ಕನಕಗಿರಿ: ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಕೂಡ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸದೇ ಇರುವುದರಿಂದ ಯೋಜನೆಗಳು ದಿಕ್ಕು ತಪ್ಪುತ್ತಿವೆ.
ಇದಕ್ಕೆ ತಾಜಾ ಉದಾಹರಣೆಯಂಬಂತೆ ಸಮೀಪದ ಗೌರಿಪುರ, ಸೋಮಸಾಗರ, ಕಲಿಕೇರಿ ಗ್ರಾಮದಲ್ಲಿ ಮೂರು ವರ್ಷಗಳಿಂದ ಪ್ರಾರಂಭವಾಗಿರುವ ಸರ್ಕಾರಿ ಪ್ರೌಢಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸದೇ ಇರುವ ಕಾರಣ ಪ್ರಾಥಮಿಕ ಶಾಲೆಯ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲಿಕೇರಿ ಗ್ರಾಮದ ಪ್ರೌಢಶಾಲೆಯಲ್ಲಿ 9ಮತ್ತು 10ನೇ ತರಗತಿಯಲ್ಲಿ ಒಟ್ಟು 110 ವಿದ್ಯಾರ್ಥಿಗಳಿದ್ದು, ಕೇವಲ ಇಬ್ಬರು ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸೋಮಸಾಗರ ಗ್ರಾಮದ ಪ್ರೌಢಶಾಲೆಯಲ್ಲಿ 9 ಮತ್ತು 10ನೇ ತರಗತಿಯಲ್ಲಿ ಒಟ್ಟು 57 ವಿದ್ಯಾರ್ಥಿಗಳಿದ್ದು, ಯಾವುದೇ ವಿಷಯದ ಶಿಕ್ಷಕರನ್ನು ನೇಮಕ ಮಾಡಿಲ್ಲ. ಇನ್ನು ಗೌರಿಪುರ ಗ್ರಾಮದ ಪ್ರೌಢಶಾಲೆಯಲ್ಲಿ 9 ಮತ್ತು 10ನೇ ತರಗತಿಯಲ್ಲಿ ಒಟ್ಟು 133 ವಿದ್ಯಾರ್ಥಿಗಳಿದ್ದು, ಇಬ್ಬರ ಶಿಕ್ಷಕರನ್ನು ಮಾತ್ರ ನೇಮಕ ಮಾಡಲಾಗಿದೆ. ಇನ್ನು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಅನಿವಾರ್ಯವಾಗಿ ಪ್ರಾಥಮಿಕ ಶಾಲೆಯ ಶಿಕ್ಷಕರೇ ಪಾಠ ಮಾಡುತ್ತಿದ್ದಾರೆ.
ಕಟ್ಟಡ ಕೊರತೆ: ಗೌರಿಪುರ ಮತ್ತು ಕಲಿಕೇರಿ ಗ್ರಾಮದಲ್ಲಿ ಇರುವ ಪ್ರೌಢಶಾಲೆಗೆ ಸ್ವಂತ ಕಟ್ಟಡವಿಲ್ಲದ ಕಾರಣ ಸದ್ಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಗೌರಿಪುರ ಮತ್ತು ಕಲಿಕೇರಿ ಗ್ರಾಮದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿಯನ್ನು ನಿಗದಿ ಮಾಡಿಲ್ಲ. ಇದರಿಂದ ಕಟ್ಟಡ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ.
ಜನಪತ್ರಿನಿಧಿಗಳು ಮೌನ: ಗೌರಿಪುರ, ಸೋಮಸಾಗರ, ಕಲಿಕೇರಿ ಗ್ರಾಮದ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ ಕೂಡ, ಈ ಭಾಗದ ಜನಪತ್ರಿನಿಧಿಗಳು ಮಾತ್ರ ಕೆಡಿಪಿ ಸಭೆಯಲ್ಲಿ ಧ್ವನಿ ಎತ್ತುತ್ತಿಲ್ಲ. ಇದರಿಂದ ಶಿಕ್ಷಕರ ನೇಮಕ ವಿಳಂಬವಾಗುತ್ತಿದೆ. ಶಿಕ್ಷಣದ ಬಗ್ಗೆ ಮಾತನಾಡುವ ಜನಪತ್ರಿನಿಧಿಗಳು ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪಾಲಕರು ಆರೋಪಿಸುತ್ತಿದ್ದಾರೆ.
•ಶರಣಪ್ಪ ಗೋಡಿನಾಳ