ಒಂದೂರಲ್ಲಿ ಆನೆ ಮತ್ತು ದರ್ಜಿ ಸ್ನೇಹಿತರಾಗಿದ್ದರು. ದಿನವೂ ಬೆಳಗ್ಗೆ ಆನೆ ಸ್ನಾ ಮಾಡಲು ನದಿಗೆ ಹೋಗುತ್ತಿತ್ತು. ನದಿಗೆ ಹೋಗುವ ದಾರಿಯಲ್ಲಿಯೇ ದರ್ಜಿಯ ಅಂಗಡಿಯಿತ್ತು. ಹಾಗಾಗಿ ಪ್ರತಿದಿನ ಬೆಳಗ್ಗೆ ನದಿಗೆ ಹೋಗುವ ಮುನ್ನ ಆನೆ ದರ್ಜಿಯನ್ನು ಕಂಡು ಅವನು ಕೊಡುವ ಬಾಳೆಹಣ್ಣು ಮತ್ತಿತರ ತಿನಿಸುಗಳನ್ನು ತಿಂದು ಮುಂದಕ್ಕೆ ಹೋಗುತ್ತಿತ್ತು. ಜರ್ಜಿ ಆನೆಗೆ ತನ್ನಿಸಲೆಂದೇ ಥರಹೇವಾರಿ ಖಾದ್ಯಗಳನ್ನು ಮಾಡಿಸುತ್ತಿದ್ದನು. ಆನೆಯೂ ಅಷ್ಟೇ ದರ್ಜಿಗೆ ಏನಾದರೂ ಸಹಾಯ ಬೇಕಾದಾಗ ಕೈ ಜೋಡಿಸಲು ಹಿಂದೆ ಮುಂದೆ ನೋಡುತ್ತಿರಲಿಲ್ಲ.
ಒಂದು ದಿನ ದರ್ಜಿಯ ಮನಸ್ಥಿತಿ ಚೆನ್ನಾಗಿರಲಿಲ್ಲ. ಯಾವನೋ ಒಬ್ಬ ಗಿರಾಕಿ ಬೆಳಗ್ಗೆ ಬೆಳಗ್ಗೆ ದರ್ಜಿಯ ಜೊತೆ ಜಗಳವಾಡಿ ಹೋಗಿದ್ದ. ಅದೇ ಸಮಯಕ್ಕೆ ಆನೆ ಆ ದಾರಿಯಲ್ಲಿ ಹಾದು ಎಂದಿನಂತೆ ಸ್ನೇಹಿತ ದರ್ಜಿಯ ಅಂಗಡಿ ಮುಂದೆ ನಿಂತಿತು. ಆದರೆ ಆವತ್ತು ದರ್ಜಿ ಆನೆಗೆ ತಿನ್ನಲು ಏನೂ ಕೊಡಲಿಲ್ಲ. ಆನೆಗೆ ಕಾದು ಕಾದು ಸುಸ್ತಾಯಿತು. ಆದರೂ ದರ್ಜಿ ಕೊಟ್ಟೇ ಕೊಡುವನು ಎಂಬ ಆಸೆಯಲ್ಲಿ ಅಲ್ಲೇ ನಿಂತಿತ್ತು.
ಆನೆಯನ್ನು ನೋಡಿಯೂ ನೋಡದಂತೆ ಮಾಡುತ್ತಿದ್ದ ದರ್ಜಿಗೆ ಕೋಪ ಹತ್ತಿತು. ತನ್ನ ಸಮಸ್ಯೆಗಳಿಗೆಲ್ಲಾ ಆನೆಯೇ ಕಾರಣ ಎಂಬಂತೆ ಕೈಯಲ್ಲಿ ಸೂಜಿ ಹಿಡಿದು ಕೈ ಮುಂದಕ್ಕೆ ಮಾಡಿದ. ಆನೆ ಪಾಪ, ದರ್ಜಿ ಏನೋ ಕೊಡುತ್ತಿದ್ದಾನೆ ಅಂತ ಬಾಯಿ ಹಾಕಿತು. ಸೂಜಿ ಸೊಂಡಿಲಿಗೆ ಚುಚ್ಚಿ ನೋವಿನಿಂದ ಚೀರಿತು. ಅದನ್ನು ಆನೆ ನಿರೀಕ್ಷಿಸಿರಲಿಲ್ಲ.
ನೋವಿನಿಂದ ಆನೆ ನದಿಯ ಕಡೆಗೆ ದಾಪುಗಾಲಿಕ್ಕಿತು. ಇತ್ತ ಆನೆಗೆ ಸೂಜಿಯಿಂದ ಚುಚ್ಚಿದ ದರ್ಜಿ ಕೆಲಸದಲ್ಲಿ ಮಗ್ನನಾದ. ಸ್ವಲ್ಪ ಹೊತ್ತಿನಲ್ಲಿ ನದಿಯಿಂದ ವಾಪಸ್ಸಾದ ಆನೆ ಮತ್ತೆ ಅಂಗಡಿ ಮುಂದೆ ನಿಂತುಕೊಂಡಿತು. ದರ್ಜಿ ಆನೆಯತ್ತ ತಿರುಗಿ ನೋಡುವಷ್ಟರಲ್ಲಿ ಸೊಂಡಿಲಿನಲ್ಲಿ ತುಂಬಿಕೊಂಡು ಬಂದಿದ್ದ ಕೆಸರನ್ನು ಆನೆ ಅವನ ಅಂಗಡಿ ತುಂಬಾ ಚೆಲ್ಲಿತು. ಬಟ್ಟೆಗಳೆಲ್ಲಾ ಕೊಳೆಯಾದವು. ಅಷ್ಟರಲ್ಲಿ ಯಾರದೋ ಮೇಲಿನ ಸಿಟ್ಟನ್ನು ಇನ್ಯಾರದೋ ಮೇಲೆ ತೋರಿಸಿದರೆ ಇದೇ ಗತಿ ಎನ್ನುವುದು ದರ್ಜಿಗೆ ಅರ್ಥವಾಗಿತ್ತು.
ಹವನ