Advertisement

ಜಿಲ್ಲೆಯಲ್ಲಿ ಒಂಟಿ ಸಲಗ ಸಂಚಾರ

09:04 PM Feb 24, 2020 | Lakshmi GovindaRaj |

ತುಮಕೂರು: ಕಲ್ಪತರು ನಾಡಿನಲ್ಲಿ ಮತ್ತೆ ಕಾಡಾನೆ ಉಪಟಳ ಆರಂಭವಾಗಿದೆ. ಚಿತ್ರದುರ್ಗದ ಕಡೆಯಿಂದ ಬಂದಿರುವ ಒಂಟಿಸಲಗ ಜಿಲ್ಲೆಯಲ್ಲಿ ಸಂಚರಿಸುತ್ತಿರುವುದು ರೈತರ ನಿದ್ದೆಗೆಡಿಸಿದೆ. ಎರಡು ವರ್ಷದ ಹಿಂದೆ ಸಾವನದುರ್ಗ ಅರಣ್ಯ ಪ್ರದೇಶದಿಂದ ನೆಲಮಂಗಲ ಮಾರ್ಗವಾಗಿ ತುಮಕೂರು ತಾಲೂಕಿಗೆ ಪ್ರವೇಶಿಸಿ ರೈತರಿಗೆ ತಲೆ ನೋವಾಗಿತ್ತು.

Advertisement

ಈ ಬಾರಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಅರಣ್ಯ ಪ್ರದೇಶದಿಂದ ಜಿಲ್ಲೆಯ ಬುಕ್ಕಾಪಟ್ಟಣ ಅರಣ್ಯ ಪ್ರದೇಶದ ಮೂಲಕ ಜಿಲ್ಲೆಗೆ ಕಾಲಿಟ್ಟಿರುವ ಒಂಟಿಸಲಗ ಚಿಕ್ಕನಾಯಕನಹಳ್ಳಿ, ತಿಪಟೂರು ಅರಣ್ಯ ಪ್ರದೇಶದ ಮೂಲಕ ಗುಬ್ಬಿ ಭಾಗಕ್ಕೆ ಪ್ರವೇಶಿಸಿದ್ದು, ಬೆಳೆಗಳು ಆನೆ ಪಾಲಾಗುತ್ತಿರುವುದರಿಂದ ಜಿಲ್ಲೆಯ ರೈತರಲ್ಲಿ ಆತಂಕ ಮೂಡಿಸಿದೆ.

ಇಲಾಖೆ ಮುನ್ನೆಚ್ಚರಿಕೆ: ಈ ಹಿಂದೆ ಜಿಲ್ಲೆಗೆ ಪ್ರವೇಶಿಸಿದ್ದ ಕಾಡಾನೆಗಳು ಬೆಳೆ ನಾಶ, ಸಾವು-ನೋವಿಗೆ ಕಾರಣವಾಗಿದ್ದವು. ನಂತರ ಒಂಟಿಸಲಗವೊಂದು ಜಿಲ್ಲೆಯಲ್ಲಿ ಸಂಚರಿಸಿ ರೈತನನ್ನು ಬಲಿ ಪಡೆದಿತ್ತು. ಈ ನಿಟ್ಟಿನಲ್ಲಿ ಕಾಡಾನೆ ಅರಣ್ಯ ಪ್ರದೇಶ ಮತ್ತು ರೈತರ ಜಮೀನುಗಳಲ್ಲಿ ಸಂಚರಿಸುತ್ತಿರುವ ಆನೆ ಜನವಸತಿ ಕಡೆ ನುಗ್ಗದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದ್ದು, ಆನೆಯನ್ನು ಕಾಡಿಗಟ್ಟುವ ಕಾರ್ಯ ಪ್ರಗತಿಯಲ್ಲಿದೆ.

ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಆನೆಯ ಚಲನವಲನಗಳ ಬಗ್ಗೆ ನಿಗಾವಹಿಸಿ ಸಾರ್ವಜನಿಕರ ಸಹಕಾರದೊಂದಿಗೆ ಆನೆ ಓಡಿಸಲು ಕಾರ್ಯೋನ್ಮುಖರಾಗಿದ್ದಾರೆ. ಕಾರ್ಯಾಚರಣೆ ವೇಳೆ ಸಾರ್ವಜನಿಕರು ಆನೆಗಳ ಮೇಲೆ ಕಲ್ಲು ಎಸೆಯುವುದು ಪಟಾಕಿ ಸಿಡಿಸುವುದು ಮತ್ತು ಓಡಿಸುವ ಪ್ರಯತ್ನ ಮಾಡಬಾರದು.

ಆನೆ ತೋಟಗಳಲ್ಲಿ ರಾತ್ರಿ ವೇಳೆಆಹಾರ ಸೇವಿಸಿ ಮತ್ತೆ ಮುಂದೆ ಸಾಗುತ್ತಿದೆ. ಗುಬ್ಬಿ ಅರಣ್ಯದಲ್ಲಿರುವ ಕಾಡಾನೆ ಕುಣಿಗಲ್‌ ಅರಣ್ಯಪ್ರದೇಶದ ಮಾರ್ಗವಾಗಿ ಸಾವನದುರ್ಗ, ಬನ್ನೇರುಘಟ್ಟ ಅರಣ್ಯಪ್ರದೇಶ‌ದ ಕಡೆ ಹೋಗಬಹುದೆಂದು ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

Advertisement

ಕಾಡಿಗಟ್ಟಲು ಕಾರ್ಯಾಚರಣೆ: ತುಮಕೂರು ಆನೆಗಳ ಕಾರಿಡಾರ್‌ ಆಗಿದ್ದು, ಆಗಿಂದಾಗ್ಗೆ ಜಿಲ್ಲೆಯಲ್ಲಿ ಆನೆಗಳು ಸಂಚರಿಸುತ್ತವೆ. ಬನ್ನೇರುಘಟ್ಟ, ಸಾವನದುರ್ಗ ಮಾರ್ಗದಿಂದ ಪ್ರತಿವರ್ಷ ಆನೆಗಳ ಹಿಂಡೇ ಬರುತ್ತಿದ್ದವು. ಕಳೆದ 2 ವರ್ಷದಿಂದ ಉಪಟಳವಿರಲಿಲ್ಲ. ಈಗ ಬಂದಿರುವ ಒಂಟಿ ಸಲಗ ಉತ್ತರ ಕರ್ನಾಟಕ ಭಾಗದಿಂದ ಚಿತ್ರದುರ್ಗದ ಮಾರ್ಗವಾಗಿ ಜಿಲ್ಲೆ ಪ್ರವೇಶಿಸಿದೆ.

ಗುಬ್ಬಿ ತಾಲೂಕಿನ ಅರಕಲದೇವಿಗುಡ್ಡದಲ್ಲಿ ಬೀಡು ಬಿಟ್ಟಿದ್ದು, ಮುಂದೆ ತುಮಕೂರು, ಕುಣಿಗಲ್‌, ಸಾವನದುರ್ಗ, ಬನ್ನೇರುಘಟ್ಟ, ಚಿಕ್ಕಮಗಳೂರು, ಮೂಡಿಗೆರೆ ಹೋಗಬಹುದು. ಒಂಟಿಸಲಗವಾದ್ದರಿಂದ ಗಾಬರಿಪಡಿಸಬಾರದು. ಅದನ್ನು ಅರಣ್ಯದ ಕಡೆ ಅಟ್ಟಲು ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಚುಕ್ಕನಾಯಕನಹಳ್ಳಿ, ತಿಪಟೂರು ಹಾಗೂ ತಾಲೂಕಿನ ಗಡಿ ಪ್ರದೇಶದಲ್ಲಿ ಒಂಟಿ ಕಾಡಾನೆ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದೆ. ಗುಬ್ಬಿಯಿಂದ ತುಮಕೂರು ನಂತರ ಕುಣಿಗಲ್‌ ತಾಲೂಕಿಗೆ ನುಗ್ಗುವ ಸಾಧ್ಯತೆ ಇರುವುದರಿಂದ ಮುಸ್ಸಂಜೆ ಮತ್ತು ಬೆಳಗ್ಗೆ ಸಮಯದಲ್ಲಿ ಹೊಲ, ಗದ್ದೆ, ತೋಟಗಳಿಗೆ ರೈತರು ಹೋಗಬಾರದು. ಜಾಗೃತೆಯಿಂದ ಇರಬೇಕು. ಇಲಾಖೆಯಿಂದ ಕಾಡಾನೆ ಹಿಮ್ಮೆಟ್ಟಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.
-ಎಚ್‌.ಸಿ.ಗಿರೀಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ

* ಚಿ.ನಿ ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next