Advertisement

ಆನೆ ಬಂತು ಆನೆ

06:00 AM Oct 14, 2018 | |

ಕಾಡು ಮತ್ತು ನಾಡು ಪರಸ್ಪರ ವೈರುಧ್ಯ ದಿಕ್ಕುಗಳಲ್ಲಿದ್ದರೂ ಕಾಡು ಕಾಡಾಗಿಯೇ, ನಾಡು ನಾಡಾಗಿಯೇ ಅದರದರ ಪಾಡಿಗೆ ಮೌನವಾಗಿ, ನೆಮ್ಮದಿಯಾಗಿಯೇ ಇತ್ತು. ಯಾವಾಗ ಮನುಷ್ಯ ಕಾಡು ಮತ್ತು ಗಿರಿಝರಿಗಳನ್ನು ವ್ಯಾವಹಾರಿಕ ದೃಷ್ಟಿಕೋನದ ಚೌಕಟ್ಟಿನಲ್ಲಿ ಕಾಣಲಾರಂಭಿಸಿದನೋ ಆವತ್ತಿನಿಂದ ಗಿರಿ ಝರಿಗಳನ್ನು ಹರಿದು, ತುರಿದು ಕಾಡನ್ನು ಕಾಡಲಾರಂಭಿಸಿದನು. ಕಾಡಿನ ನೆಮ್ಮದಿಗೆ ಧಕ್ಕೆಯಾದಾಗ ಕಾಡು ಪ್ರಾಣಿಗಳು ತಮ್ಮ ಬದುಕಿನ ಆಶ್ರಯಗಳನ್ನು ಕಳೆದುಕೊಂಡು ಕಾಡಿನಿಂದ ನಾಡಿಗೆ ಬರಲಾರಂಭಿಸಿ ವನ್ಯಜೀವಿಗಳು ಮತ್ತು ಮನುಷ್ಯರ ನಡುವೆ ಘರ್ಷಣೆ, ದಾಳಿಗಳು ಆರಂಭವಾದವು. ಸರಕಾರದ ಅಭಿವೃದ್ಧಿ ಎಂಬ ನೆಪದ ಯೋಜನೆಗಳು ಕಾಡಿನೊಳಗೆ ಹೊಕ್ಕು ಕಾಡಿನ ಉದ್ದಗಲವನ್ನು ಅಳೆಯಲಾರಂಬಿಸಿದಾಗ ಕಾಡಿನ ಜೀವಿಗಳು ನೆಲೆ ಕಳೆದುಕೊಂಡು ಗೊಂದಲಕ್ಕೊಳಗಾದವು. ಪತ್ರಿಕೆಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡು ಬರುವ ಸುದ್ದಿಗಳೆಂದರೆ ಆನೆ ದಾಳಿ, ಓರ್ವನ ಸಾವು ಎಂಬುದು. ಇಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರವೇನೆಂದರೆ ಈ ಆನೆ ದಾಳಿ ಯಾವುದೇ ಕಾಡಿನ ಒಳಗೆ ಸಂಭವಿಸಿರುವಂತದ್ದಲ್ಲ. ಬಹುತೇಕ ಇಂಥ ದಾಳಿ ಸಂದರ್ಭಗಳಲ್ಲಿ ಆನೆಯ ಪರ ವಹಿಸದೇ ದಾಳಿಗೊಳಗಾದವರ ಬಗ್ಗೆ ಕರುಣೆ ತೋರಿಸುವ ಉದ್ದೇಶವೇನೆಂದರೆ ಆನೆಯು ಗದ್ದೆ, ತೋಟ ಕೃಷಿ ಭೂಮಿಗೆ ಬಂದು ದಾಳಿ ಮಾಡಿತು ಎನ್ನುವ ವಾದ ಗೆಲುವಿನ ಸ್ಥಾನ ಪಡೆದುಕೊಳ್ಳುತ್ತದೆ. ಆದರೆ, ನಿಜವಾಗಿ ಈ ಬಗ್ಗೆ ಗಾಢವಾಗಿ ವಿಶ್ಲೇಷಿಸಿದರೆ ಇದು ಖಂಡಿತ ಆನೆ ದಾಳಿಯಲ್ಲ! ಇದು ಕಾಡಿನ ಮೇಲೆ ಮನುಷ್ಯನ ದಾಳಿ. ಯಾವಾಗ ಕಾಡಿನ ಪ್ರದೇಶವನ್ನು ಮನುಷ್ಯ ಅತಿಕ್ರಮಣ ಮಾಡಿ, ಕೃಷಿ ಮಾಡಲಾರಂಭಿಸಿದನೋ ಆವಾಗಿನಿಂದ ಈ ಆನೆ ದಾಳಿ ಎಂಬ ಸುದ್ದಿಗಳು ಹುಟ್ಟಲಾರಂಭಿಸಿವೆ. ಆನೆಗಳು ಸಂಚರಿಸುವ ಆವಾಸ ಸ್ಥಾನಗಳೆಲ್ಲ ಇಂದು ಕೃಷಿ, ತೋಟ, ಗಣಿಗಾರಿಕೆ, ರೆಸಾರ್ಟು, ಎಸ್ಟೇಟ್‌, ಜಲವಿದ್ಯುತ್‌ ಯೋಜನೆಗಳಾದಾಗ ಆನೆಗಳು ಕಾಡಿನಿಂದ ನಾಡಿಗೆ ಬರದೇ ಇನ್ನೆಲ್ಲಿ ಹೋಗಬೇಕು? ಮನುಷ್ಯ ಎಷ್ಟು ಆನೆ‌ಗಳ ಆಹಾರ ಮತ್ತು ಆವಾಸತಾಣಗಳನ್ನು ನಾಶಪಡಿಸಿದ್ದಾನೆ? ಎಂಬ ಅಂಕಿಅಂಶಗಳನ್ನು ಲೆಕ್ಕಹಾಕಿದರೆ ಕಾಡೊಳಗೆ ಆನೆಗಳು ತಮ್ಮ ಬದುಕಿನ ನೆಮ್ಮದಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದಂತೂ ಸತ್ಯ. ಆನೆ ಮನುಷ್ಯನ ಮೇಲೆ ದಾಳಿಯಾಗುವುದು ಸುದ್ದಿಯಾಗುತ್ತದೆ. ಆದರೆ, ಇಷ್ಟು ವರ್ಷ ಕಾಡಿನ ಮೇಲೆ ಮನುಷ್ಯನ ದಾಳಿಯಾಗುತ್ತಿರುವುದು ಎಲ್ಲಿಯೂ ಸುದ್ದಿಯಾಗುವುದಿಲ್ಲ.

Advertisement

ಆನೆ ಕಾರಿಡಾರ್‌ ಅರಣ್ಯ ವಲಯ
ಪಶ್ಚಿಮಘಟ್ಟದ ಚಾರ್ಮಾಡಿ ಘಾಟಿಯ ಅಡವಿಯಲ್ಲಿ ಅತೀ ಹೆಚ್ಚು ಆನೆಗಳಿರುವ ಬಾರಿಮಲೆ, ಅಂಬಟ್ಟಿಮಲೆ, ಬಾಂಜಾರುಮಲೆ, ದೊಡ್ಡೇರಿಬೆಟ್ಟ, ಹೊಸ್ಮನೆಗುಡ್ಡ, ಈ ಪ್ರದೇಶಗಳಲ್ಲಿ ಆನೆ ಕಾರಿಡಾರ್‌ ಅರಣ್ಯ ವಲಯವಿದ್ದು ಈಗ ಹದಿನೈದು ವರ್ಷಗಳಿಂದ ಎಸ್ಟೇಟ್‌ಗಳು ಸಾವಿರಾರು ಎಕರೆ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದು ಆನೆಗಳು ಸಂಚರಿಸಬೇಕಾದ ದಾರಿಯನ್ನು ತುಂಡರಿಸಲಾಗಿದೆ. ನಾನು ಕಳೆದ 24 ವರ್ಷಗಳಿಂದ ಈ ಆನೆ ಆವಾಸ ಪಥಗಳ‌ಲ್ಲಿ ಚಾರಣಗಳನ್ನು ಮಾಡಿದ್ದು ನಾನು ತಿಳಿದುಕೊಂಡ ಸತ್ಯಾಂಶವೇನೆಂದರೆ ಆನೆಗಳು ಈ ಅರಣ್ಯವಲಯದಲ್ಲಿ ಗುಂಪು ಗುಂಪಾಗಿ ಸುತ್ತಾಡುತ್ತಿದ್ದು ಕಾಡಿನೊಳಗೆ ಪೊರಕೆ ಮತ್ತು ಚಪ್ಪಲಿಯನ್ನು ಕಂಡರೆ ಆನೆ ಘೀಳಿಟ್ಟು ಹತ್ತಿರದ ಮರಕ್ಕೆ ಹೊಡೆದು ಮರವನ್ನು ಮುರಿದು ತನ್ನ ಸಿಟ್ಟನ್ನು ವ್ಯಕ್ತಪಡಿಸುತ್ತದೆ. ಹಾಗಾದರೆ ಮನುಷ್ಯನೇನಾದರೂ ಎದುರು ಸಿಕ್ಕಿದಲ್ಲಿ ಆನೆ ಯಾವ ರೀತಿ ವರ್ತಿಸಬಹುದು ಗಮನಿಸಿ. ಅಂದರೆ ಕಾಡುತ್ಪತ್ತಿಗೆ ತರಗೆಲೆಗೆ ಅಥವಾ ಇನ್ನಾವುದೋ ವಿಚಾರದಲ್ಲಿ ಕಾಡಿಗೆ ಹೋದವರು ಪೊರಕೆ ಅಥವಾ ಚಪ್ಪಲಿಯನ್ನು ಕಾಡಲ್ಲೇ ಬಿಟ್ಟು ಬರುತ್ತಾರೆ. ಹೀಗೆ ಬಿಟ್ಟು ಬಂದ ಪೊರಕೆ, ಚಪ್ಪಲಿಯನ್ನು ಕಂಡು ಆನೆ ಯಾಕೆ ಉದ್ರೇಕಗೊಂಡು ಸಿಟ್ಟುಗೊಳ್ಳುತ್ತದೆ ಎಂದರೆ ಅಲ್ಲೇ ಎಲ್ಲೋ ಮನುಷ್ಯ ಇದ್ದಾನೆ ಎಂಬ ಆಕ್ರೋಶ. ಇದಕ್ಕೆ ಕಾರಣವೂ ಇದೆ. ಮೂಡಿಗೆ‌ರೆಯಲ್ಲಿ ಕಾಡನ್ನು ಕಬಳಿಸಿದ ಎಸ್ಟೇಟಿನವರು ಆನೆಗಳನ್ನು ಪಟಾಕಿ ಹೊಡೆದು, ಕೋವಿ ಸಿಡಿಸಿ ಹೆದರಿಸಿ ಓಡಿಸುತ್ತಾರೆ. ಆಗ ಹೆದರಿದ ಆನೆಗಳು ಕೆಳಗಡೆ ಬಾರಿಮಲೆ, ದೇವಗಿರಿ ಕಣಿವೆ, ದೇವರಮಲೆ ಕಡೆಗೆ‌ ಭಯದಿಂದ ಬರುತ್ತವೆ. ಆಗ ಆ ವಲಯದಲ್ಲಿರುವ ಎಸ್ಟೇಟ್‌, ರೆಸಾರ್ಟ್‌ನವರು ತಮ್ಮ ವಾಸ ಪ್ರದೇಶಕ್ಕೆ ಬರಬಾರದೆಂದು ಹೆದರಿಸಿ ಅಟ್ಟುತ್ತಾರೆ. ಅಲ್ಲಿಯೂ ಹೆದರಿದ ಆನೆಗಳು ಕಾಡಿನಿಂದ ಎಲ್ಲೋ ಊರಿನ ಕಡೆಗೆ ಬರುತ್ತವೆ. ಆಗ ಊರಿನವರು ತಮ್ಮ ಗದ್ದೆ, ತೋಟಗಳಿಗೆ ಆನೆಗಳು ಬರಬಾರದೆಂದು ನ್ಪೋಟಕಗಳನ್ನು ಸಿಡಿಸಿ ಹೆದರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಆನೆಗಳು ಸಿಟ್ಟು, ಆಕ್ರೋಶ, ಹತಾಶೆಗಳಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಸಹಾಯಕತೆಯಿಂದ ಓಡಾಡುತ್ತಿರುತ್ತವೆ. ಆಗ ಎದುರು ಸಿಕ್ಕವರ ಮೇಲೆ ದಾಳಿ ಮಾಡಿ ಕೊಂದು ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತವೆ. ಇದು ಒಂದು ಚಾರ್ಮಾಡಿ ಅಡವಿಯ ಉದಾಹರಣೆ ಅಷ್ಟೇ. ಇಂದು ರಾಜ್ಯದ ಪಶ್ಚಿಮಘಟ್ಟದ ಬಹುತೇಕ ಅಡವಿ ಪ್ರದೇಶಗಳ ಕಥೆ-ವ್ಯಥೆಗಳೂ ಇದೇ ರೀತಿ ಆಗಿರುತ್ತದೆ. ಖಾನಾಪುರ, ಅಣಶಿ, ದಾಂಡೇಲಿ, ಶರಾವತಿ ಕಣಿವೆ, ಬ್ರಹ್ಮಗಿರಿ, ತಡಿಯಂಡಮೋಳು, ಮುತ್ತೋಡಿ, ಭಗವತಿ, ಬಂಗ್ರಬಲಿಕೆ, ಬೈನೆಕೊಂಡ, ಅತ್ತಿಕುಡಿಗೆ, ಕಾಗಿನಿರೆ, ಬೆಟ್ಟಕುಂಬ್ರಿ, ಅರಮನೆಗುಡ್ಡ, ಮುಗಿಲಗಿರಿ, ಯಸಳೂರು, ಹಿರಿಮರಿಗುಪ್ಪೆ, ಹೀಗೆ ಹಲವಾರು ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಅತಿಕ್ರಮಣ, ಕಾಡ್ಗಿಚ್ಚು, ಅಣೆಕಟ್ಟುಗಳ ಹಿನ್ನೀರು, ರೆಸಾರ್ಟ್‌, ಎಸ್ಟೇಟ್‌ಗಳಿಂದಾಗಿ ಆನೆಗಳು ತಮ್ಮ ವಲಯ ವ್ಯಾಪ್ತಿಯಿಂದ ಎಲ್ಲೆಲ್ಲೋ ಸಾಗುತ್ತಾ ಮನುಷ್ಯರ ಕಿರುಕುಳಗಳಿಂದಾಗಿ ನೆಮ್ಮದಿಯನ್ನು ಕಳೆದುಕೊಳ್ಳುತ್ತ  ಅಸಹನೆಯಿಂದ ಬದುಕುತ್ತಿವೆ. ಆನೆಗಳನ್ನು ಅಟ್ಟಿಸುವಾಗ ಆನೆಯ ಕಾಲಿಗೆ ಗಾಯವಾದರೆ ಹುಣ್ಣು ಆಗಿ ನೊಣಗಳು ಕುಳಿತು ಹುಣ್ಣು ಜೋರಾಗಿ ಗ್ರ್ಯಾಂಗ್ರಿನ್‌ ಆಗಿರುವ ಸಂದರ್ಭಗಳಲ್ಲಿ ನಡೆಯಲೂ ಆಗದೆ, ಆಹಾರವೂ ಸಿಗದೆ ನೊಣಗಳಿಂದ ತಪ್ಪಿಸಿಕೊಳ್ಳಲು ಹಾಗೂ ಕಾಲಿನ ಗಾಯಕ್ಕೆ ಮೀನುಗಳಿಂದ (ಅಕ್ವಾಟಿಕ್‌-ವಿಟಮಿನ್‌ ಕ್ಯಾಲ್ಸಿಯಂ) ರಕ್ಷಣೆ ಪಡೆದುಕೊಳ್ಳಲು ನೀರಿನ ಝರಿಗಳತ್ತ ಹೋದಾಗ ಅಲ್ಲಿ ನೀರಿಲ್ಲದಾಗ ಸಿಟ್ಟಿನಲ್ಲಿದ್ದು ಅಂತಹ ಸಂದರ್ಭಗಳಲ್ಲೂ  ಆನೆಗಳು ದಾಳಿ ಮಾಡುವ ಸಂಭವವಿರುತ್ತದೆ. ಐದು ದಶಕಗಳಿಂದ ಪಶ್ಚಿಮ ಘಟ್ಟದ ಕಾಡು ಸುತ್ತುತ್ತಿದ್ದ ಈವರೆಗೆ ಆನೆಗಳು ಮುಖಾಮುಖೀಯಾದರೂ ದಾಳಿಗೆ ಒಳಗಾಗದ -ಮೆಣಸಿನಹಾಡ್ಯದ ಬುಡಕಟ್ಟು ಜನಾಂಗದ 85 ವರ್ಷದ ಚಿನ್ನಮ್ಮ ಹೇಳುವ ಪ್ರಕಾರ ಆನೆಗಳು ತುಂಬಾ ತಾಳ್ಮೆ ಶಕ್ತಿಯನ್ನು ಪಡೆದುಕೊಂಡಿದ್ದು ತನಗೆ ಕಿರುಕುಳವಾದರೆ ಅಥವಾ ಮರಿಯೊಂದಿಗೆ ಸಂಚರಿಸುವಾಗ ಮನುಷ್ಯನೇನಾದರೂ ಎದುರಾದಲ್ಲಿ ತನ್ನ ಮರಿಯ ರಕ್ಷಣೆಗೋಸ್ಕರ ಮಾತ್ರ ದಾಳಿ ಮಾಡುತ್ತವೆ ವಿನಾ ಸುಮ್‌ ಸುಮ್ನೆ ಎದುರು ಬಂದವರ ಮೇಲೆ ಯಾವತ್ತಿಗೂ ದಾಳಿ ಮಾಡುವುದಿಲ್ಲವೆಂದು ತಮ್ಮ ಪ್ರತ್ಯಕ್ಷ ಅನುಭವವನ್ನು ಹೇಳುತ್ತಾರೆ.

ಸೂಕ್ಷ್ಮ ಸಂವೇದನಶಕ್ತಿಯ ಪ್ರಾಣಿ
ಆನೆೆಗಳು ಬಹಳ ಸೂಕ್ಷ್ಮ ಸಂವೇದನಾಶಾಲಿ ಗುಣಗ್ರಹಣ ಶಕ್ತಿಯುಳ್ಳದಾಗಿದ್ದು ತಾನು ನಿಂತಿರುವ ನೆಲದ ಸುತ್ತಲಿನ ಒಂದು ಕಿ. ಮೀ. ನಷ್ಟು ವ್ಯಾಪ್ತಿಯನ್ನು ತಿಳಿದುಕೊಳ್ಳುತ್ತದೆ. ಹುಲ್ಲು ತಿನ್ನುವ ಆನೆ ಹಠಾತ್‌ ಆಗಿ ಹುಲ್ಲು ತಿನ್ನುವುದನ್ನು ನಿಲ್ಲಿಸಿ ಸೊಂಡಿಲಿನಿಂದ ನೆಲವನ್ನು ಸ್ಪರ್ಶಿಸುತ್ತಿದೆ ಎಂದರೆ ಆನೆಗೆ ತನ್ನ ಸುತ್ತಲಿನಲ್ಲಿ ಏನಾಗುತ್ತಿದೆ, ಎಂಬುದು ಅರಿವಿಗೆ ಬರುತ್ತದೆ. ಆನೆಗಳ ಸಂವೇದನಾಶೀಲ ಗುಣಗಳನ್ನು ಅರ್ಥಮಾಡಿಕೊಳ್ಳಲಾಗದ ಮಾನವ ಇನ್ನು ಎಷ್ಟು ವರ್ಷಗಳಲ್ಲಿ ಎಷ್ಟು ಆನೆಗಳನ್ನು ನಿರ್ನಾಮ ಮಾಡಿಯಾನು? ಅರಣ್ಯ ಇಲಾಖೆ ಆನೆದಾಳಿಗೆ ಧನ ಪರಿಹಾರ ಕೊಟ್ಟು ಸುಮ್ಮನಿರುವುದಲ್ಲ. ಆನೆಗಳ ಆವಾಸ ಸ್ಥಳಗಳಲ್ಲಿ ಯಾವುದೇ ಮಾನವ ಚಟುವಟಿಕೆಗಳಿಗೆ ಅವಕಾಶ ನೀಡದೆ ಆನೆಗಳು ನೆಮ್ಮದಿಯಾಗಿ ಕಾಡಿನಲ್ಲೇ ಸ‌ಂಚರಿಸುವಂತೆ ವ್ಯವಸ್ಥೆ ಮಾಡಲಿ. ಆನೆಗಳು ಕಾಡಿನೊಳಗೆ ಅಥವಾ ನಾಡಿಗೆ ಬಂದಾಗಲೂ ನೇರವಾಗಿ ಮನುಷ್ಯನ ಮೇಲೆ ದಾಳಿ ಮಾಡುವುದಿಲ್ಲ, ಭಯಗೊಳಗಾದ ಆನೆ ಮೊದಲಿಗೆ ತನ್ನ ಕಿವಿಯನ್ನು ನೇರವಾಗಿ ಅಗಲಗೊಳಿಸುತ್ತವೆ. ಕ್ರಮೇಣ, ಸೊಂಡಿಲು ಮತ್ತು ಬಾಲವನ್ನು ಎತ್ತುತ್ತದೆ. ಇಂತಹ ಸಂದರ್ಭದಲ್ಲಿ ಆನೆ ಸಿಟ್ಟು ಮತ್ತು ರೋಷದಲ್ಲಿದೆ ಎಂದು ಅರ್ಥ. ಆನೆ ಖುಷಿಯಲ್ಲಿದ್ದಾಗ, ಅದರ ಇಷ್ಟದ ಆಹಾರ ಬಿದಿರನ್ನು ತಿನ್ನುವಾಗ ಕಿವಿಯನ್ನು, ಬಾಲವನ್ನು ಅಲ್ಲಾಡಿಸುತ್ತಲೇ ಇರುತ್ತದೆ. ಸಿಟ್ಟುಗೊಂಡ ಆನೆಯ ದೃಷ್ಟಿಯಿಂದ ನಾವು ನಿಧಾನವಾಗಿ ಏನೂ ಶಬ್ದಮಾಡದೇ ಹಿಂದಕ್ಕೆ ಹೋಗಬೇಕೇ ಹೊರತು ಮುಂದೆ ಹೋಗಬಾರದು. ಮುಂದಕ್ಕೆ ಹೋದಾಗ ಆನೆಯ ಸಿಟ್ಟು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. 

ಮನುಷ್ಯ ತನ್ನ ಬಳಕೆ‌‌ಗಾಗಿ ಕಾಡಿನ ಬಿದಿರುಗಳನ್ನು ಕಡಿದು ಆನೆಗಳಿಗೆ ಅತೀ ಪ್ರಿಯವಾಗಿರುವ ಬಿದಿರನ್ನು ನಾಶ ಮಾಡಿರುವುದೂ ಆನೆಗಳು ಊರಿನ ಕಡೆ ದಾಳಿ ಇಡುವುದಕ್ಕೆ ಇನ್ನೊಂದು ಕಾರಣ. ಗದ್ದೆ, ತೋಟಗಳ ಅಂಚುಗಳಲ್ಲಿ ಬಾಳೆ, ಹಲಸು ಇರುವುದರಿಂದ ಅವುಗಳ ಆಸೆಗೆ ಬಂದು ತೋಟದೊಳಗೆ ಸಂಚರಿಸುತ್ತವೆ. ಕಡತಕಲ್‌ ಘಾಟಿಯ ಕಾಡೊಳಗಿನ ಪರ್ಲಮಕ್ಕಿ ಗ್ರಾಮದ ಶೇಷಪ್ಪಗೌಡರಲ್ಲಿ ಆನೆ ದಾಳಿಯ ಬಗ್ಗೆ ಕೇಳಿದಾಗ ಆನೆ ಮತ್ತು ಇನ್ನಿತರ ವನ್ಯಜೀವಿಗಳು ನಮ್ಮ ಗದ್ದೆ, ತೋಟಕ್ಕೆ ಬಂದರೆ ನಾವು ಸಿಟ್ಟುಗೊಳ್ಳದೇ ಸುಮ್ಮನಿರುತ್ತೇವೆ. ನಮಗೆ ಬೇಕಾದಷ್ಟು ನಾವು ತಿಂದು, ತೃಪ್ತಿಯಲ್ಲಿರುವಾಗ ಕಾಡುಪ್ರಾಣಿಗಳಿಗೆ ಬೇಕಾದಷ್ಟು ನಮ್ಮ ಗದ್ದೆ, ತೋಟದಿಂದ ತಿನ್ನುತ್ತವೆ. ಅದು ಅವುಗಳ ತಪ್ಪಲ್ಲ. ನಾವು ಅವುಗಳು ಇರಬೇಕಾದ ಜಾಗದಲ್ಲಿರುವ ಕಾರಣ ನಾವು ಯಾವತ್ತಿಗೂ ಅವುಗಳನ್ನು ಓಡಿಸುವುದಿಲ್ಲ. ಎಂಬ ಅವರ ಮಾತು ಅರ್ಥಪೂರ್ಣವಾಗಿತ್ತು. ಇದೇ ರೀತಿ ಎಲ್ಲಾ ಅರಣ್ಯ ಅತಿಕ್ರಮಣಕಾರರು ಯೋಚಿಸಿದರೆ ಆನೆ ಮತ್ತು ಮನುಷ್ಯ ಸಂಘರ್ಷ ಯಾವತ್ತೋ ಅಂತ್ಯವಾಗುತ್ತಿತ್ತು. ಆನೆಗಳು ಯಾವತ್ತಿಗೂ ಕ್ರೂರಿಗಳಲ್ಲ, ದೇವಸ್ಥಾನ-ಮೃಗಾಲಯಗಳಲ್ಲಿ ಪಳಗಿಸಿದ ಆನೆಗಳನ್ನು ಕಂಡಾಗ ತಿಳಿಯುತ್ತದೆ ಆನೆಗಳು ತುಂಬಾ ಸೌಮ್ಯ ಗುಣವುಳ್ಳದ್ದಾಗಿದ್ದು ಮನುಷ್ಯನ ಪ್ರೀತಿಯ ಹಿಡಿತಕ್ಕೆ ಹೇಗೆ ಬೇಕೋ ಹಾಗೆ ಒಗ್ಗಿಕೊಳ್ಳುತ್ತವೆ. ಯಾವಾಗ ಮನುಷ್ಯ ತನ್ನ ಅತಿಯಾದ ಅಭಿಲಾಷೆಗಳಿಗೆ, ಅನುಕೂಲಗಳಿಗೆ ಆನೆಗಳು ಸಂಚರಿಸುವ ಅಡವಿ ತಾಣವನ್ನೇ ನುಗ್ಗಿ ತನ್ನ ಸಾಮ್ರಾಜ್ಯ ಕಟ್ಟಿಕೊಳ್ಳುವ ಹುಂಬತನವನ್ನು ಪ್ರದರ್ಶಿಸಿದನೋ ಅಂದಿನಿಂದ ಆನೆಗಳು ಕೂಡಾ ಅಸಹಾಯಕ ಪರಿಸ್ಥಿತಿಯಿಂದ ಮನುಷ್ಯನ ಮೇಲೆ ಅದೂ ತನ್ನ ಮರಿಗಳ ರಕ್ಷಣೆಗಾಗಿ ಪ್ರತಿ ದಾಳಿ ಮಾಡಿರಬಹುದೇ ಹೊರತು ಏಕಾಏಕೀ ಮನುಷ್ಯರನ್ನು ಕೊಂದಂತಹ ಉದಾಹರಣೆಗಳಿಲ್ಲ. ಮಾನವನ ದುಷ್ಟ ಮನಸು ಸೌಮ್ಯ ಬುದ್ಧಿಯ ಆನೆಯನ್ನು ಕೆದಕಿ, ಹಿಂಸಿಸಿ, ಪ್ರಚೋದಿಸಿ ದಾಳಿಯ ಕಥೆಯನ್ನು ಸೃಷ್ಟಿಸುತ್ತಾನೆಯೇ ಹೊರತು ಆನೆಯ ರೋದನ, ವೇದನೆಗೆ ಕಿವಿಯಾಗದೇ ಇರುವುದು ದುರಂತವೆನ್ನಬಹುದು.

ದಿನೇಶ ಹೊಳ್ಳ

Advertisement
Advertisement

Udayavani is now on Telegram. Click here to join our channel and stay updated with the latest news.

Next