Advertisement

ಪ್ರಾಥಮಿಕ, ಪ್ರೌಢ, ಕಾಲೇಜು ತರಗತಿ ಪ್ರಾರಂಭ : ಬಸ್‌ ಪಾಸ್‌ಗಳಿಗೆ ಬೇಡಿಕೆ ಹೆಚ್ಚಳ

11:15 PM Jan 17, 2021 | Team Udayavani |

ಪುತ್ತೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಾ ಗುತ್ತಿರುವ ಪರಿಣಾಮ ರಿಯಾಯಿತಿ ದರದ ಬಸ್‌ ಪಾಸ್‌ ಬೇಡಿಕೆ ಕೂಡ ಹೆಚ್ಚಾಗಿದೆ.

Advertisement

ಕಳೆದ ಹತ್ತು ತಿಂಗಳಿನಿಂದ ಶೈಕ್ಷಣಿಕ ಚಟುವಟಿಕೆಗಳು ಇಲ್ಲದ ಕಾರಣ ಬಸ್‌ ಪಾಸ್‌ ವಿತರಣೆ ಸ್ಥಗಿತವಾಗಿತ್ತು. ವಿದ್ಯಾಗಮ, ಎಸೆಸೆಲ್ಸಿ, ಪಿಯುಸಿ ತರಗತಿಗಳು ಜನವರಿಯಲ್ಲಿ ಪುನಾರರಂಭಗೊಂಡಿರುವ ಹಿನ್ನೆಲೆಯಲ್ಲಿ ಬಸ್‌ ಪಾಸ್‌ಗೂ ಬೇಡಿಕೆ ಕಂಡು ಬಂದಿದೆ.

ಹಳೆ ಬಸ್‌ ಪಾಸ್‌ಗೆ ಕಾಲಾವಕಾಶ :

ಕಳೆದ ವರ್ಷದ ಶೈಕ್ಷಣಿಕ ಅವಧಿ ಯಲ್ಲಿನ ಬಸ್‌ಪಾಸ್‌ ಅವಧಿ ಎಪ್ರಿಲ್‌ ತನಕ ಇತ್ತಾದರೂ, ಕೊವೀಡ್‌ ಕಾರಣದಿಂದ ಮಾರ್ಚ್‌ನಲ್ಲೇ ತರಗತಿ ಗಳು ಮೊಟಕುಗೊಂಡಿತು. ಹೀಗಾಗಿ ಆ ಅವಧಿಯ ಪಾಸ್‌ ಅನ್ನು 2021 ಜ. 31ರೊಳಗೆ ಬಳಸಲು ಸರಕಾರ ಅನುಮತಿ ನೀಡಿದೆ. ಪಾಸ್‌ ಇಲ್ಲದಿದ್ದರೆ ಶುಲ್ಕ ಪಾವತಿಯ ರಶೀದಿ ತೋರಿಸಿ ಪ್ರಯಾಣಿಸಬಹುದು. ಹಾಗಾಗಿ ಸದ್ಯಕ್ಕೆ ಹಳೆ ಬಸ್‌ಪಾಸ್‌ ಬಳಸಬಹುದು. ಫೆ. 1ರಿಂದ ಹೊಸ ಬಸ್‌ ಪಾಸ್‌ ಅನ್ವಯ ಆಗುವ ಕಾರಣ ಪಾಸ್‌ ಪಡೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆ ಕಂಡಿದೆ.

ಹೀಗಿದೆ ದರ :

Advertisement

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಸ್‌ ನೀಡಲಾಗುತ್ತಿದ್ದು, 150 ರೂ. ಪ್ರೊಸೆಸಿಂಗ್‌ ಚಾರ್ಜ್‌ ಪಡೆಯಲಾಗುತ್ತಿದೆ. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೂ ಇದೇ ಮಾನ ದಂಡ ವಿದೆ. ಪ್ರೌಢಶಾಲಾ ಬಾಲಕಿಯರಿಗೆ 550 ರೂ., ಬಾಲಕರಿಗೆ 750 ರೂ., ಕಾಲೇಜು ವಿದ್ಯಾರ್ಥಿಗಳಿಗೆ 1,050 ರೂ., ವೃತ್ತಿಪರ ತರಗತಿಗಳ ವಿದ್ಯಾರ್ಥಿಗಳಿಗೆ 1,550 ರೂ., ಸಂಧ್ಯಾ ಕಾಲೇಜು, ಪಿಎಚ್‌.ಡಿ. ಸಂಶೋಧನ ವಿದ್ಯಾರ್ಥಿಗಳಿಗೆ 1,310 ರೂ. ದರ ನಿಗದಿಪಡಿಸಲಾಗಿದೆ. ಐಟಿಐ ವಿದ್ಯಾರ್ಥಿ ಗಳಿಗೆ 12 ತಿಂಗಳು ಅವಧಿ ಹೊರತುಪಡಿಸಿ ಉಳಿದ ಎಲ್ಲರಿಗೆ 10 ತಿಂಗಳ ಅವಧಿಯ ಪಾಸ್‌ ನೀಡಲಾಗುತ್ತಿದೆ.

ಆನ್‌ಲೈನ್‌ ಅರ್ಜಿ ;

ಬಸ್‌ಪಾಸ್‌ಗಾಗಿ ಸೇವಾ ಸಿಂಧೂ ಪೋರ್ಟಲ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. ಯಾವ ವಿಭಾಗದಲ್ಲಿ ಪಾಸ್‌ ಪಡೆಯಲಾಗುವುದು ಎನ್ನುವ ಆಯ್ಕೆಯನ್ನು ಅಲ್ಲಿ ಮಾಡಬೇಕು. ಅದರ ಆಧಾರದಲ್ಲಿ ಇಲಾಖೆ ಪರಿಶೀಲನೆ ನಡೆಸಿ ಪಾಸ್‌ ನೀಡಲು ಒಪ್ಪಿಗೆ ಸೂಚಿಸುತ್ತದೆ.

ಆಯಾ ವಿದ್ಯಾರ್ಥಿಗಳು ಅಥವಾ ಶಾಲೆಯ ಮೂಲಕ ಬಸ್‌ ನಿಲ್ದಾಣದಲ್ಲಿನ ಕೌಂಟರ್‌ಗಲ್ಲಿ ಶುಲ್ಕ ಪಾವತಿಸಿ ಪಾಸ್‌ ಪಡೆದುಕೊಳ್ಳಬಹುದು.

ಪಾಸ್‌ ವಿತರಣೆ :

ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ವ್ಯಾಪ್ತಿಯ ಮಡಿಕೇರಿ, ಸುಳ್ಯ, ಪುತ್ತೂರು, ಬಿ.ಸಿ.ರೋಡ್‌, ಧರ್ಮಸ್ಥಳ ಡಿಪೋ ವ್ಯಾಪ್ತಿಯಲ್ಲಿ 5,250ಕ್ಕೂ ಅಧಿಕ ಬಸ್‌ ಪಾಸ್‌ ವಿತರಿಸಲಾಗಿದೆ. ಜನವರಿ ಕೊನೆ ವೇಳೆಗೆ ಪಾಸ್‌ ವಿತರಣೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಳೆದ ಶೈಕ್ಷಣಿಕ ಅವಧಿಯಲ್ಲಿ 46 ಸಾವಿರ ಪಾಸ್‌ವಿತರಿಸಲಾಗಿತ್ತು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ದಾಖಲೆಗಳು ಸಮ ರ್ಪಕವಾಗಿದ್ದರೆ ಇಲಾಖೆ ಅನುಮತಿ ನೀಡುತ್ತದೆ. ಬಸ್‌ ನಿಲ್ದಾಣಗಳಲ್ಲಿ ಕೌಂಟರ್‌ ತೆರೆದು ಪಾಸ್‌ ವಿತರಿಸಲಾಗುತ್ತಿದೆ. ಕಳೆದ ವರ್ಷದ ಪಾಸ್‌ ಅವಧಿಯನ್ನು ಜ. 31ರ ತನಕ ವಿಸ್ತರಿಸಲಾಗಿದ್ದು, ಫೆ. 1ರಿಂದ ಹೊಸ ಪಾಸ್‌ ಅನ್ವಯವಾಗಲಿದೆ. -ಜಿ.ಜಯಕರ ಶೆಟ್ಟಿ, ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next