ಆನೇಕಲ್:ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಆನೆ ಮರಿಯೊಂದು ಶವವಾಗಿ ಪತ್ತೆಯಾಗಿರುವ ಘಟನೆ ಬನ್ನೇರುಘಟ್ಟ ಉದ್ಯಾನವನದಲ್ಲಿ ಸಂಭವಿಸಿದೆ. ಉದ್ಯಾನವನದ ಸೀಗೆಕಟ್ಟೆ ಬಳಿ ಇರುವ ಸಾಕಾನೆಗಳ ಬಿಡಾರದಿಂದ ಸೋಮವಾರ ಬೆಳಗಿನಿಂದ ಆರು ವರ್ಷ ವಯಸ್ಸಿನ ಶ್ರೀರಾಮುಲು ಹೆಸರಿನ ಗಂಡು ಆನೆಮರಿ ನಿಗೂಢವಾಗಿ ಮೃತಪಟ್ಟಿದೆ.
ಪ್ರತಿದಿನದ ವಾಡಿಕೆಯಂತೆ ಆನೆ ಬಿಡಾರದಿಂದ ಸಂಜೆಯಾಗುತ್ತಲೆ ಎಲ್ಲ ಸಾಕಾನೆಗಳನ್ನು ಕಾಡಿಗೆ ಬಿಡಲಾಗುವುದು. ಹೀಗೆ ಭಾನುವಾರ ಸಂಜೆ ಕಾಡಿಗೆ ಹೊರ ಟಿದ್ದ ಶ್ರೀರಾಮುಲು ಮರಿಯಾನೆ ಸೋಮವಾರ ಎಲ್ಲ ಆನೆ ಗಳಂತೆ ಬಿಡಾರಕ್ಕೆ ಶ್ರೀರಾಮುಲು ಬರಲಿಲ್ಲ.
ಈ ವಿಷಯ ತಿಳಿದ ಸಿಬ್ಬಂದಿ ಸೋಮವಾರದಿಂದ ಬುಧವಾರದವರೆಗೂ ಕಾಡಲ್ಲಿ ಅಲೆದರಾದರೂ, ಆನೆ ಪತ್ತೆ ಆಗಿರಲಿಲ್ಲ. ಬುಧುವಾರ ಹುದುಗೆ ಬಂಡೆ ಬಳಿ ಆನೆ ಶವದ ವಾಸನೆ ಜಾಡು ಹಿಡಿದ ಸಿಬ್ಬಂದಿ ಇಳಿಜಾರಿನ ಪೊದೆಗಳಲ್ಲಿ ಶ್ರೀರಾಮುಲು ಮೃತ ಪಟ್ಟಿರುವುದು ತಿಳಿದು ಬಂದಿದೆ.
ಇದನ್ನೂ ಓದಿ:- ಸೌಲಭ್ಯ ಪಡೆಯಲು ಬೀದಿನಾಟಕದಿಂದ ಜಾಗೃತಿ ಅಭಿಯಾನ
ಆನೆ ಮೃತಪಟ್ಟ ಮಾಹಿತಿ ಪಡೆದ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ಸಿಂಗ್ ಸ್ಥಳಕ್ಕೆ ಆಗಮಿಸಿ ಆನೆ ಪರಿಶೀಲನೆ ಬಳಿಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಗಳ ನೇತೃತ್ವದಲ್ಲಿ ಶವ ಪರೀಕ್ಷೆ ನಡೆಸಲಾಗಿದೆ. ನಾಪತ್ತೆಯಾಗಿದ್ದ ಆನೆ ಕಾಡಾನೆ ದಾಳಿಯಿಂದ ಅಥವಾ ಇಳಿಜಾರಿನಲ್ಲಿ ಆಯತಪ್ಪಿ ಜಾರಿ ಬಿದ್ದು ಗಾಯಗೊಂಡು ನಂತರ ಮೃತಪಟ್ಟಿರಬಹುದು ಎಂದು ಉದ್ಯಾನ ವನದ ಮೂಲಗಳು ತಿಳಿಸಿವೆ. ಮೃತ ಆನೆ ಒಂದು ದಂತ ಮುರಿದು ಬಿದ್ದಿತ್ತು. ಅದನ್ನು ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ. ಶ್ರೀರಾಮುಲು ನಿಸರ್ಗ ಮತ್ತು ವನರಾಜ ಆನೆಗಳ ಮರಿ.