Advertisement

ಕಾಡಾನೆಗಳ ದಾಳಿ ಇಬ್ಬರ ಬಲಿ

06:00 AM Dec 09, 2017 | Team Udayavani |

ದಾವಣಗೆರೆ/ಚನ್ನಗಿರಿ: ನೆರೆಯ ಆಂಧ್ರಪ್ರದೇಶದಿಂದ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿ ದಾಂಧಲೆ ನಡೆಸಿದ್ದ ಎರಡು ಕಾಡಾನೆಗಳು ದಾವಣಗೆರೆ ಜಿಲ್ಲೆಯ ಇಬ್ಬರನ್ನು ಬಲಿ ಪಡೆದಿವೆ. ಚಿತ್ರದುರ್ಗ ಕಡೆಯಿಂದ ಭದ್ರಾ ಅಭಯಾರಣ್ಯದತ್ತ ಸಾಗುತ್ತಿದ್ದ ಕಾಡಾನೆಗಳು ಶುಕ್ರವಾರ ದಾರಿ ತಪ್ಪಿ ಜನವಸತಿ ಪ್ರದೇಶಕ್ಕೆ ನುಗ್ಗಿ, ದಾಳಿ ಮಾಡಿದ ಪರಿಣಾಮ ಇಬ್ಬರು ಬಲಿಯಾಗಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

Advertisement

ಹೊಸನಗರದ ಈಶ್ವರ ನಾಯ್ಕ (65), ಹೊಸಹಳ್ಳಿ ರಮೇಶಪ್ಪ (47) ಆನೆ ದಾಳಿಯಿಂದ ಸಾವಿಗೀಡಾದ ದುರ್ದೈವಿಗಳು. ತ್ಯಾವಣಗಿಯ ಗಣೇಶ್‌ ಎಂಬುವವರ ಸ್ಥಿತಿ ಗಂಭೀರವಾಗಿದೆ. ಗುರುವಾರ ಚಿತ್ರದುರ್ಗದ ಕಾತ್ರಾಳು ಕಡೆಯಿಂದ ಭದ್ರಾ ಅಭಯಾರಣ್ಯದತ್ತ ಸಾಗಿದ್ದ ಆನೆಗಳು ದಾರಿ ತಪ್ಪಿ ಸೂಳೆಕೆರೆ(ಶಾಂತಿಸಾಗರ) ಕಡೆಗೆ ಬಂದಿದ್ದರಿಂದ ಈ ಅವಾಂತರ ಸಂಭವಿಸಿದೆ.

ಸೂಳೆಕೆರೆಯಲ್ಲಿದ್ದ ಎರಡೂ ಆನೆಗಳನ್ನು ನೋಡಲೆಂದು ಜನ ಗುಂಪಾಗಿ ಬಂದಿದ್ದರಿಂದ ಬೆದರಿದ ಕಾಡಾನೆಗಳು ಅಲ್ಲಿಂದ ಪ್ರತ್ಯೇಕಗೊಂಡು ದಾಳಿ ನಡೆಸುತ್ತಾ ಸಾಗಿವೆ. ಪ್ರತ್ಯೇಕಗೊಂಡ ಒಂದು ಆನೆ ತ್ಯಾವಣಿಗೆ ಕಡೆ, ಇನ್ನೊಂದು ಆನೆ ಕಣಿವೆಬಿಳಚಿ ಕಡೆ ಸಾಗಿದೆ. ಅರಣ್ಯ ಪ್ರದೇಶ ಹುಡುಕಾಟದಲ್ಲಿದ್ದ ಆನೆಗಳು ಜಮೀನು, ತೋಟಕ್ಕೆ ನುಗ್ಗಿ ದಾಳಿ ಮಾಡಿವೆ. ತ್ಯಾವಣಿಗೆ ಕಡೆ ಸಾಗಿದ್ದ ಆನೆ ಚಿರಡೋಣಿ ಬಳಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್‌ ಎಂಬಾತನ  ಮೇಲೆ ದಾಳಿಮಾಡಿದೆ.

ದಾಳಿಯಿಂದ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿರುವ ಗಣೇಶ್‌, ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಸ್ಥಿತಿ ತೀರಾ ಗಂಭೀರ ಆಗಿದ್ದು, 24 ತಾಸುಗಳ ಒಳಗೆ ಏನೂ ಹೇಳಲಾಗದು. ಸದ್ಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕೃತಕ ಉಸಿರಾಟ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಎನ್‌.ಕೆ. ಕಾಳಪ್ಪನವರ್‌ ತಿಳಿಸಿದ್ದಾರೆ.

ಅಲ್ಲಿಂದ ಹೊಸನಗರ ಕಡೆ ಸಾಗಿದ ಆನೆ ಅಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಈಶ್ವರನಾಯ್ಕನ ಮೇಲೆ ದಾಳಿ ಮಾಡಿದೆ. ದಾಳಿಯಿಂದ  ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತೋಟದಲ್ಲಿದ್ದ ಈಶ್ವರ ನಾಯ್ಕಗೆ ಫೋನ್‌ ಮಾಡಿ ಆನೆ ಬಂದಿರುವ ವಿಷಯ ತಿಳಿಸಿದ್ದಾರೆ. ತಕ್ಷಣ ಕೆಲಸ ಬಿಟ್ಟು ಮನೆ ಕಡೆ ಹೊರಟಿದ್ದಾರೆ. ರಸ್ತೆ ಕಡೆ ಬಂದಾಗ ಅಲ್ಲಿ ಎದುರಾದ ಆನೆ ದಾಳಿ ನಡೆಸಿದಾಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

ಕಣಿವೆ ಬಿಳಚಿ ಕಡೆ ಸಾಗಿದ್ದ ಮತ್ತೂಂದು ಆನೆ ಹೊಸಹಳ್ಳಿ ಸಮೀಪದ ಮೆಕ್ಕೆಜೋಳ ಬೆಳೆದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಎಂ. ರಮೇಶಪ್ಪ ಎಂಬುವರ ಮೇಲೆ ದಾಳಿ ಮಾಡಿದೆ. ಆನೆ ತನ್ನ ದಂತದಿಂದ ಆತನನ್ನ ತಿವಿದು ಘಾಸಿಗೊಳಿಸಿದೆ. ಆನೆಯಿಂದ ತಪ್ಪಿಸಿಕೊಳ್ಳಲು ಆತ ಪ್ರಯತ್ನಿದ್ದಾನೆ. ಆತನ ಮೇಲೆ ಎರಗಿದ ಆನೆ ತುಳಿದು, ಅಲ್ಲಿಂದ ತೆರಳಿದೆ. ತೀವ್ರವಾಗಿ ಗಾಯಗೊಂಡಿದ್ದ ರಮೇಶಪ್ಪನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯಿಂದ ಚೇತರಿಸಿಕೊಳ್ಳದೆ ಆತ ಅಸುನೀಗಿದ್ದಾನೆ.

ಎರಡೂ ಆನೆಗಳು ಸೂಳೆಕೆರೆ ಗುಡ್ಡದ ಅರಣ್ಯ ಪ್ರದೇಶದಲ್ಲಿವೆ. ಡ್ರೋನ್‌ ಕ್ಯಾಮೆರಾ ನೆರವು ಹಾಗೂ ಕೂಬಿಂಗ್‌ ಕಾರ್ಯಾಚರಣೆ ಮೂಲಕ  ಆನೆಗಳ ಶೋಧ ಕಾರ್ಯ ನಡೆದಿದೆ. ಆದಷ್ಟು ಬೇಗ ಅವನ್ನು ಪತ್ತೆಮಾಡಿ, ಭದ್ರಾ ಅಭಯಾರಣ್ಯ ಪ್ರದೇಶಕ್ಕೆ ಅವರನ್ನು ಓಡಿಸಲಾಗುವುದು ಎಂದು ಚನ್ನಗಿರಿ ವಲಯ ಅರಣ್ಯಾಧಿಕಾರಿ ದಿನೇಶ್‌ ತಿಳಿಸಿದ್ದಾರೆ.

ಒಟ್ಟು ಆರು ಬಲಿ
ಆಂಧ್ರಪ್ರದೇಶದ ಗಡಿಭಾಗದಿಂದ ದಾರಿ ತಪ್ಪಿ ಕಳೆದ ಐದು ದಿನದ ಹಿಂದೆ ಮೊಳಕಾಲ್ಮೂರು ಮೂಲಕ ಚಿತ್ರದುರ್ಗ ಜಿಲ್ಲೆಗೆ ಬಂದ ಆನೆಗಳು ಸಾಕಷ್ಟು ದಾಂಧಲೆ ನಡೆಸಿದ್ದವು. ಭದ್ರಾ ಅಭಯಾರಣ್ಯ ಕಡೆ ಸಾಗುತ್ತಿರುವ ಆನೆಗಳು ಇದುವರೆಗೆ ಆಂಧ್ರ ಮೂಲದ ಇಬ್ಬರನ್ನು ಬಲಿ ತೆಗೆದುಕೊಂಡಿದ್ದವು. ಚಿತ್ರದುರ್ಗ ಜಿಲ್ಲೆಯಲ್ಲಿ  ಐದಕ್ಕೂ ಅಧಿಕ ಮಂದಿ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ್ದ ಆನೆಗಳು ಇದೀಗ ಜಿಲ್ಲೆಯ ಇಬ್ಬರು ರೈತರನ್ನು ಬಲಿಪಡೆದಿವೆ.

ಇನ್ನೂ ತಪ್ಪಿಲ್ಲ ಆತಂಕ: ಸದ್ಯ ಆನೆ ಎಲ್ಲಿವೆ ಎಂಬ ಸುಳಿವು ಸಿಕ್ಕಿಲ್ಲ. ಅರಣ್ಯ, ಪೊಲೀಸ್‌ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರೂ ಆನೆಗಳು ಪತ್ತೆಯಾಗಿಲ್ಲ. ಡ್ರೋನ್‌ ಕ್ಯಾಮೆರಾ ಬಳಸಿ ಸಹ ಆನೆ ಸಾಗುತ್ತಿರುವ ಪ್ರದೇಶ ಪತ್ತೆಗೆ ಯತ್ನಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವಂತೆ ಆನೆಗಳು ಬೆದರಿವೆ. ಹೀಗಾಗಿ ಎಲ್ಲೋ ಅವಿತುಕೊಂಡಿವೆ. ರಾತ್ರಿ ವೇಳೆ ಮತ್ತೆ ಪಯಣ ಆರಂಭಿಸಿ, ಜೋಳದಾಳ ಅರಣ್ಯ ಪ್ರದೇಶದ ಕಡೆ ಸಾಗಿದರೆ ಒಳಿತು. ಇಲ್ಲವಾದಲ್ಲಿ ಆತಂಕ ತಪ್ಪಿದ್ದಲ್ಲ ಎಂದಿದ್ದಾರೆ.

ತಪ್ಪಿದ ಅನಾಹುತ: ಸೂಳೆಕೆರೆಯಿಂದ ಧಾವಿಸಿದ ಆನೆಗಳು ತ್ಯಾವಣಿಗೆ ಪ್ರವೇಶಕ್ಕೆ ಅಣಿಯಾಗಿದ್ದವು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು, ಜನರು ಪಟಾಕಿ ಸಿಡಿಸಿ ಆನೆಗಳನ್ನು ಬೆದರಿಸಿ, ತ್ಯಾವಣಿಗೆ ಪ್ರವೇಶಿಸಿದಂತೆ ನೋಡಿಕೊಂಡಿದ್ದಾರೆ. ಒಂದು ವೇಳೆ ಆನೆಗಳು ತ್ಯಾವಣಿಗೆ ಪ್ರವೇಶ ಮಾಡಿದ್ದಾರೆ ಅನೇಕರ ಜೀವ ಬಲಿಯಾಗುವ ಸಾಧ್ಯತೆ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next