ಹುಣಸೂರು: ನಾಗರಹೊಳೆ ಉದ್ಯಾನದಿಂದ ಹೊರ ಬಂದಿದ್ದ ಕಾಡಾನೆಗಳ ಗುಂಪಿನಲ್ಲಿದ್ದ ಸಲಗವೊಂದು ಗುಂಪಿನಿಂದ ಬೇರ್ಪಟ್ಟು, ಮರಳಿ ಉದ್ಯಾನಕ್ಕೆ ತೆರಳಲು ರೈಲ್ವೆ ಕಂಬಿಯ ತಡೆಗೋಡೆ ದಾಟಲು ಹೋಗಿ ಸಿಕ್ಕಿ ಬಿದ್ದಿದ್ದು, ಕೊನೆಗೆ ಕಂಬಿಯ ಮೇಲೆಯೇ ಪ್ರಾಣ ತ್ಯಜಿಸಿದ ಘಟನೆ ವೀರನಹೊಸಹಳ್ಳಿಯ ಅರಣ್ಯ ಸಿಬ್ಬಂದಿಗಳ ವಸತಿಗೃಹದ ಬಳಿ ಸಂಭವಿಸಿದೆ.
ಸುಮಾರು 41-42 ವರ್ಷದ ಈ ಸಲಗ, ಇತರ ಎರಡು ಆನೆಗಳೊಂದಿಗೆ ಗುರುವಾರ ರಾತ್ರಿ ಉದ್ಯಾನದಿಂದ ಹೊರದಾಟಿ ಬಂದು ಕೋಣನಹೊಸಹಳ್ಳಿ, ಕೊಳುವಿಗೆ, ಮುದಗನೂರು ಬಳಿ ಅಡ್ಡಾಡುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು
ಗಣೇಶ, ಬಲರಾಮ ಆನೆಗಳ ನೆರವಿನಿಂದ ಶುಕ್ರವಾರ ಬೆಳಗ್ಗೆ ಎರಡು ಕಾಡಾನೆಗಳನ್ನು ಕೊಳವಿಗೆಯ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಗೇಟ್‌ನಿಂದ ಒಳ ಸೇರಿಸಿದ್ದರು. ಆದರೆ, ಈ ಸಲಗ ಗಾಬರಿಗೊಂಡು ಗುಂಪಿನಿಂದ ಬೇರ್ಪಟ್ಟು, ಕೋಣನಹೊಸಹಳ್ಳಿ ಬಳಿ ನೀಲಗಿರಿ ತೋಪಿನತ್ತ ಓಡಿತ್ತು. ಎಷ್ಟೇ ಪ್ರಯತ್ನಪಟ್ಟರೂ ಸಾಕಾನೆಗಳಿಗೂ ಹೆದರದೆ ಸೆಡ್ಡು ಹೊಡೆದಿತ್ತು. ಕೊನೆಗೆ ರಾತ್ರಿ ವೇಳೆ ಕಾಡಿಗಟ್ಟಲು ಯತ್ನಿಸಿದಾಗಲೂ ಸಾಧ್ಯವಾಗಿರಲಿಲ್ಲ.
ಆದರೆ, ಶನಿವಾರ ಮುಂಜಾನೆ ವೇಳೆ ಈ ಸಲಗ ವೀರನಹೊಸಹಳ್ಳಿವರೆಗೆ ಬೇಲಿ ಅಂಚಿನಲ್ಲೇ ನಡೆದುಕೊಂಡು ಬಂದು, ಉದ್ಯಾನ ಪ್ರವೇಶಿಸಲು ರೈಲ್ವೆ ಕಂಬಿ ಏರಿ, ವಿಫಲ ಯತ್ನ ನಡೆಸಿತು. ಕಂಬಿಯ ಮೇಲೆ ಹೊಟ್ಟೆ ಸಿಲುಕಿ ನೆಲಕ್ಕೆ ಕಾಲೂರಲಾಗದೆ, ಘೀಳಿಡಲೂ ಆಗದೆ, ಆನೆ ಶ್ವಾಸಕಟ್ಟಿ ಇಹಲೋಕ ತ್ಯಜಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎ.ಸಿ.ಎಫ್.ಪ್ರಸನ್ನಕುಮಾರ್, ಆರ್. ಎಫ್.ಓ.ಸಂದೀಪ್, ಗ್ರಾಮಸ್ಥರ ಸಹಕಾರದಿಂದ ಆನೆಗೆ ಹಗ್ಗ ಕಟ್ಟಿ ಕೆಳಕ್ಕಿಳಿಸಿದರು. ನಾಗರಹೊಳೆ ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಶವಪರೀಕ್ಷೆ ನಡೆಸಿದರು. ಈ ಮಧ್ಯೆ, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲ ಗ್ರಾಮಸ್ಥರು, ಆನೆಯ ಸಾವಿಗೆ ಮಮ್ಮಲ ಮರುಗಿದರು.