Advertisement

ಚುನಾವಣಾ ವೆಚ್ಚ ವಿಚಾರದಲ್ಲೂ ಮುಸುಕಿನ ಗುದ್ದಾಟ

01:20 AM Dec 04, 2020 | sudhir |

ಬೆಂಗಳೂರು: ಗ್ರಾಮ ಪಂಚಾಯತ್‌ ಚುನಾವಣೆ ವಿಚಾರದಲ್ಲಿ ರಾಜ್ಯ ಸರಕಾರ ಮತ್ತು ಚುನಾವಣಾ ಆಯೋಗದ ನಡುವಿನ ಮುಸುಕಿನ ಗುದ್ದಾಟ ಶಮನವಾದಂತೆ ಕಾಣಿಸುತ್ತಿಲ್ಲ. ಚುನಾವಣಾ ವೇಳಾಪಟ್ಟಿ ಬಿಡುಗಡೆ ವಿಚಾರದಿಂದ ಆರಂಭಗೊಂಡು, ಈಗ ಚುನಾವಣಾ ವೆಚ್ಚದ ವರೆಗೂ ಮುಂದುವರಿದಿದೆ.

Advertisement

ಡಿ. 22 ಮತ್ತು ಡಿ. 27ರಂದು ಎರಡು ಹಂತಗಳಲ್ಲಿ ಗ್ರಾ.ಪಂ. ಚುನಾವಣೆ ನಡೆಯಲಿದೆ. ಕೊರೊನಾ ಕಾರಣದಿಂದಾಗಿ ಈ ಬಾರಿಯ ಚುನಾವಣೆ ಕೊಂಚ ದುಬಾರಿಯೂ ಆಗಿರಲಿದೆ.

ಎಷ್ಟು ಹಣ ಬೇಕು?
ಈಗಿನ ಅಂದಾಜಿನ ಪ್ರಕಾರ ಗ್ರಾ.ಪಂ. ಚುನಾವಣೆಗೆ 200 ಕೋಟಿ ರೂ. ವೆಚ್ಚವಾಗಲಿದೆ. ಮೊದಲಿಗೆ 250 ಕೋಟಿ ರೂ. ಬೇಕು ಎಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಇದನ್ನು ಪರಿಷ್ಕರಿಸಿ 210 ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ. ಈಗ ಸದ್ಯಕ್ಕೆ 65ರಿಂದ 70 ಕೋಟಿ ರೂ. ಬಿಡುಗಡೆ ಮಾಡಿದೆ.

ಅಧಿಕ ವೆಚ್ಚ ಯಾಕೆ ?
ಕೊರೊನಾ ಕಾರಣದಿಂದಾಗಿ ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆಗೆ 35 ಕೋಟಿ ರೂ., ಮಾಸ್ಕ್, ಗ್ಲೌಸ್‌, ಸ್ಯಾನಿಟೈಸರ್‌, ಥರ್ಮಲ್‌ ಸ್ಕಾನರ್‌ ವ್ಯವಸ್ಥೆ ಮಾಡಲು 20 ಕೋಟಿ ರೂ., ಸಾರಿಗೆ ವ್ಯವಸ್ಥೆಗೆ 10 ಕೋಟಿ ರೂ. ಸೇರಿ ಹೆಚ್ಚುವರಿಯಾಗಿ 65 ಕೋಟಿ ರೂ. ಹಣ ಬೇಕಾಗುತ್ತದೆ.

ಕೊರೊನಾ ಕಾರಣ
226 ತಾಲೂಕುಗಳ 5,762 ಗ್ರಾ.ಪಂ.ಗಳ 35,884 ಕ್ಷೇತ್ರಗಳ 92,121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗಿದೆ. ಇದಕ್ಕಾಗಿ ಸಾಮಾನ್ಯ ಪರಿಸ್ಥಿತಿಯಲ್ಲಿ 45,128 ಮತಗಟ್ಟೆಗಳನ್ನು ಆಯೋಗ ಸ್ಥಾಪಿಸಿದೆ. ಸಾಮಾನ್ಯ ಸಂದರ್ಭಗಳಲ್ಲಿ ಚುನಾವಣಾ ಪ್ರಕ್ರಿಯೆಗೆ 2 ಲಕ್ಷ ಚುನಾವಣಾ ಸಿಬಂದಿ ಬೇಕು. ಕೊರೊನಾ ಹಿನ್ನೆಲೆಯಲ್ಲಿ 10 ಸಾವಿರ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಬೇಕು. ಹೆಚ್ಚುವರಿ 50 ಸಾವಿರ ಚುನಾವಣಾ ಸಿಬಂದಿ, 10 ಸಾವಿರ ಪೊಲೀಸ್‌ ಸಿಬಂದಿ, 50 ಸಾವಿರ ಆರೋಗ್ಯ ಕಾರ್ಯಕರ್ತೆಯರ ನಿಯೋಜನೆ ಅಗತ್ಯ. ಇದು ಎಲ್ಲವೂ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ.

Advertisement

ಖರ್ಚು-ಲೆಕ್ಕಾಚಾರ
ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ 5,762 ಗ್ರಾ.ಪಂ.ಗಳ ವ್ಯಾಪ್ತಿಗೆ ಬರುವ 45,128 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಂದು ಮತಗಟ್ಟೆಯ ಅಂದಾಜು ಖರ್ಚು-ವೆಚ್ಚ 35 ಸಾವಿರ ರೂ. ಬರುತ್ತದೆ ಎಂದು ಚುನಾವಣಾ ಆಯೋಗ ಲೆಕ್ಕಾಚಾರ ಹಾಕಿದೆ. ಅದರಂತೆ 45,128 ಮತಗಟ್ಟೆಗಳಿಗೆ ಪ್ರತಿ ಮತಗಟ್ಟೆಗೆ ತಲಾ 35 ಸಾವಿರ ರೂ. ವೆಚ್ಚದಂತೆ ಒಟ್ಟು 160 ಕೋಟಿ ರೂ. ಹಣ ಬೇಕಾಗುತ್ತದೆ. ಕೋವಿಡ್‌ ಹಿನ್ನೆಲೆಯಲ್ಲಿ ಈ ವೆಚ್ಚದಲ್ಲಿ ಇನ್ನೂ ಹೆಚ್ಚಳವಾಗಬಹುದು. ಅದರಂತೆ ಒಟ್ಟಾರೆ ಚುನಾವಣಾ ಪ್ರಕ್ರಿಯೆ ಅಂದಾಜು 200 ಕೋಟಿ ರೂ. ಬೇಕಾಗಬಹುದು ಎಂದು ಆಯೋಗ ಲೆಕ್ಕಚಾರ ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next