಾಶ್ವತ ಕ್ರಮಕ್ಕೆ ಆಗ್ರಹ
ಬೆಳೆ ನಷ್ಟವಾದ ಕೃಷಿ ತೋಟಕ್ಕೆ ಸಂಬಂಧಿಸಿ ಆ ಭಾಗದ ಕೃಷಿಕರು ಶುಕ್ರವಾರ ಅರಣ್ಯ ಇಲಾಖಾಧಿಕಾರಿಗಳನ್ನು ಭೇಟಿ ಮಾಡಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು. ಅನಂತರ ಕೃಷಿ ನಾಶದ ಸ್ಥಳಕ್ಕೆ ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ ಎನ್. ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಬಹುತೇಕ ಕಡೆಗಳಲ್ಲಿ ಆನೆ ಕಂದಕ ನಿರ್ಮಿಸಿ ಆನೆ ತಡೆಗೆ ಪ್ರಯತ್ನ ಮಾಡಲಾಗಿದೆ. ಭಸ್ಮಡ್ಕ, ಮೇದಿನಡ್ಕ ಭಾಗದಲ್ಲಿ ಮೂರು ರಸ್ತೆಗಳಲ್ಲಿ ಕಾಡಾನೆಗಳು ಕೃಷಿ ತೋಟಕ್ಕೆ ನುಗ್ಗುತ್ತಿವೆ. ಇಲಾಖಾ ಅನುದಾನ ಬಳಿಸಿ ಅಲ್ಲಿ ಮುಳ್ಳಿನ ಮಾದರಿಯ ಗೇಟು ಅಳವಡಿಸಿ, ಕೃಷಿಕರಿಗೆ ನಿರ್ವಹಣೆ ಮಾಡಲು ಅವಕಾಶ ನೀಡಲಾಗುವುದು. ಅಭಯಾರಣ್ಯ, ನಾಗರಹೊಳೆ ಮಾದರಿಯಲ್ಲಿ ತೋಡುಗಳಲ್ಲಿ ಕಾಂಕ್ರೀಟ್ ಕಂಬ ಅಳವಡಿಕೆ, ಅಗತ್ಯ ಇರುವೆಡೆ ಸೋಲಾರ್ ಬೇಲಿ ಸ್ಥಾಪಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ.
Related Articles
ಶುಕ್ರವಾರ ಸಂಜೆ 5 ಗಂಟೆಯ ಅನಂತರ ಆನೆಗಳನ್ನು ಕಾಡಿಗೆ ಅಟ್ಟಲು ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ. ಅರಣ್ಯ ರಕ್ಷಕರು, ಇತರ ಸಿಬಂದಿಗಳಿರುವ ಒಂದು ತಂಡ ಕೃಷಿ ತೋಟಕ್ಕೆ ಆನೆ ಬಾರದಂತೆ ತಡೆಯುವ ಸಲುವಾಗಿ ಹಾಗೂ ಇನ್ನೊಂದು ತಂಡ ನದಿ ಭಾಗದ ಅರಣ್ಯಪ್ರದೇಶದಲ್ಲಿರುವ ಕಾಡಾನೆ ದಿಂಡನ್ನು ಅರಣ್ಯದತ್ತ ಅಟ್ಟುವ ಸಲುವಾಗಿ ನಿಯೋಜಿಸಲಾಗಿದೆ. ಕೃಷಿಕರಿಗೆ ಪಟಾಕಿ ನೀಡಿ, ಅಗತ್ಯ ಸಂದರ್ಭದಲ್ಲಿ ಬಳಸುವಂತೆ ಸೂಚಿಸಲಾಗಿದೆ.
Advertisement
ಶಾಶ್ವತ ಪರಿಹಾರಕ್ಕೆ ಯತ್ನಆನೆ ದಾಳಿಯಿಂದ ನಷ್ಟವಾದ ಕೃಷಿಕರಿಗೆ ತತ್‌ಕ್ಷಣ ಪರಿಹಾರ ಒದಗಿಸಲಾಗುತ್ತದೆ. ಆನೆ ನುಗ್ಗುವ ಪ್ರದೇಶಗಳಲ್ಲಿ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಭಸ್ಮಡ್ಕ, ಬೆಳ್ಳಪ್ಪಾರೆ ಅರಣ್ಯ ಭಾಗದಿಂದ ಕಾಡಾನೆ ಗುಂಪನ್ನು ಬಟ್ಟಂಗಾಯ ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ನಡೆಸುತ್ತೇವೆ. ಅಲ್ಲಿಂದ ಕೇರಳ ಭಾಗದ ಅರಣ್ಯ ಇಲಾಖಾ ಸಿಬಂದಿಗಳ ಜತೆಗೂಡಿ ಭಾಗಮಂಡಲ ಅರಣ್ಯಕ್ಕೆ ದಾಟಿಸಲು ಕ್ರಮ ಕೈಗೊಳ್ಳಲಾಗುವುದು.
– ಜಗನ್ನಾಥ ಎನ್. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ