Advertisement

ಮುಂಡಾಜೆ ಪರಿಸರದಲ್ಲಿ ಮತ್ತೆ ಆನೆ ದಾಂಧಲೆ

11:39 PM Dec 20, 2022 | Team Udayavani |

ಬೆಳ್ತಂಗಡಿ: ತಾಲೂಕಿನ ಕೃಷಿಕರನ್ನು ಬೆಂಬಿಡದೆ ಕಾಡುತ್ತಿದ್ದ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ಉದ್ದೇಶದಿಂದ ನಾಗರಹೊಳೆಯಿಂದ ಬಂದಿದ್ದ ನುರಿತ ಆನೆ ಕಾವಾಡಿಗರ ತಂಡವು ಹಲವು ದಿನಗಳ ಕಾರ್ಯಾ ಚರಣೆಯ ಬಳಿಕ ಮರಳಿದೆ. ಆದರೆ ಕೃಷಿಕರ ಸಂಕಷ್ಟ ಮಾತ್ರ ನೀಗಿಲ್ಲ. ಕಾರ್ಯಾಚರಣೆ ಯಶಸ್ವಿಯಾಯಿತು ಎಂದುಕೊಳ್ಳುವಷ್ಟರಲ್ಲಿ ಸಮೀಪದ ಮುಂಡಾಜೆ ಗ್ರಾಮದ ಧುಂಬೆಟ್ಟು ಪರಿಸರದ ತೋಟಗಳಲ್ಲಿ ಸೋಮವಾರ ರಾತ್ರಿ ಆನೆಗಳು ದಾಂಧಲೆ ಎಸಗಿವೆ.

Advertisement

ಕಜೆ ವೆಂಕಟೇಶ್ವರ ಭಟ್‌ ಅವರ ತೋಟದ 50 ಅಡಿಕೆ ಗಿಡ, ಅಪಾರ ಪ್ರಮಾಣದ ಬಾಳೆಗಿಡ, ನೀರಾವರಿ ಸ್ಪ್ರಿಂಕ್ಲರ್‌ ಪೈಪ್‌ಲೈನ್‌, ನಿರ್ಮಲಾ ಭಿಡೆ ಅವರ 5 ಅಡಿಕೆ ಗಿಡ, ಬಾಳೆ ಗಿಡ, ಸ್ಪ್ರಿಂಕ್ಲರ್‌, ಪೈಪ್‌ಲೈನ್‌, ಸಚಿನ್‌ ಭಿಡೆ ಅವರ ಕಾರ್ಗಿಲ್‌ ವನದ ಬೇಲಿ, ಗಿಡಗಳು, ತೋಟದ ಅಡಿಕೆ ಗಿಡ, ಬಾಳೆ ಕೃಷಿಗೆ ಭಾರೀ ಪ್ರಮಾಣದಲ್ಲಿ ಹಾನಿ ಉಂಟು ಮಾಡಿವೆ. ಡಿಆರ್‌ಎಫ್‌ಒ ಹರಿಪ್ರಸಾದ್‌ ಹಾಗೂ ಸಿಬಂದಿ ತೋಟಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ದಾಳಿಗೆ ಯತ್ನಿಸಿದ್ದ ಆನೆ
ಚಿಬಿದ್ರೆ ಹಾಗೂ ತೋಟತ್ತಾಡಿ ಗ್ರಾಮಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಸೋಮವಾರ ಸಂಜೆ ಮುಕ್ತಾಯ ಗೊಳಿಸಲಾಗಿದೆ. ತಂಡವು ಎರಡು ಪಾಳಿಗಳಲ್ಲಿ 10 ದಿನಗಳ ಕಾಲ ಕಾರ್ಯಾಚರಣೆ ನಡೆಸಿತ್ತು. ಮೊದಲ ಹಲವು ದಿನಗಳಲ್ಲಿ ತಂಡಕ್ಕೆ ಒಂಟಿ ಸಲಗ ಸತತವಾಗಿ ಕಂಡು ಬಂದಿತ್ತು. ಒಂದು ಬಾರಿ ಕಾರ್ಯಾಚರಣೆ ತಂಡದ ಮೇಲೆ ದಾಳಿಗೂ ಯತ್ನಿಸಿತ್ತು. ಆದರೆ ಕಾರ್ಯಾಚರಣೆ ಬಿಗಿಗೊಳ್ಳುತ್ತಿದ್ದಂತೆ ನಾಲ್ಕು ದಿನಗಳಿಂದ ಸತತವಾಗಿ ಆನೆಗಳು ಕಾಣಿಸಿಕೊಳ್ಳದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

ಡಿಎಫ್‌ಒ ಡಾ| ದಿನೇಶ್‌ ಕುಮಾರ್‌ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ತ್ಯಾಗರಾಜ್‌ ನಿರ್ದೇಶನದಲ್ಲಿ ಡಿಆರ್‌ಎಫ್‌ಒಗಳಾದ ಭವಾನಿ ಶಂಕರ, ರವೀಂದ್ರ ಅಂಕಲಗಿ, ಯತೀಂದ್ರ, ಹರಿಪ್ರಸಾದ್‌, ಗಸ್ತು ಅರಣ್ಯ ರಕ್ಷಕರಾದ ಪಾಂಡುರಂಗ ಕಮತಿ, ಸಂತೋಷ್‌, ಶರತ್‌ ಶೆಟ್ಟಿ, ರವಿ, ಬಾಲಕೃಷ್ಣ, ವಾಸು ಅವರೊಂದಿಗೆ ನಾಗರಹೊಳೆಯ ಆನೆ ಕಾವಾಡಿಗರಾದ ವೆಂಕಟೇಶ, ಓಂಕಾರ್‌, ಗಣೇಶ, ವಿಶ್ವ ಹಾಗೂ ಸ್ಥಳೀಯ ಅನೇಕರು ಭಾಗವಹಿಸಿದ್ದರು.

ಸುಬ್ರಹ್ಮಣ್ಯ ಕಡೆಗೆ ತಂಡ
ಸುಳ್ಯ ಅರಣ್ಯ ಉಪ ವಿಭಾಗದ ಸುಬ್ರಹ್ಮಣ್ಯ ವಲಯದಲ್ಲಿ ಕಾಡಾನೆ ಗಳ ಕಾಟ ಹೆಚ್ಚಾಗಿರುವ ಹಿನ್ನೆಲೆ ಯಲ್ಲಿ ನಾಗರಹೊಳೆಯ ನುರಿತ ಆನೆಕಾವಾಡಿಗರ ತಂಡವು ಸೋಮ ವಾರ ಸಂಜೆ ಸುಬ್ರಹ್ಮಣ್ಯಕ್ಕೆ ಪಯಣಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next