ಗಂಗಾವತಿ: ತಾಲೂಕಿನ ಕಿಷ್ಕಿಂದಾ ಅಂಜನಾದ್ರಿಯಲ್ಲಿ ಡಿ.4 ಮತ್ತು 5 ರಂದು ಹನುಮಮಾಲಾ ವಿಸರ್ಜನೆಗೆ ಸರಕಾರ ಸಕಲ ಸಿದ್ದತೆ ಮಾಡಿಕೊಂಡಿದ್ದು ಆಗಮಿಸುವ ಹನುಮ ಭಕ್ತರಿಗೆ ಮೂಲಸೌಕರ್ಯಗಳ ಜತೆಗೆ ಸಂಚಾರ ದಟ್ಟಣೆ ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ಮಂಥನ ಸಭಾಂಗಣದಲ್ಲಿ ಹನುಮ ಮಾಲೆ ವಿಸರ್ಜನೆಗೆ ಕೈಗೊಂಡಿರುವ ಪೂರ್ವಸಿದ್ಧತೆಗಳ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಲಹಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯ ಮತ್ತು ಅಂತರರಾಜ್ಯಗಳಿಂದ ಆಗಮಿಸುವ ಹನುಮ ಭಕ್ತರಿಗೆ ಡಿ.ಡಿ.4 ಮತ್ತು 5 ರಂದು ಊಟ ವಸತಿ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ತಾಲೂಕು ಆಡಳಿತ ಪೊಲೀಸ್ ಇಲಾಖೆ ಕುಡಿಯುವ ನೀರಿನ ವಿಭಾಗ ಮತ್ತು ಜೆಸ್ಕಾಂ ಇಲಾಖೆಯವರು ಸೂಕ್ತ ತಯಾರಿ ನಡೆಸಿದ್ದಾರೆ.
ಆನೆಗೊಂದಿ ಉತ್ಸವ ಜಾಗ ಸೇರಿ ರೈತರ ಗದ್ದೆಗಳಲ್ಲಿ ವಾಹನಗಳ ಪಾರ್ಕಿಂಗ್ ಸ್ಥಳ ಗುರುತಿಸಲಾಗಿದೆ. ಕಡೆಬಾಗಿಲು ಕ್ರಾಸ್ ಮತ್ತು ತಿರುಮಲಾಪೂರ ಗ್ರಾಮಗಳ ವರೆಗೆ ಹತ್ತಿರ ಡಿ.೦೫ ರಂದು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂಜನಾದ್ರಿಯ ವರೆಗೆ ತೆರಳಲು ಬಸ್ ಸಂಚಾರ ವನ್ನು ಗಂಗಾವತಿ, ಹೊಸಪೇಟೆ, ಕೊಪ್ಪಳ ದಿಂದ ಮಾಡಲಾಗಿದೆ.
ಕುಡಿಯುವ ನೀರು ವಿದ್ಯುತ್ ನಿರಂತರ ಇರುವಂತೆ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಆನೆಗೊಂದಿ, ಸಾಣಾಪೂರ ಮತ್ತು ಮಲ್ಲಾಪೂರ ಗ್ರಾ.ಪಂ. ಪಿಡಿಗಳು ಸ್ಥಳದಲ್ಲಿಯೇ ಇದ್ದು ಮೂಲಸೌಕರ್ಯ ವಿದ್ಯುತ್ ಹಾಗೂ ಇತರೆ ಸೌಲಭ್ಯಗಳ ಕುರಿತು ಇತರೆ ಇಲಾಖೆಗಳ ಮುಖ್ಯಸ್ಥರ ಜತೆಗೂಡಿ ಕಾರ್ಯ ಮಾಡಬೇಕು. ಕಡೆಬಾಗಿಲು ಸೇತುವೆ, ಚಿಂತಾಮಣಿ, ತಳವಾರ ಘಟ್ಟ, ಪಂಪಾಸರೋವರ, ಋಷಿಮುಖ ಪರ್ವತದ ಬಳಿ ಹನುಮನಹಳ್ಳಿ ಮತ್ತು ವಿರೂಪಾಪೂರ ಗಡ್ಡಿ ಮತ್ತು ದೋಮಾರ ಕುಂಟಿಯಿಂದ ವೇದಪಾಠಶಾಲೆಯ ವರೆಗೆ ತುಂಗಭದ್ರಾ ನದಿ ಮತ್ತು ವಿಜಯನಗರ ಕಾಲುವೆಯಲ್ಲಿ ಸ್ನನ ಮಾಡುವ ಹನುಮಮಾಲಾಧಾರಿಗಳ ಸುರಕ್ಷತೆ ದೃಷ್ಠಿಯಿಂದ ಸ್ನಾನ ಮಾಡುವ ಸ್ಥಳಗಳ ಸ್ವಚ್ಛತೆ ಮತ್ತು ವಿದ್ಯುತ್ ಲೈಟ್‌ಗಳನ್ನು ಜೋಡಣೆ ಮಾಡಬೇಕು. ಜತೆಗೆ ಸ್ನಾನ ಘಟ್ಟಗಳ ಬಳಿ ಸುರಕ್ಷತೆಯ ದೃಷ್ಠಿಯಿಂದ ಪೊಲೀಸ್ ಬಂದೋಬಸ್ತ್ ಮಾಡಬೇಕು. ಗಂಗಾವತಿಯಲ್ಲಿ ಡಿ. 5 ರಂದು ಹನುಮಮಾಲಾಧಾರಿಗಳ ಶೋಭಾಯಾತ್ರೆಗೆ ಪೊಲೀಸ್ ಇಲಾಖೆ ಮತ್ತು ನಗರಸಭೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಭದ್ರೆತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಬೇಕು. ಶರಣಬಸವೇಶ್ವರ ಕ್ಯಾಂಪ್, ಎಪಿಎಂಸಿ, ಶ್ರೀಚನ್ನಬಸವಸ್ವಾಮಿ ಮಠ ಸೇರಿ ನಗರದ ವಿವಿಧಡೆ ಡಿ.
04ರ ಸಂಜೆ ಹನುಮಮಾಲಾಧಾರಿಗಳು ಅಗತ್ಯ ಬಿದ್ದರೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘಸಂಸ್ಥೆಗಳ ಮುಖಂಡರು ಸಂಘ ಪರಿವಾರದ ಮುಖಂಡರು ವಿವಿಧ ಇಲಾಖೆಗಳ ಅಧಿಕಾರಿಗಳು ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ, ಕೆಲೋಜಿ ಸಂತೋಷ, ಸಂಘಪರಿವಾರದ ವಿನಯ್ ಪಾಟೀಲ್, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಪೌರಾಯುಕ್ತ ವಿರೂಪಾಕ್ಷಿ ಮೂರ್ತಿ ಸೇರಿ ಅನೇಕರಿದ್ದರು.