ಬೆಳ್ತಂಗಡಿ: ನೆರಿಯ-ಕಕ್ಕಿಂಜೆ ರಸ್ತೆಯ ಬಯಲು ಬಸ್ತಿಯಲ್ಲಿ ಕಳೆದ ನ. 27ರ ರಾತ್ರಿ ಒಂಟಿ ಸಲಗವು ಕಾರಿಗೆ ಹಾನಿ ಮಾಡಿ ಇಬ್ಬರನ್ನು ಗಾಯಗೊಳಿಸಿದ ಘಟನೆಯ ಬಳಿಕ ಆನೆಯು ಮಿಯಾರು ಅರಣ್ಯವಾಗಿ ಅರಸಿನಮಕ್ಕಿ, ಶಿಶಿಲದಿಂದ ಶಿರಾಡಿ ಘಾಟಿ ಅರಣ್ಯಪ್ರದೇಶದತ್ತ ಸಂಚರಿಸಿ ರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಮೂವರಿಗೆ ತಲಾ 60 ಸಾವಿರ ರೂ. ಹಾಗೂ ವಾಹನ ಜಖಂಗೊಂಡಿರುವುದರಿಂದ 20 ಸಾವಿರ ರೂ. ಪರಿಹಾರ ಅರಣ್ಯ ಇಲಾಖೆಯಿಂದ ಸಿಗಲಿದೆ. ಈ ಹಿನ್ನೆಲೆಯಲ್ಲಿ ಗಾಯಗೊಂಡವರ ಅರ್ಜಿ ಪಡೆದು ಪರಿಹಾರಕ್ಕಾಗಿ ಅರಣ್ಯ ಇಲಾಖೆ ಆನ್‌ಲೈನ್ ನೋಂದಣಿ ಮಾಡಿದೆ ಎಂದು ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ನೆರಿಯ, ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ, ಮುಂಡಾಜೆ, ಕಲ್ಮಂಜ, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಚಿಬಿದ್ರೆ, ಶಿಶಿಲ, ಶಿಬಾಜೆ, ಹತ್ಯಡ್ಕ ಮೊದಲಾದ ಗ್ರಾಮಗಳಲ್ಲಿ ನಿರಂತರ ಕೃಷಿ ಹಾನಿ ಮಾಡುತ್ತಿರುವ ಕಾಡಾನೆಗಳು ಇದೀಗ ಜನ-ವಾಹನಗಳ ಮೇಲು ದಾಳಿ ಮುಂದಾಗಿರುವುದು, ಮನೆ ಪರಿಸರ ಸುತ್ತ ಸುಳಿದಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಬ್ಬರ್ ಟ್ಯಾಪಿಂಗ್ ಸಹಿತ ಮುಂಜಾನೆ ಕೆಲಸಕ್ಕೆ ಸಾಗುವ ಹೈನುಗಾರರು ಹಾಗೂ ರಾತ್ರಿ ಕರ್ತವ್ಯದಿಂದ ಮರಳುವವರು ಭಯ ದಲ್ಲೇ ಸಂಚರಿಸುವಂತಾಗಿದೆ.