ಸಕಲೇಶಪುರ: ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬಜೆಟ್‌ನಲ್ಲಿ ಮಲೆನಾಡಿಗೆ ಯಾವುದೇ ರೀತಿಯ ಯೋಜನೆಗಳು ದಕ್ಕದಿರುವುದರಿಂದ ಮಲೆನಾಡಿಗರಲ್ಲಿ ಬಜೆಟ್ ಮತ್ತೂಮ್ಮೆ ನಿರಾಶೆ ತಂದಿದೆ.
ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಆನೆ ಕಾರಿಡಾರ್ ಯೋಜನೆಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರ ಆನೆ ಕಾರಿಡಾರ್‌ಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ.
ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ ಹಾಗೂ ಮೆಣಸು ಬೆಳೆಗಾರರು ಪ್ರಕೃತಿ ವಿಕೋಪಗಳಿಂದ ನಷ್ಟ ಅನುಭವಿಸುತ್ತಿದ್ದಾರೆ. ವಿಶೇಷ ಪ್ಯಾಕೇಜ್ ನೀಡದಿರುವುದರಿಂದ ಬೆಳೆಗಾರರಲ್ಲಿ ಬೇಸರ ತಂದಿದೆ. ರೈಲಿನ ವಿಷಯಕ್ಕೆ ಬಂದರೆ ಸಕಲೇಶಪುರ-ಬೇಲೂರು ನಡುವೆ ರೈಲು ಮಾರ್ಗದ ಸರ್ವೆ ನಡೆದು ಹಲವು ವರ್ಷಗಳಾಗಿದ್ದು,
ಯೋಜನೆಯ ಕುರಿತು ಈ ಹಿಂದೆಯೇ ಘೋಷಣೆಯಾಗಿದ್ದರೂ ಯಾವುದೇ ಅನುದಾನ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ಬೆಂಗಳೂರು ಮಂಗಳೂರು ನಡುವೆ ಎಕ್ಸ್‌ಪ್ರೆಕ್ಸ್ ಹೈವೇ ನಿರ್ಮಾಣವಾಗುತ್ತದೆಂದು ಕಳೆದ ಬಜೆಟ್‌ನಲ್ಲಿ ಹೇಳಲಾಗಿತ್ತು. ಆದರೆ ಇಲ್ಲಿ ಕೇವಲ ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿದ್ದು, ಎಕ್ಸ್‌ಪ್ರೆಕ್ಸ್ ಹೈವೇ ಬಗ್ಗೆ ಈ ಬಜೆಟ್‌ನಲ್ಲಿ ಯಾವುದೆ ಪ್ರಸ್ತಾಪವಿಲ್ಲ.
ಕೇಂದ್ರ ಸರ್ಕಾರದ ಬಜೆಟ್‌ನಿಂದ ಮಲೆನಾಡಿಗೆ ಯಾವುದೇ ಉಪಯೋಗವಾಗಿಲ್ಲ. ಕಾಫಿ, ಮೆಣಸು, ಏಲಕ್ಕಿ ಬೆಳೆಗಾರರಿಗೆ ಯಾವುದೆ ಪ್ಯಾಕೇಜ್ ಇಲ್ಲ. ಆನೆ ಕಾರಿಡಾರ್ ಯೋಜನೆಯ ಪ್ರಸ್ತಾಪವೂ ಇಲ್ಲ. ಒಟ್ಟಾರೆಯಾಗಿ ನಮ್ಮ ಪಾಲಿಗೆ ನಿರಾಶಾದಾಯಕ ಬಜೆಟ್ ಆಗಿದೆ.
-ಎಚ್.ಕೆ. ಕುಮಾರಸ್ವಾಮಿ, ಶಾಸಕ
* ಸುಧೀರ್ ಎಸ್.ಎಲ್