ಹುಣಸೂರು: ಒಂಟಿ ಸಲಗದ ದಾಳಿಯಿಂದ ರೈತನೊರ್ವ ಬೈಕಿನಿಂದ ಹಾರಿ ಓಡಿ ಹೋಗಿ ಪ್ರಾಣ ಉಳಿಸಿಕೊಂಡರೂ ಸಲಗ ಆತನ ಬೈಕ್ ಗೆ ಹಾನಿ ಮಾಡಿ ಆಕ್ರೋಶ ಹೊರಹಾಕಿರುವ ಘಟನೆ ನಾಗರಹೊಳೆ ಉದ್ಯಾನದಂಚಿನ ನಾಗಾಪುರ-2 ಬಳಿ ನಡೆದಿದೆ.
ನಾಗರಹೊಳೆ ಮುಖ್ಯ ರಸ್ತೆ ಬಳಿಯ ಭಾರತವಾಡಿ ಗ್ರಾಮದ ರೈತ ಬೀರೇಗೌಡ ಸಲಗನ ದಾಳಿಯಿಂದ ತಪ್ಪಿಸಿಕೊಂಡವರು. ಸಲಗದ ದಾಳಿಗೆ ಬೈಕ್ ಹಾನಿಯಾಗಿದೆ.
ಬುಧವಾರ ರಾತ್ರಿ 10.30ರ ವೇಳೆ ಪಕ್ಕದ ಪೆಂಜಹಳ್ಳಿಯ ಶುಂಠಿ ಹೊಲಕ್ಕೆ ನೀರು ಹಾಕಿ ಊರಿಗೆ ವಾಪಸ್ಸಾಗುತ್ತಿದ್ದ ವೇಳೆ ನಾಗಾಪುರ-2 ಬಳಿ ಸಲಗ ಒಮ್ಮೆಲೆ ಬೀರೇಗೌಡರ ಬೈಕನ್ನು ಅಟ್ಟಿಸಿಕೊಂಡು ಬಂದಿದೆ. ಎಚ್ಚೆತ್ತ ಅವರು ಬೈಕ್‌ನಿಂದ ಹಾರಿ ಹಾಡಿಯೊಳಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಲಗವು ಬೈಕನ್ನು ತನ್ನ ಸೊಂಡಲಿನಿಂದ ಎತ್ತಿ ಬಿಸಾಡಿ, ತುಳಿದು ಹಾನಿಗೊಳಿಸಿದೆ.
ವೀರನಹೊಸಹಳ್ಳಿ ವಲಯದ ಆರ್.ಎಫ್.ಓ. ಗಣರಾಜ್ ಪಟಗಾರ್‌ರಿಗೆ ಮಾಹಿತಿ ನೀಡಿದ ಮೇರೆಗೆ ಡಿ.ಆರ್.ಎಫ್.ಓಗಳಾದ ಚಂದ್ರೇಶ್, ದ್ವಾರಕನಾಥ್ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸಲಗನನ್ನು ಕಾಡಿಗಟ್ಟಿದರು. ನಜ್ಜುಗುಜ್ಜಾಗಿರುವ ಬೈಕ್ ಅರಣ್ಯ ಇಲಾಖೆ ವಶದಲ್ಲಿದೆ.
ಪುಂಡ ಸಲಗನ ಹಾವಳಿ ತಪ್ಪಿಸಿ:
ಈ ಒಂಟಿ ಸಲಗವು ನಿತ್ಯವೂ ಉದ್ಯಾನದಂಚಿನ ರೈಲ್ವೆ ಹಳಿ ತಡೆಗೋಡೆಯನ್ನೇ ಸರಾಗವಾಗಿ ದಾಟಿ ಹೊರಬರುತ್ತಿದ್ದು, ಕಾಟ ಕೊಡುತ್ತಿದೆ. ಈ ಪುಂಡಾನೆಯನ್ನು ಸೆರೆ ಹಿಡಿಯುವಂತೆ ಈ ಭಾಗದ ರೈತರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.