Advertisement

ರಸ್ತೆಗೆ ಬಂದ ಕಾಡಾನೆಗಳು; ಭಯಭೀತ ಗ್ರಾಮಸ್ಥರು

09:51 AM Jul 05, 2019 | keerthan |

ಮಡಿಕೇರಿ: ಆನೆ- ಮಾನವ ಸಂಘರ್ಷ ಪೀಡಿತ ಗ್ರಾಮಗಳಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿರುವ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮದಲ್ಲಿ ಮೂರು ಕಾಡಾನೆಗಳು ಗುರುವಾರ ರಸ್ತೆಗೆ ಬಂದು ಅತ್ತಿಂದಿತ್ತ ಓಡಾಡುತ್ತ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದವು.

Advertisement

ಗುರುವಾರದಂದು ಬೆಳಗ್ಗೆ 7.30ರ ಸುಮಾರಿಗೆ ಕೊಡಗರಹಳ್ಳಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಕಾಡಾನೆಗಳು ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಸ್ವತ್ಛಂದವಾಗಿ ವಿಹರಿಸುತ್ತಿರುವುದನ್ನು ತೋಟದ ಮಾಲಕರು ಮತ್ತು ಕಾರ್ಮಿಕರು ಗಮನಿಸಿದ್ದರು. ನಾಯಿಗಳ ಬೊಗಳುವಿಕೆ, ಜನರ ಕೂಗಾಟ ಮತ್ತು ಪಟಾಕಿ ಸದ್ದಿನಿಂದ ಬೆದರಿದ ಆನೆಗಳು ಏಕಾಏಕಿ ರಸ್ತೆಗೆ ಬಂದುಬಿಟ್ಟ ಪರಿಣಾಮ ಜನರು ಹೆದರಿ ಚೆಲ್ಲಾಪಿಲ್ಲಿಯಾದರು.

ಗ್ರಾಮಸ್ಥರು ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡಿದರೂ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಓಡಿದವೇ ಹೊರತು ಅರಣ್ಯ ಸೇರುವ ಮನಸ್ಸು ಮಾಡಲಿಲ್ಲ. ಸಾಮಾನ್ಯವಾಗಿ ಕಾಡಾನೆಗಳು ಈ ವ್ಯಾಪ್ತಿಯಲ್ಲಿ 7ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ ನಾಕೂರು ಶಿರಂಗಾಲ, ಅಂದಗೋವೆ ವ್ಯಾಪ್ತಿಯಲ್ಲಿ ತಡ ರಾತ್ರಿಯಿಂದ ಬೆಳಗ್ಗಿನ ಜಾವ ಅಡ್ಡಾಡಿ ತಮ್ಮ ತಾಣಗಳಿಗೆ ಹೋಗುತ್ತಿದ್ದವು. ಆದರೆ ಗುರುವಾರ ಹಗಲಿನ ಹೊತ್ತು ತೋಟಗಳಲ್ಲೇ ಉಳಿದುಕೊಂಡಿವೆ. ಶಾಲಾ ಮಕ್ಕಳು, ಇಳಿ ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಮನೆ ಸೇರಬೇಕಾದವರು ಏನು ಮಾಡು ವುದು ಎಂಬ ಚಿಂತೆಗೀಡಾಗಿದ್ದಾರೆ.

ಕುಶಾಲನಗರ ಉಪ ವಲಯ ಅರಣ್ಯಾಧಿಕಾರಿ ರಂಜನ್‌ ನೇತೃತ್ವದಲ್ಲಿ ಅರಣ್ಯ ಇಲಾಖಾ ಸಿಬಂದಿ ಆನೆಗಳನ್ನು ಚಿಕ್ಲಿಹೊಳೆ ಹಿನ್ನೀರಿನ ಪ್ರದೇಶಕ್ಕೆ ಅಟ್ಟಿದ್ದಾರೆ. ನಾಗರಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next