Advertisement
ಸುಂದರ ಮನೆಯ ಮೆರಗು ಹೆಚ್ಚಿಸುವಲ್ಲಿ ಅಂಗಳದ ಪಾತ್ರವೂ ಮುಖ್ಯವಾಗುತ್ತದೆ. ಹಿಂದಿನ ಕಾಲದಲ್ಲಿ ಕೃಷಿ ಉತ್ಪನ್ನಗಳನ್ನು ಹರಡಲು, ಒಣ ಹಾಕಲು ಬಳಸಲ್ಪಡುತ್ತಿದ್ದ ಅಂಗಳ ಇಂದಿಗೂ ಕೂಡ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿಲ್ಲ. ಕಿರಿದಾದರೂ ಅಂಗಳ ಹೊಂದಿರಬೇಕು ಎನ್ನುವುದು ಬಹುತೇಕರ ಅಭಿಪ್ರಾಯ. ಇಷ್ಟು ಪ್ರಾಧಾನ್ಯ ಹೊಂದಿರುವ ಅಂಗಳದ ವಿಷಯದಲ್ಲಿ ಒಂದಷ್ಟು ಎಚ್ಚರಿಕೆ ವಹಿಸಿದರೆ ಆಕರ್ಷಕವಾಗಿಸಬಹುದು ಮತ್ತು ಇನ್ನಷ್ಟು ಉಪಯೋಗ ಯೋಗ್ಯವನ್ನಾಗಿಸಬಹುದು.
ಮನೆ ಕಟ್ಟುವಾಗಲೇ ಅಂಗಳ ಹೀಗಿರಬೇಕು ಎನ್ನುವ ಕಲ್ಪನೆ ನಿಮ್ಮಲ್ಲಿರಲಿ. ಜತೆಗೆ ವಾಹನ ನಿಲುಗಡೆಗೆ ಅಂಗಳದ ಬದಿಯಲ್ಲಿ ಸ್ಥಳ ನಿಗದಿಗೊಳಿಸಿ. ಇದು ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯುವಂತಿರಬೇಕು. ಜತೆಗೆ ಓಡಾಡಲು ತೊಂದರೆಯಾಗದಂತೆ ಅಂಗಳದ ಬದಿಯಲ್ಲೇ ಇದರ ಜಾಗ ನಿರ್ಧರಿಸುವುದು ಅವಶ್ಯ. ಜತೆಗೆ ತುಳಸಿಕಟ್ಟೆಗೆ ಸಶಕ್ತ ಜಾಗವನ್ನೂ ಮೊದಲೇ ಅಂತಿಮಗೊಳಿಸಿ. ಉದ್ಯಾನ ನಿರ್ಮಿಸಿ
ಮನೆ ಅಂಗಳಕ್ಕೆ ಸಾಕಷ್ಟು ಜಾಗ ಇದೆ ಎಂದಾದರೆ ಪುಟ್ಟ ಉದ್ಯಾನ ನಿರ್ಮಿಸಬಹುದು. ಹೂವಿನ ಗಿಡ, ಆಲಂಕಾರಿಕ ಸಸ್ಯಗಳ ಜತೆಗೆ ಔಷಧೀಯ ಗಿಡಗಳಾದ ಕಹಿ ಬೇವು, ಕರಿ ಬೇವು, ಸಾಂಬ್ರಾಣಿ, ಅಮೃತಬಳ್ಳಿ ಮುಂತಾದವುಗಳನ್ನು ಬೆಳೆಯಿರಿ. ಜತೆಗೆ ಸಣ್ಣ-ಪುಟ್ಟ ತರಕಾರಿ ಗಿಡಗಳನ್ನೂ ನೆಡಬಹುದು.
Related Articles
Advertisement
ಸ್ಥಳ ಇಲ್ಲವೆಂದರೆ ಚಿಂತೆ ಬೇಡಉದ್ಯಾನ ನಿರ್ಮಿಸುವಷ್ಟು ಅಂಗಳದಲ್ಲಿ ಜಾಗ ಇಲ್ಲ ಎಂದಾದರೆ ಚಿಂತೆ ಬೇಡ. ಕೆಲವು ಸಣ್ಣ-ಪುಟ್ಟ ಗಿಡಗಳನ್ನು ಪಾಟ್‌ಗಳಲ್ಲಿ ನೆಡಬಹುದು. ಜತೆಗೆ ಗೋಣಿ ಚೀಲಗಳಲ್ಲಿ ಮಣ್ಣು ತುಂಬಿ ಬೆಂಡೆ, ಬದನೆ, ಟೊಮೇಟೊ, ಮೆಣಸು ಮುಂತಾದ ತರಕಾರಿಗಳನ್ನು ಬೆಳೆಯಬಹುದು. ಇವನ್ನು ಅಂಗಳದ ಬದಿ ಸಾಲಾಗಿ ಜೋಡಿಸಿದರಾಯಿತು. ಪಾದರಕ್ಷೆ ಒಪ್ಪವಾಗಿ ಜೋಡಿಸಿ
ಅಂಗಳದಲ್ಲಿ ಚಪ್ಪಲಿ, ಶೂ ಎಲ್ಲೆಂದರಲ್ಲಿ ಕಳಚಿಡಬೇಡಿ. ಚಪ್ಪಲಿ ಸ್ಟಾಂಡ್ ಅನ್ನು ಅಳವಡಿಸಬಹುದು. ಅಂಗಳದ ಮೂಲೆ ಯಲ್ಲಿ ಪಾದರಕ್ಷೆ ಇಡುವ ವ್ಯವಸ್ಥೆ ಮಾಡಿ. ಮೆಟ್ಟಿಲುಗಳನ್ನು ಅಂದವಾಗಿಸಿ
ಅಂಗಳದ ಮೆಟ್ಟಿಲುಗಳನ್ನು ಇನ್ನಷ್ಟು ಆಕರ್ಷಕಗೊಳಿಸಲು ಎರಡೂ ಬದಿ ಹೂವಿನ ಪಾಟ್‌ಗಳನ್ನು ಇಡಿ. ಸಣ್ಣ ಗಿಡಗಳಲ್ಲಿ ಹೂವಾಗುವಂತಹ ಅಲಂಕಾರಿಕಾ ಗಿಡಗಳು ನಿಮ್ಮ ಆದ್ಯತೆಯಾಗಿರಲಿ. ಮುಳ್ಳಿನ ಗಿಡಗಳು ಬೇಡ. ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ ಪಾಟ್‌ಗಳಿಗೆ ಹಾಕುವ ನೀರು ಹೊರಗಡೆ ಚೆಲ್ಲದಂತೆ ಎಚ್ಚರವಹಿಸುವುದು ಮತ್ತು ನೀರು ಕಟ್ಟಿ ನಿಲ್ಲದಂತೆ ನೋಡಿಕೊಳ್ಳುವುದು ಅವಶ್ಯ. ಗಮನಿಸಬೇಕಾದ ಅಂಶಗಳು
– ಅಂಗಳಕ್ಕೆ ಇಂಟರ್ ಲಾಕ್ ಅಳವಡಿಸಿದ್ದರೆ ಮಳೆಗಾಲದಲ್ಲಿ ಅದರ ಮಧ್ಯದಲ್ಲಿ ಹುಲ್ಲು-ಗಿಡ ಗಂಟಿಗಳು ಹುಟ್ಟಿಕೊಳ್ಳುತ್ತವೆ. ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.
– ಮಳೆಗಾಲದಲ್ಲಿ ಸಿಮೆಂಟ್ ನೆಲ ದಲ್ಲಿ ಹಾವಸೆ ಬೆಳೆದು ಜಾರುವ ಸ್ಥಿತಿ ನಿರ್ಮಾಣವಾಗುವುದರಿಂದ ಆಗಾಗ ಉಜ್ಜಿ ತೊಳೆಯುವುದು ಒಳಿತು.
– ಅಂಗಳದ ಮೂಲೆಗಳಲ್ಲಿ ಕಸ ಕಡ್ಡಿ ಬಿದ್ದು ನೀರು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಿ.
– ಗಿಡ, ಬಳ್ಳಿ ಮನೆಯೊಳಗೆ ಹಬ್ಬದಂತೆ ಗಮನ ಹರಿಸಿ.
-ಗಾರ್ಡನ್‌ನ ಗಿಡಗಳನ್ನು ನಿಯ ಮಿತವಾಗಿ ಕತ್ತರಿಸಿ ಸುಂದರ ರೂಪ ಕೊಟ್ಟರೆ ಆಕರ್ಷಕವಾಗಿರುತ್ತದೆ.
– ಮಳೆಗಾಲದಲ್ಲಿ ಗಿಡಗಳ ಕೊಂಬೆ ಕತ್ತರಿಸಿದರೆ ಚೆನ್ನಾಗಿ ಚಿಗುರುತ್ತದೆ.
-ವಿದ್ಯುತ್ ತಂತಿಗಳಿಗೆ ಕೊಂಬೆಗಳು ತಾಗದಂತೆ ನೋಡಿಕೊಳ್ಳಿ.
-ಅಂಗಳದಲ್ಲಿ ಬಾವಿ ಇದ್ದರೆ ಕಟ್ಟೆಗೆ ವಿವಿಧ ರೂಪಗಳನ್ನು ಕೊಟ್ಟು ಆಕರ್ಷಕವಾಗಿಸಬಹುದು. -ರಮೇಶ್ ಬಳ್ಳಮೂಲೆ